ಗರ್ಭಿಣಿಗೆ ಮಾತ್ರೆ ಕೊಟ್ಟು ಹೆರಿಗೆಯಂತೆಯೇ ಭ್ರೂಣ ಹೊರ ತೆಗೆಯುತ್ತಿದ್ದರು – ಆಲೆಮನೆ ಆಪರೇಷನ್ ಬಗ್ಗೆ ಕೇಳಿ ಅಧಿಕಾರಿಗಳೇ ಶಾಕ್
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಕೇಸ್ ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಹಲವರ ಹೆಸರುಗಳು ಥಳಕು ಹಾಕಿಕೊಳ್ಳುತ್ತಿವೆ. ಈಗಾಗಲೇ ಹತ್ಯೆಯಲ್ಲಿ ಶಾಮೀಲಾಗಿರುವ ಆರೋಪ ಹೊತ್ತಿದ್ದ ಇಬ್ಬರು ವೈದ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಭಯಾನಕ ಪ್ರಕರಣವನ್ನು ಪತ್ತೆ ಹಚ್ಚಿದ್ದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ನಡುವೆ ನಡೆದ ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟ ಮಾಹಿತಿಯೇ ಶಾಕ್ ಆಗುವಂತೆ ಮಾಡಿದೆ. ಮಂಡ್ಯದ ಆಲೆ ಮನೆಯೊಂದರಲ್ಲಿ ಸ್ಕ್ರಾನಿಂಗ್ ಮಷಿನ್ ಇಟ್ಟುಕೊಂಡಿದ್ದ ಆರೋಪಿಗಳು ಗರ್ಭಿಣಿಯರನ್ನು ಸಂಪರ್ಕಿಸಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಪುಸಲಾಯಿಸುತ್ತಿದ್ದರು. ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಹೆಣ್ಣು ಭ್ರೂಣ ಇರುವುದು ಗೊತ್ತಾಗಿ ಪೋಷಕರು ಅದನ್ನು ತೆಗೆಸಲು ನಿರ್ಧರಿಸಿದರೆ ಅಬಾರ್ಷನ್ ಮಾಡುತ್ತಿದ್ದರು.
ಇದನ್ನೂ ಓದಿ : ಭ್ರೂಣ ಹತ್ಯೆ ಪ್ರಕರಣ – ಕೊಡಗಿನಲ್ಲಿ ವೈದ್ಯ ಆತ್ಮಹತ್ಯೆ, ಬೆಂಗಳೂರಿನಲ್ಲೂ ಮತ್ತೊಬ್ಬ ವೈದ್ಯ ನೇಣುಬಿಗಿದುಕೊಂಡು ಸತ್ತಿದ್ದು ಯಾಕೆ?
ಸಾಮಾನ್ಯವಾಗಿ 14 ರಿಂದ 18 ವಾರಗಳ ಭ್ರೂಣದಲ್ಲಿ ಲಿಂಗ ಪತ್ತೆಯಾಗತ್ತದೆ. ಸ್ಕ್ಯಾನಿಂಗ್ ವೇಳೆ ಲಿಂಗ ಪತ್ತೆಯಾದ ನಂತರ ಭ್ರೂಣ ಹತ್ಯೆ ಮಾಡಲಾಗುತ್ತಿತ್ತು. ಆರು ತಿಂಗಳ ಭ್ರೂಣಗಳನ್ನು ಹತ್ಯೆ ಮಾಡಿರುವ ಅರೋಪಿಗಳು, ಆರಂಭದಲ್ಲಿ ಗರ್ಭಿಣಿಗೆ ಬ್ಲಡ್ ಚೆಕ್ ಮಾಡುತ್ತಿದ್ದರು. ರಕ್ತದ ಪರೀಕ್ಷೆ ಮಾಡಿದ ನಂತರ ಅಸ್ಪತ್ರೆಯಲ್ಲಿ ಮಂಜುಳಾ ಹಾಗೂ ಚಂದನ್ ಕೆಲಸ ಶುರು ಮಾಡುತ್ತಿದ್ದರು. ಗರ್ಭಿಣಿಗೆ ಮಾತ್ರೆಯೊಂದನ್ನು ನೀಡುತ್ತಿದ್ದರು. ಮಾತ್ರೆ ತೆಗೆದುಕೊಂಡ ಕೆಲ ಸಮಯದ ನಂತರ ಗರ್ಭಿಣಿಗೆ ರಕ್ತ ಸ್ರಾವವಾಗಿ ಭ್ರೂಣ ಹೊರ ಬರುತ್ತಿತ್ತು. ಈ ವೇಳೆ ಚಂದನ್ ಮತ್ತು ಮಂಜುಳಾ ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರ ತೆಗೆಯುತಿದ್ದರು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಅಕ್ಟೋಬರ್ ನಲ್ಲಿ ಭ್ರೂಣ ಹತ್ಯೆ ಸಂಬಂಧ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಬೃಹತ್ ಜಾಲ ಇರುವುದು ಪತ್ತೆಯಾಗಿದೆ. ಅದರಂತೆ ವೈದ್ಯರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಾಗ ಎರಡು ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿದ ಆಘಾತಕಾರಿ ವಿಚಾರ ಬಹಿರಂಗವಾಗಿತ್ತು. ಅಲ್ಲದೆ, ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆಗೆ ಬರುವವರ ಮಾಹಿತಿ ಕಲೆಹಾಕಿದ್ದರು. ಬಳಿಕ ಮಧ್ಯವರ್ತಿಗಳ ಸಹಾಯದಿಂದ ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿರುವ ಆಲೆಮನೆಗೆ ಗರ್ಭಿಣಿಯರನ್ನು ಕರೆಸಿಕೊಂಡು ಲಿಂಗ ಪತ್ತೆಮಾಡಿ ಹತ್ಯೆ ಮಾಡುತ್ತಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಸದ್ಯ ಯಾರೆಲ್ಲಾ ಸ್ಕ್ಯಾನಿಂಗ್ ಮಾಡಿಸಿಕೊಂಡು ಭ್ರೂಣ ಹತ್ಯೆ ಮಾಡಿದ್ದಾರೋ ಅವರೆಲ್ಲರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ.