ಕೇವಲ 5 ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ – ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ದಕ್ಷ ಅಧಿಕಾರಿ ಟ್ರಾನ್ಸ್‌ಫರ್

ಕೇವಲ 5 ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ – ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ದಕ್ಷ ಅಧಿಕಾರಿ ಟ್ರಾನ್ಸ್‌ಫರ್

ಕೇವಲ ಐದೇ ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್‍ದೀಪ್ ಜೈನ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ನೂತನ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅನೂಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಡ್ರಗ್ಸ್ ಫ್ರೀ ಸಿಟಿ ಎಂಬ ಟಾಸ್ಕ್ ಹೊಂದಿದ್ದರು.

ಇದನ್ನೂ ಓದಿ:  ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ

ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಕುಲ್ ದೀಪ್ ಕುಮಾರ್ ಜೈನ್ ಅವರು ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಮಟ್ಕಾ, ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಿದ್ದರು. ಇದೀಗ ಅವರ ವರ್ಗಾವಣೆ ಆದೇಶದಿಂದ ಡ್ರಗ್ಸ್ ಮಾಫಿಯಾ ಹಿಂದೆ ಬಿದ್ದಿದ್ದೇ ಮುಳುವಾಯಿತಾ ಎಂಬ ಪ್ರಶ್ನೆ ಎದ್ದಿದೆ. ಕುಲದೀಪ್ ಅವರಿಗೆ ಇನ್ನೂ ಹುದ್ದೆ ತೋರಿಸಿದೆ ವರ್ಗಾವಣೆ ಮಾಡಲಾಗಿದೆ. ಕುಲದೀಪ್ ಅವರು ಖಡಕ್ ಆಫೀಸರ್ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದರು. ಅದೇ ರೀತಿ ಸಾರಿಗೆ ನಿಯಮ ಮೀರುವವರ ವಿರುದ್ಧವೂ ಚಾಟಿ ಬೀಸಿ ಸಾಕಷ್ಟು ದಂಡ ವಿಧಿಸಿದ್ದರು‌. ಜೊತೆಗೆ ಮಟ್ಕಾ ದಂಧೆ, ಸೈಬರ್ ಕ್ರೈಮ್ ವಿರುದ್ಧವೂ ಕ್ರಮ ಕೈಗೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಡ್ರಗ್ಸ್ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಂಗಳೂರು ನಾಗರಿಕರ ಪಾಲಿಗೆ ಯಮದೂತನಂತೆ ಕಾಡಿದ್ದ ಖಾಸಗಿ ಬಸ್‌ಗಳನ್ನು ಹತೋಟಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅಲ್ಲದೆ ಯಾವುದೇ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಬೇಧಿಸಿದ ದಕ್ಷ ಅಧಿಕಾರಿಯಾಗಿದ್ದರು.

ಮಂಗಳೂರಿನ ನೂತನ ಆಯುಕ್ತರಾಗಿರುವ ಅನುಪಮ್ ಅಗರ್ವಾಲ್ 2008-ಬ್ಯಾಚ್ IPS ಅಧಿಕಾರಿಯಾಗಿದ್ದು ಮೂಲತಃ ರಾಜಸ್ಥಾನದ ಜೋಧ್‌ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿ, ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕುಲದೀಪ್ ಕುಮಾರ್ ಆರ್ ಜೈನ್ ಅವರು ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

suddiyaana