ಕರಾವಳಿಯಲ್ಲಿ ಹೆಚ್ಚಿದ ಡ್ರಗ್ಸ್ ಘಾಟು – ವೈದ್ಯಲೋಕವನ್ನೇ ಸುತ್ತಿಕೊಳ್ತಿದೆ ನಶೆಜಾಲ..!

ಕರಾವಳಿಯಲ್ಲಿ ಹೆಚ್ಚಿದ ಡ್ರಗ್ಸ್ ಘಾಟು – ವೈದ್ಯಲೋಕವನ್ನೇ ಸುತ್ತಿಕೊಳ್ತಿದೆ ನಶೆಜಾಲ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಗಾಂಜಾ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಜನರ ಜೀವ ಕಾಪಾಡಬೇಕಿದ್ದ ವೈದ್ಯರೇ ನಶೆಲೋಕಕ್ಕೆ ಜಾರಿರೋ ಆತಂಕಕಾರಿ ವಿಷಯ ಹೊರ ಬಿದ್ದಿದೆ. ವೈದ್ಯರೂ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳನ್ನ ಪೊಲೀಸರು ಬಂಧಿಸಿದ್ದು ಮತ್ತಷ್ಟು ಜನ ಸಿಕ್ಕಿಬೀಳುವ ಚಾನ್ಸ್ ಕೂಡ ಇದೆ.

ಇದನ್ನೂ ಓದಿ : ಮಹಿಳೆಯರ ‘ಮತ’ ಗೆಲ್ಲಲು ಸಿಎಂ ಹೊಸ ಪ್ಲ್ಯಾನ್ – ಬಜೆಟ್​ನಲ್ಲಿ ಸಿಗುತ್ತಾ ‘ಗೃಹಿಣಿ ಶಕ್ತಿ’..?

ಡ್ರಗ್ಸ್, ಗಾಂಜಾ ವಿಚಾರದಲ್ಲಿ ದಕ್ಷಿಣ ಕನ್ನಡ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವೈದ್ಯರು ಹಾಗೂ 7 ವೈದ್ಯಕೀಯ ವಿದ್ಯಾರ್ಥಿಗಳನ್ನ ಅರೆಸ್ಟ್ ಮಾಡಲಾಗಿದೆ. ನಿನ್ನೆಯಷ್ಟೇ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಇಬ್ಬರು ವೈದ್ಯರು ಸೇರಿದಂತೆ ಒಂಬತ್ತು ಜನರನ್ನ ಅಮಾನತು ಮಾಡಿತ್ತು. ಈಗ ಈ ಪ್ರಕರಣದಲ್ಲಿ ಮತ್ತೆ 9 ಮಂದಿ ಅರೆಸ್ಟ್ ಆಗಿದ್ದಾರೆ.

ದುರ್ಗಾ ಸಂಜೀವಿನಿ ಆಸ್ಪತ್ರೆಯ ಡಾ.ಸುಧೀಂದ್ರ(34), ಶ್ರೀನಿವಾಸ ಆಸ್ಪತ್ರೆಯ ಡಾ‌.ಸಿದ್ಧಾರ್ಥ್​ ಪವಸ್ಕರ್(29) ಎಂಬ ಇಬ್ಬರು ವೈದ್ಯರು ಅರೆಸ್ಟ್ ಆಗಿದ್ದಾರೆ. ಹಾಗೂ ಕೆಎಂಸಿ ಮೆಡಿಕಲ್ ಕಾಲೇಜಿನ ಉತ್ತರ ಪ್ರದೇಶದ ಡಾ.ವಿದುಶ್ ಕುಮಾರ್(27), ಡಾ.ಆಯೇಷಾ ಮಹಮ್ಮದ್(23), ತೆಲಂಗಾಣದ ಡಾ.ಪ್ರಣಯ್ ನಟರಾಜ್(24),ಡಾ.ಚೈತನ್ಯಾ(23), ಉತ್ತರ ಪ್ರದೇಶದ ಡಾ.ಇಶ್ ಮಿದ್ದ(24), ದೆಹಲಿಯ ಶರಣ್ಯ(23), ಕೇರಳದ ಡಾ.ಸೂರ್ಯಜಿತ್ ದೇವ್(20) ಬಂಧಿತ ವಿದ್ಯಾರ್ಥಿಗಳು. ಸದ್ಯ ಈಗ ಗಾಂಜಾ ಕೇಸ್​​ನಲ್ಲಿ ಈವರೆಗೂ 24 ಜನರನ್ನು ಬಂಧಿಸಲಾಗಿದೆ.

ನಶೆಜಾಲದ ಹಿಂದೆ ಬಿದ್ದಿದ್ದ ಮಂಗಳೂರು ಪೊಲೀಸರು ಜನವರಿ‌ 11 ರಂದು ಹೈ ಪ್ರೊಫೈಲ್ ಡ್ರಗ್ಸ್ ಕೇಸ್​​ನ ರಿವೀಲ್ ಮಾಡಿದ್ದರು. ಈ ವೇಳೆ ಇಬ್ಬರು ವೈದ್ಯರು ಸೇರಿದಂತೆ ಹತ್ತಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಇವರೆಲ್ಲ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನವರಾಗಿದ್ದು ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇದಾದ ನಂತರ ನಿನ್ನೆ ಈ ಜಾಲದಲ್ಲಿದ್ದ ಕೆಎಂಸಿ ಮೆಡಿಕಲ್ ಕಾಲೇಜಿನ ಇಬ್ಬರು ವೈದ್ಯರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಗೇಟ್ ಪಾಸ್ ನೀಡಿತ್ತು. ಅವರ ಗುತ್ತಿಗೆಯನ್ನು ರದ್ದುಪಡಿಸಿ ಅವರನ್ನು ಟರ್ಮಿನೇಟ್ ಮಾಡಲಾಗಿದೆ. ಜೊತೆಗೆ ಇದೇ ಕೆಎಂಸಿ ಕಾಲೇಜಿನ ಏಳು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಕಾಲೇಜಿನ‌ ಆಡಳಿತ ಮಂಡಳಿ ಈ ಕ್ರಮಕೈಗೊಂಡು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ಈ ಶಿಸ್ತುಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವತಃ ಕೆಎಂಸಿ‌ ವೈದ್ಯಕೀಯ ಕಾಲೇಜಿನ ಡೀನ್ ಉನ್ನಿಕೃಷ್ಣನ್ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್ ಶಶಿಕುಮಾರ್ ಅವರಿಗೆ ಮಾಹಿತಿ ನೀಡಿದ್ರು. ಇಂತಹ ಮಾದಕ ಜಾಲದಲ್ಲಿ ಭಾಗಿಯಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಪಾರದರ್ಶಕ ತನಿಖೆಗೆಗಾಗಿ ಅವರನ್ನು ಕಾಲೇಜಿನಿಂದ ಕಳಿಸಲಾಗಿದೆ. ತನಿಖೆಗೆ ಬೇಕಾದ ಎಲ್ಲಾ ಸಹಕಾರವನ್ನು ಕೆಎಂಸಿ ಆಸ್ಪತ್ರೆಯ ಕಡೆಯಿಂದ ನೀಡಲಾಗುವುದು ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ. ಕಾಲೇಜು‌ ಆಡಳಿತ‌ ಮಂಡಳಿಯ ಈ ನಿರ್ಧಾರ ಪೊಲೀಸರ‌ ಮುಂದಿನ ತನಿಖೆಗೂ ಸಹಕಾರಿಯಾಗಲಿದೆ.

suddiyaana