ಮಂಗಳೂರು ಸ್ಫೋಟ ಪ್ರಕರಣ – ಶಂಕಿತನ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದೇನು?
ಶಂಕಿತನಿಗೆ ಐಸಿಸ್ ಸಂಘಟನೆಯೇ ಸ್ಪೂರ್ತಿ?
ಮಂಗಳೂರು: ನಾಗುರಿಯಲ್ಲಿ ಸಂಭವಿಸಿದ್ದ ಆಟೋರಿಕ್ಷಾ ಸ್ಫೋಟ ಪ್ರಕರಣದ ಶಂಕಿತ ಶಾರಿಕ್ ಗೆ ಜಾಗತಿಕ ಜಾಲದ ಉಗ್ರ ಸಂಘಟನೆಯೇ ಸ್ಫೂರ್ತಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಹೊಂದಿರುವ ಒಂದು ಉಗ್ರ ಸಂಘಟನೆಯ ಪ್ರಭಾವ ಹಾಗೂ ಸ್ಪೂರ್ತಿ ಈ ಪ್ರಕರಣಕ್ಕಿದೆ, ಅವರ ಜೊತೆ ಅರಾಫತ್ ಅಲಿ ಎಂಬಾತನಿದ್ದ. ಅಲ್ಲದೇ, ಅಬ್ದುಲ್ಲಾ ತಾಹಾ ಎಂಬ ಉಗ್ರನಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು ರಿಕ್ಷಾ ಸ್ಫೋಟ ಪ್ರಕರಣ- ಮನೆಯ ಹಿಂಭಾಗದಲ್ಲೇ ರೂಮ್ ಬಾಡಿಗೆ ಪಡೆದಿದ್ದ ಆರೋಪಿ
ಸಾರಿಕ್ ವಾಸವಿದ್ದ ಮನೆಯಲ್ಲಿ ತನಿಖೆ ನಡೆಸುವ ವೇಳೆ ಸಲ್ಪೆಕ್ಸ್, ಸಲ್ಫರ್ ಪೌಡರ್, ನಟ್ ಬೋಲ್ಟ್ ಗಳು, ಸರ್ಕ್ಯುಟ್ ಮುಂತಾದ ಸ್ಫೋಟಕ ವಸ್ತುಗಳು ಲಭಿಸಿದೆ. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ನಕಲಿ ಗುರುತಿನ ಚೀಟಿ ಪಡೆದು ಕೊಯಮತ್ತೂರಲ್ಲೂ ವಾಸವಿದ್ದ. ಈ ಅವಘಡದಲ್ಲಿ ಚಾಲಕ ಪುರುಷೋತ್ತಮ್ ಗೆ ಸುಟ್ಟ ಗಾಯಗಳಾಗಿದ್ದು, ಶಾರಿಕ್ ಗೆ ಶೇ.40 ರಷ್ಟು ಸುಟ್ಟ ಗಾಯಗಳಾಗಿದ್ದು, ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದರು.
ಈ ಕೃತ್ಯ ಎಸಗುವ ಮುನ್ನ ಭಯೋತ್ಪಾದಕ ಬರಹಗಳನ್ನು ಗೋಡೆ ಮೇಲೆ ಗೀಚಿದ್ದ ಪ್ರಕರಣದಲ್ಲಿ 2020 ರಲ್ಲಿ ಶಾರಿಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗಸ್ಟ್ ನಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಕೋಮು ಉದ್ವಿಗ್ನತೆ ಪ್ರಕರಣದಲ್ಲೂ ಶಾರಿಕ್ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಾದ ಮಾಜ್ ಹಾಗೂ ಸಯೀದ್ ಯಾಸೀನ್ ನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು.
ಶಾರಿಕ್ ಸೆಪ್ಟೆಂಬರ್ ನಲ್ಲಿ ನಡೆದ ದಾಳಿಯ ವೇಳೆ ಪರಾರಿಯಾಗಿದ್ದ. ನಾಗುರಿಯಲ್ಲಿ ನ.19 ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಶಾರಿಕ್ ಗೆ ಬಾಂಬ್ ತಯಾರಿಸಲು ತರಬೇತಿ ನೀಡಲಾಗಿತ್ತೇ? ಅಥವಾ ಅದನ್ನು ಆತ ಸ್ವಯಂ ಕಲಿತುಕೊಂಡನೇ? ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ ಎಂದರು.