ಮಂಗಳೂರು ಸ್ಫೋಟ ಪ್ರಕರಣ- ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ, ಪರಿಶೀಲನೆ

ಮಂಗಳೂರು ಸ್ಫೋಟ ಪ್ರಕರಣ- ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ, ಪರಿಶೀಲನೆ

 ಮಂಗಳೂರು: ನಾಗುರಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಪೋಟದ ಬಗ್ಗೆ ಹಾಗೂ ನಂತರದ ತನಿಖೆಯ ಬೆಳವಣಿಗೆಗಳ ಬಗ್ಗೆ ಮಂಗಳೂರು ಕಮಿಷನರೇಟರ್ ನ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಸ್ಟೋಟದಿಂದ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಆರೋಪಿ ಮಹಮ್ಮದ್ ಶಾರಿಕ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು  ಭೇಟಿ ಮಾಡಿದರು.

ಇದನ್ನೂ ಓದಿ: ಸ್ಫೋಟ ಪ್ರಕರಣ : ಮಂಗಳೂರಿಗೆ ಶಾರಿಕ್ ಜೊತೆ ಬಂದಿದ್ದಾನಾ ಮತ್ತೊಬ್ಬ ಉಗ್ರ? -ಸಿಸಿ ಟಿವಿ ದೃಶ್ಯ ವೈರಲ್

ಬಳಿಕ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ  ಸಭೆ ನಡೆಸಿ, ಬಳಿಕ ಮಾತನಾಡಿದ ಅವರು, ಕುಕ್ಕರ್​ನಲ್ಲಿದ್ದ ಬಾಂಬ್ ಕೇವಲ ಹೊಗೆಯನ್ನಷ್ಟೇ ಉಗುಳಿದೆ. ಒಂದು ವೇಳೆ ಬಾಂಬ್ ಸ್ಫೋಟಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇನ್ನೆರಡು ದಿನಗಳಲ್ಲಿ ಕೇಂದ್ರ ತಂಡವು ಈ ಪ್ರಕರಣದ ತನಿಖೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ತೀರ್ಥಹಳ್ಳಿ ಒಂದು ಸುಸಂಸ್ಕೃತ ಊರು. ಅಲ್ಲಿಯವರಿಗೆ ಕರಾವಳಿ, ಕೇರಳದವರೊಂದಿಗೆ ಸಂಪರ್ಕ ದೊರೆತು ಭಯೋತ್ಪಾದಕರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕುಕ್ಕರ್​ ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ಥಳೀಯವಾಗಿ ಸಿಗುವ ಸ್ಫೋಟಕ ವಸ್ತುಗಳನ್ನೇ ಬಳಸಿಕೊಂಡು ಬಾಂಬ್ ತಯಾರಿಸಲಾಗಿದೆ. ಈ ಬಗ್ಗೆ ರಾಜ್ಯದ ಪೊಲೀಸರು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಜ್ಯ ಪೊಲೀಸರ ಜೊತೆಗೆ ರಾಷ್ಟ್ರೀಯ ತನಿಖಾ ದಳದ (ಎನ್​ಐಎ) ಅಧಿಕಾರಿಗಳೂ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಹಿಂದಿರುವ ಶಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಅವರು ತಿಳಿಸಿದರು.

 ಶಾರಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಹೆಚ್ಚಿನ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಸಾಕ್ಷ್ಯ, ಹಳೆ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ ಎಂದು ತಿಳಿದುಬಂದಿದೆ

ಈ ವೇಳೆ ಡಿಜಿಪಿ ಮತ್ತು ಐಜಿಸಿ ಪ್ರವೀಣ್ ಸೂದ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಪಶ್ಚಿಮ ವಲಯ ಐಜಿಸಿ ಚಂದ್ರ ಗುಪ್ತ, ಡಿಸಿಪಿ  ಅಂಶು ಕುಮಾರ್ ಇದ್ದರು.

suddiyaana