ಅಕ್ಷರ ಸಂತ ಹರೇಕಳ ಹಾಜಬ್ಬ ಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್!

ಅಕ್ಷರ ಸಂತ ಹರೇಕಳ ಹಾಜಬ್ಬ ಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್!

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದವು ಗೌರವ ಡಾಕ್ಟರೇಟ್ ಘೋಷಿಸಿದೆ. ಮಾ.28ರಂದು ಬೆಳಿಗ್ಗೆ 11ಕ್ಕೆ ಮಂಗಳ ಸಭಾಂಗಣದಲ್ಲಿ ನಡೆಯುವ ವಿವಿಯ 44ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಭಾಗವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ. ಪಿ.ಎಲ್.ಧರ್ಮ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್​ ಹೊಡೆಯೋವ ಆಟ ಅಲ್ಲ. ಸಾವಿಗೆ ಎದೆಯೊಡ್ಡೋ ಆಟ! – ಪೆದ್ದಿ ಟೀಸರ್‌ ರಿಲೀಸ್!

ಇನ್ನು ಇತ್ತೀಚೆಗೆ ನಿಧನರಾದ ಯಕ್ಷಗಾನ ದಿಗ್ಗಜ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ), ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದವು ಗೌರವ ಡಾಕ್ಟರೇಟ್ ಘೋಷಿಸಿದೆ.

ಹರೇಕಳ ಹಾಜಬ್ಬ ಯಾರು?

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾದ ಹರೇಕಳ ಹಾಜಬ್ಬ ರಸ್ತೆಯ ಬದಿಯಲ್ಲಿ ನಿಂತು ಹಣ್ಣುಗಳನ್ನು ಮಾರಿದ ಹಣದಿಂದ ತಮ್ಮೂರಲ್ಲಿ ಶಾಲೆ ಕಟ್ಟಿದ್ದಾರೆ. 64 ವರ್ಷದ ಹಾಜಬ್ಬ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಆದರೂ ಈಗ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಅಕ್ಷರ ಸಂತ ಎನ್ನಲಾಗುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2020ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ಮಂಗಳೂರಿನ ಹರೇಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ಶಿಕ್ಷಣ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಶಿಕ್ಷಣ, ಭಾಷೆಗಳು ಗೊತ್ತಿಲ್ಲದಿದ್ದರೆ ಸಮಾಜದಲ್ಲಿ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಅನುಭವಕ್ಕೆ ಬಂದಿತು. ಹೀಗಾಗಿ, ತನ್ನಂತೆ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ನಿರ್ಧರಿಸಿದ ಅವರು ಕಿತ್ತಳೆ ಮಾರಿದ ಹಣದಿಂದ ಬಡ ಮಕ್ಕಳಿಗಾಗಿ ಊರಿನಲ್ಲಿ ಶಾಲೆ ಕಟ್ಟಿಸಿದರು.

ದುಬಾರಿ ಹಣ ಕೊಟ್ಟು ಶಿಕ್ಷಣ ಕಲಿಯಲು ಸಾಧ್ಯವಾಗದ ಬಡ ಮಕ್ಕಳಿಗೆಂದು ತಮ್ಮೂರಲ್ಲಿ ಶಾಲೆಯೊಂದನ್ನು ಆರಂಭಿಸಬೇಕೆಂದು ಹಾಜಬ್ಬ ನಿರ್ಧರಿಸಿದರು. ಅದಕ್ಕಾಗಿ ಹಾಜಬ್ಬ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಬಿಇಓ ಕಚೇರಿಗೆ ಅಲೆದಾಡಿದರು. ಹಣ್ಣಿನ ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಓಡಾಡಿದ ಹಾಜಬ್ಬನವರಿಗೆ ಶಾಲೆಯನ್ನು ಆರಂಭಿಸಲು ಅನುಮತಿ ದೊರೆಯಲಿಲ್ಲ, ಹಣ್ಣಿನ ಮಾರಾಟದಿಂದ ಬರುತ್ತಿದ್ದ ಹಣವೂ ಇಲ್ಲದಂತಾಯಿತು. ಆದರೂ ಧೃತಿಗೆಡದ ಹಾಜಬ್ಬನವರ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು, 1999ರ ಜೂ.6ರಂದು ನ್ಯೂಪಡ್ಪು ಗ್ರಾಮದ ಮದರಸಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದ್ದರು.

ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂ. ಹಿಡಿದುಕೊಂಡು ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. ಬಳಿಕ 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಆಗ ಶಾಸಕರಾಗಿದ್ದ ಯು.ಟಿ. ಖಾದರ್‌ ಆ ಊರಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಹೀಗೆ ಹರೇಕಳದಲ್ಲಿ ಶಾಲೆಯೊಂದು ತಲೆ ಎತ್ತಿತು.

ಇದಾದ ಬಳಿಕ ಹಾಜಬ್ಬನವರ ಬಗ್ಗೆ ಎಲ್ಲ ಕಡೆ ಚರ್ಚೆಯಾಗತೊಡಗಿತು. ಹಾಜಬ್ಬನವರ ಪ್ರಯತ್ನಕ್ಕೆ ಕೈಜೋಡಿಸಲು ಅನೇಕರು ಮುಂದೆ ಬಂದರು. ಹಲವು ಸಂಘ-ಸಂಸ್ಥೆಗಳು ಆ ಶಾಲಾ ಕಟ್ಟಡಕ್ಕೆ ಹಣ ಸಹಾಯವನ್ನು ಕೂಡ ಮಾಡಿದವು. ಮಾಧ್ಯಮಗಳಲ್ಲೂ ಹಾಜಬ್ಬನವರ ಹೆಸರು ಕಾಣಲಾರಂಭಿಸಿತು. ಹಣ್ಣು ಮಾರುತ್ತಲೇ ಶಾಲೆಯೊಂದನ್ನು ಕಟ್ಟಿದ ಹಾಜಬ್ಬನವರಿಗೆ ಪದ್ಮಶ್ರೀ ಪ್ರಶಸ್ತಿಯೂ ಒಲಿದು ಬಂದಿತು.

ಇದುವರೆಗೂ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವ ಹರೇಕಳ ಹಾಜಬ್ಬ ಇಂದಿಗೂ ಕಿತ್ತಳೆ ಹಣ್ಣು ಮಾರುತ್ತಾರೆ. ಹಳೆಯದೊಂದು ಪಂಚೆ ಸುತ್ತಿಕೊಂಡು, ಕಿತ್ತಳೆ ಹಣ್ಣುಗಳನ್ನು ಮಾರುತ್ತಾ ಮಂಗಳೂರಿನ ರಸ್ತೆಗಳಲ್ಲಿ ಓಡಾಡುವ ಹಾಜಬ್ಬ ಇನ್ನೂ ತಮ್ಮ ವೃತ್ತಿಯನ್ನು ಬಿಟ್ಟಿಲ್ಲ. ಅಕ್ಷರ ಸಂತ ಎಂದೇ ಕರೆಯಲ್ಪಡುವ ಹಾಜಬ್ಬನವರ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕದಲ್ಲಿ ಪಾಠವೂ ಸೇರ್ಪಡೆಯಾಗಿದೆ. ತಾವು ಶಿಕ್ಷಣ ಕಲಿಯದಿದ್ದರೂ ನೂರಾರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹಾಜಬ್ಬ ಎಲ್ಲೆಡೆ ಮನೆಮಾತಾಗಿದ್ದಾರೆ.

Shwetha M