ಮಕ್ಕಳ ಭವಿಷ್ಯಕ್ಕಾಗಿ ಒಂದಾದ HDK & ಸುಮಲತಾ – ಮಂಡ್ಯ ಗೆಲ್ಲಲು ‘ಕೈ’ ಪಡೆ ಮಹಾಗೇಮ್

ಮಕ್ಕಳ ಭವಿಷ್ಯಕ್ಕಾಗಿ ಒಂದಾದ HDK & ಸುಮಲತಾ – ಮಂಡ್ಯ ಗೆಲ್ಲಲು ‘ಕೈ’ ಪಡೆ ಮಹಾಗೇಮ್

ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯ ಜಯ ಸಾಧಿಸಿದ್ದರು. ಈ ಬಾರಿಯೂ ನಾನು ಮಂಡ್ಯದ ಸೊಸೆ, ಸ್ವಾಭಿಮಾನಿ ಹೆಣ್ಣು, ಮಂಡ್ಯ ಬಿಡೋ ಪ್ರಶ್ನೆಯೇ ಇಲ್ಲ ಅಂತಿದ್ದ ಸುಮಲತಾ ಅಂಬರೀಶ್ ಕೊನೆಗೂ ಸೈಡ್​ಲೈನ್ ಆಗಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ರಾಜಕೀಯದಿಂದಲೇ ಹಿಂದೆ ಸರಿದಿದ್ದಾರೆ. ಇದೀಗ ಮೈತ್ರಿ ಅಭ್ಯರ್ಥಿ  ಕುಮಾರಸ್ವಾಮಿ ಅವರ ಪರ ಸಂಸದೆ ಸುಮಲತಾ ಅಂಬರೀಶ್  ಪ್ರಚಾರ ಮಾಡುವ ವಿಚಾರಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರಿಗಂತೂ ಸುಮಲತಾ ನಡೆಯೇ ಅಸ್ತ್ರವಾಗಿದ್ದು, ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಸುಮಲತಾ-ಎಚ್​ಡಿಕೆ ಅಣ್ಣ-ತಂಗಿ ಅಲ್ವಾ? ಸುಮಲತಾ ಪ್ರಚಾರ ಮಾಡ್ತಾರೆ ಎಂದು ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಮತದಾರರು ಕೈ ಕೊಟ್ರೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಬಂದ್? – ಕಾಂಗ್ರೆಸ್‌ ಗಿಮಿಕ್‌ ಏನು?

ಅಕ್ಕ- ತಮ್ಮ ಒಂದಾಗಿದ್ದಾರೆ! 

ಲೋಕಸಭಾ ಚುನಾವಣೆಗೆ ಅಕ್ಕ-ತಮ್ಮ ಒಂದಾಗಿದ್ದಾರೆ, ನಾವು ಯಾಕೆ ಮಾತನಾಡೋದು. ಕಳೆದ ಚುನಾವಣೆಯಲ್ಲಿಯೇ ಅಕ್ಕ-ತಮ್ಮ ಒಂದಾಗಿದ್ದರೆ ಚೆನ್ನಾಗಿರೋದು‌. ಹೋದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲ ಅಂತಾ ಸುಮಲತಾ ಹೇಳ್ತಿದ್ದಾರೆ. ನಾನೇ ಗೆದ್ದೆ ಅಂತಿದ್ದಾರೆ, ಅದು ಮುಗಿದ ಅಧ್ಯಾಯ. ಈಗ ತಮ್ಮನ ಪರ ಅಕ್ಕ ಇದ್ದಾರೆ. ಅವರ ಚುನಾವಣೆ ಅವರದು, ನಮ್ಮ ಚುನಾವಣೆ ನಮ್ಮದು ಎಂದಿದ್ದಾರೆ. ಹಾಗೂ ಅಂಬರೀಶಣ್ಣ  ಅವರ ಅಭಿಮಾನಿಗಳ ರಕ್ತ, ದೇಹ, ಮನಸ್ಸು ಕಾಂಗ್ರೆಸ್. ಅವರ ಅಭಿಮಾನಿಗಳು ಕಾಂಗ್ರೆಸ್ ಪರ ಇದ್ದಾರೆ. ಅಂಬರೀಶ್ ಬದುಕಿರುವವರೆಗೂ ಕಾಂಗ್ರೆಸ್ ಆಗಿಯೆ ಇದ್ದರು. ಅವರನ್ನ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಂತ್ರಿ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಅಕ್ಕ-ತಮ್ಮ ನಡುವೆ ದಾಯಾದಿ ಕಲಹ ಮರೆತು ಹೋಗಿದ್ದಾರಾ? ತಮ್ಮ ಅಕ್ಕನಿಗೆ ಕೊಟ್ಟ ಕಾಟಾವನ್ನ ಅಂಬಿ ಅಭಿಮಾನಿಗಳು ಮರೆಯುತ್ತಾರಾ? ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಪರ ಇರ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 2 ಲಜಕ್ಷ ಮತಗಳಿಂದ ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿರೋ ಕುಮಾರಣ್ಣನನ್ನ ಸೋಲಿಸೋಕೆ ಕಾಂಗ್ರೆಸ್ ನಾಯಕರು ಭರ್ಜರಿ ಪ್ಲ್ಯಾನ್ ಮಾಡುತ್ತಿದ್ದಾರೆ. ಸ್ಟಾರ್ ಚಂದ್ರು ಪರ ಮತಶಿಕಾರಿಗೆ ರಾಷ್ಟ್ರಮಟ್ಟದ ನಾಯಕರನ್ನೇ ಕರೆಸೋ ಪ್ಲ್ಯಾನ್​ನಲ್ಲಿದ್ದಾರೆ. ಕುಮಾರಸ್ವಾಮಿ ‌ವಿರುದ್ದ ಸಾಲು ಸಾಲು ಪ್ರಚಾರ ಹಮ್ಮಿಕೊಳ್ಳಲಾಗಿದೆ. ಮತ್ತೊಂದು ಕಡೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಹೆಚ್‌ಡಿಕೆ ವಿರುದ್ಧ ಪ್ರಚಾರಕ್ಕೆ ‌ಧುಮುಕಲಿದ್ದಾರೆ. ಸ್ವತಃ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರೇ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಶಿಕಾರಿ ನಡೆಸಲಿದ್ದಾರೆ. ಏಪ್ರಿಲ್ ಹದಿನೇಳು ಅಥವಾ ಇಪ್ಪತ್ತರಂದು ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಏನೇ ಕಸರತ್ತು ನಡೆಸಿದ್ರೂ ಮಂಡ್ಯ ಚುನಾವಣೆಯಲ್ಲಿ ಕುಮಾರಣ್ಣನಿಗೆ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಸವಾಲಾಗಿದ್ದು ಸುಮಲತಾ.. ಹೀಗಾಗಿ ಸಂಸದೆಯನ್ನ ಫುಲ್ ಸೈಲೆಂಟ್ ಮಾಡಿದ್ದಾರೆ. ಅದಕ್ಕಾಗಿ ಒಂದಷ್ಟು ಭರವಸೆಗಳನ್ನೂ ನೀಡಿದ್ದಾರೆ.

ಸುಮಲತಾಗೆ ಅಭಯ! 

ಸುಮಲತಾ ಅಂಬರೀಶ್‌ ಅವರನ್ನ ಮನವೊಲಿಸುವಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಯಶಸ್ವಿಯಾಗಿದ್ದು, ಮುನಿಸು ಮರೆತು ಮೈತ್ರಿ ಧರ್ಮ ಪಾಲಿಸಲು ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಕುಮಾರಸ್ವಾಮಿ ಅವರು ಸುಮಲತಾ ಅವರ ಜೊತೆಗೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ನಿಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸುಮಲತಾ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿರುವ ಕುಮಾರಸ್ವಾಮಿ ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಸಿ. ಮುಂದಿನ ದಿನಗಳಲ್ಲಿ ಪುತ್ರ ಅಭಿಷೇಕ್ ಗೆ ಮಂಡ್ಯ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಕೊಡಿಸುವ ಮೂಲಕ ರಾಜಕೀಯ ಭವಿಷ್ಯವನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಸೋಲಿಸಲು ನನಗೆ ನೀವು ಸಹಕರಿಸಿ, ಅಂಬರೀಶ್ ಅವರಿಗೆ ರಾಜಕೀಯವಾಗಿ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಾವು ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ರೆ ಮಂಡ್ಯ ಕಾಂಗ್ರೆಸ್ ನಿರ್ನಾಮ ಮಾಡಬಹುದು ಎಂದು ಹೇಳಿದ್ದಾರೆ.  )

ಒಟ್ನಲಿ, 2019 ರ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರದ ಮೂಲಕ ಗೆದ್ದ ಸುಮಲತಾ ಇಂದು ಕುಮಾರಸ್ವಾಮಿ ಅವರ ಪರವಾಗಿಯೇ ಪ್ರಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಕುಮಾರಣ್ಣನನ್ನ ಸೋಲಿಸೋಕೆ ಭರ್ಜರಿ ಪ್ಲ್ಯಾನ್ ಮಾಡಿದೆ. ಅಂತಿಮವಾಗಿ ಯಾವ ಟ್ರಿಕ್ಸ್ ವರ್ಕೌಟ್ ಆಗುತ್ತೆ ಕಾದು ನೋಡ್ಬೇಕು.

Shwetha M