ಸುಮಲತಾ ತಟಸ್ಥವೋ.. ಕಾಂಗ್ರೆಸ್​ಗೋ? – ರೆಬಲ್‌ ನಾಯಕಿಯ ಮುಂದಿನ ನಡೆ ಏನು?

ಸುಮಲತಾ ತಟಸ್ಥವೋ.. ಕಾಂಗ್ರೆಸ್​ಗೋ? – ರೆಬಲ್‌ ನಾಯಕಿಯ ಮುಂದಿನ ನಡೆ ಏನು?

2019ರ ಲೋಕಸಭಾ ಚುನಾವಣೆಗಿಂತಲೂ 2024ರ ಲೋಕಸಭಾ ಚುನಾವಣೆ ರಣಕಣವಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಈಗಾಗ್ಲೇ ಮೈತ್ರಿ ಅಭ್ಯರ್ಥಿಯಾಗಿ ಖುದ್ದು ಹೆಚ್.ಡಿ ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಖ್ಯಾತ ಉದ್ಯಮಿ ಸ್ಟಾರ್ ಚಂದ್ರುಗೆ ಟಿಕೆಟ್ ಘೋಷಣೆ ಮಾಡಿ ಈ ಸಲ ಶತಾಯ ಗತಾಯ ಚಂದ್ರುರನ್ನ ಗೆಲ್ಲಿಸಲೇಬೇಕು ಅಂತಾ ಸಚಿವರು, ಶಾಸಕರಿಗೆ ಟಾರ್ಗೆಟ್ ನೀಡಿದೆ. ಹೀಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರಾನೇರ ಪೈಪೋಟಿ ನಡೆಯುತ್ತೆ ಎನ್ನುತ್ತಿರುವಾಗ್ಲೇ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮೇಜರ್ ಟ್ವಿಸ್ಟ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ ಸುಮಲತಾ ಮಂಡ್ಯ ಅಖಾಡಕ್ಕೆ ಧುಮುಕೋ ಸುಳಿವು ನೀಡಿದ್ದಾರೆ. ಈ ಮೂಲಕ ಮಂಡ್ಯ ಕ್ಷೇತ್ರ ಮತ್ತೊಮ್ಮೆ ಹೈವೋಲ್ಟೇಜ್ ಕಣವಾಗಲು ರಣಕಹಳೆ ಮೊಳಗಿಸಿದ್ದಾರೆ.

ಇದನ್ನೂ ಓದಿ: ಸ್ವಾಭಿಮಾನ ಉಳಿಸೊ ಕೆಲಸ ಮಾಡಿ! – ಸುಮಲತಾ ಅಂಬರೀಶ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಶಾಸಕ ನರೇಂದ್ರ ಸ್ವಾಮಿ

ಮಂಡ್ಯದಲ್ಲೇ ನಿರ್ಧಾರ!

ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಶಾಕ್ ಕೊಟ್ಟಿತ್ತು. ನಿರೀಕ್ಷೆಯಂತೆಯೇ ಟಿಕೆಟ್ ಜೆಡಿಎಸ್ ಪಾಲಾಗಿತ್ತು. ಅದಕ್ಕಿಂತ ಅಚ್ಚರಿ ಅಂದ್ರೆ ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ಖುದ್ದು ಹೆಚ್​ಡಿಕೆಯೇ ಸ್ಪರ್ಧೆಗೆ ಇಳಿದಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಮೌನಕ್ಕೆ ಶರಣಾಗಿದ್ದ ಸುಮಲತಾ ಅಂಬರೀಶ್ ಅವರನ್ನು ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ, ಸುಮಲತಾ ಅಂಬರೀಶ್ ಅವರು ಈಗಲೇ ಏನು ತೀರ್ಮಾನ ಕೈಗೊಳ್ಳಲ್ಲ. ನನ್ನ ಅಭಿಮಾನಿಗಳು, ಬೆಂಗಲಿಗರ ಅಭಿಪ್ರಾಯ ಪಡೆದು ಮಂಡ್ಯದಲ್ಲೇ ನನ್ನ ಮುಂದಿನ ನಿರ್ಧಾರ ಘೋಷಿಸುವುದಾಗಿ ವಿಜಯೇಂದ್ರಗೆ ಹೇಳಿದ್ದರು. ಇದೀಗ ಶನಿವಾರ ಬೆಂಬಲಿಗರೇ ಬೆಂಗಳೂರಿನ ಸುಮಲತಾ ಅಂಬರೀಶ್ ಅವರ ಮನೆಗೆ ಬಂದಿದ್ರು. ಈ ವೇಳೆ ಅಭಿಮಾನಿಗಳು ಮತ್ತು ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಸುಮಲತಾ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿಲ್ಲ. ಏಪ್ರಿಲ್ 3ರಂದು ಮಂಡ್ಯಕ್ಕೆ ತೆರಳಲಿದ್ದು, ಅಲ್ಲಿಯೇ ತಮ್ಮ ಮುಂದಿನ ನಿರ್ಧಾರ ಘೋಷಣೆ ಮಾಡೋದಾಗಿ ಹೇಳಿದ್ದಾರೆ.

ಹಾಗೇ ಮಂಡ್ಯದ ಘನತೆಯನ್ನು ಪಾರ್ಲಿಮೆಂಟ್​​ನಲ್ಲೂ ಎತ್ತಿ ಹಿಡಿದಿದ್ದೀನಿ. ಇವತ್ತಿನ ರಾಜಕೀಯದಲ್ಲಿ ಮಂಡ್ಯ ಬೇಡ ಬೇರೆ ಕಡೆ ಟಿಕೆಟ್ ಕೊಡ್ತಿನಿ ಅಂದ್ರೆ ಯಾರಾದ್ರು ಬೇಡ ಅಂತಾರಾ? ಅದ್ರೆ ನಾನು ಯಾಕೇ ಬೇಡ ಅಂದ್ರೆ ನಮಗೆ ಮಂಡ್ಯ ಅಂದ್ರೆ ಪ್ರೀತಿ ಭಾವನೆ. ಮಂಡ್ಯಕ್ಕೆ ನಾನು ಹೋದಾಗ ಅವರು ಕೊಡುವ ಪ್ರೀತಿ ಅಂಬರೀಶ್ ಅವರ ಪ್ರೀತಿಯಂತೆ ಎಂದು ಕ್ಷೇತ್ರದ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಹೇಳಿಕೊಂಡು ಭಾವುಕರಾಗಿದ್ದಾರೆ. ಇಷ್ಟು ದಿನ ಸೈಲೆಂಟಾಗೇ ಇದ್ದ ಸುಮಲತಾ ಇದೀಗ ಮೆಲ್ಲನೆ ಭರ್ಜರಿ ತಯಾರಿ ಆರಂಭಿಸಿದ್ದಾರೆ ನಿಜ. ಆದ್ರೆ ಆರಂಭದಲ್ಲೇ ರೆಬೆಲ್ ಲೇಡಿಗೆ ಆಘಾತ ಎದುರಾಗಿದೆ. ಕಳೆದ ಬಾರಿ ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದ್ದ ಸಂಸದೆಯ ಅತ್ಯಾಪ್ಯ ಸಚ್ಚಿದಾನಂದ ಸಭೆಗೆ ಹಾಜರಾಗಿಲ್ಲ. ಮತ್ತೊಂದೆಡೆ ಸುಮಲತಾಗೆ ಟಿಕೆಟ್ ಕೊಡಿ ಎಂದಿದ್ದ ಬಿಜೆಪಿಯ ಮಾಜಿ ಶಾಸಕ ನಾರಾಯಣಗೌಡ ಕೂಡ ಸಭೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮೂಲಕ ಘಟಾನುಘಟಿ ನಾಯಕರೇ ಕೈ ಕೊಟ್ಟಿದ್ದಾರೆ.

ಸುಮಲತಾ ತಟಸ್ಥವೋ.. ಕಾಂಗ್ರೆಸ್​ಗೋ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನನ್ನು ನಿಲ್ಲಿಸಿ ಸುಮಲತಾ ಎದುರು ಸೋಲು ಕಂಡಿದ್ದ ಕುಮಾರಸ್ವಾಮಿ, ಇದೀಗ ತಾವೇ ಕಣಕ್ಕೆ ಇಳಿಯುವ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಪ್ಲ್ಯಾನ್ ಮಾಡಿದ್ದಾರೆ.  ಸುಮಲತಾ ಜೊತೆ ಮಾತನಾಡೋದಾಗಿಯೂ ಹೇಳಿದ್ದಾರೆ. ಈ ಮೂಲಕ ಅಂಬರೀಶ್ ಹಾಗೂ ಸುಮಲತಾ ಬೆಂಬಲದ ಮತಗಳನ್ನ ಪಡೆಯೋ ತವಕದಲ್ಲಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ಕೂಡ ಕೌಂಟರ್ ಪ್ಲ್ಯಾನ್ ರೆಡಿ ಮಾಡಿದೆ. ಶಾಸಕ ನರೇಂದ್ರ ಸ್ವಾಮಿ, ಸುಮಲತಾ ಅಂಬರೀಶ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಲ್ಲ, ಸುಮಲತಾ ಎಂದು ಅಂದಿನ ಮುಖ್ಯಮಂತ್ರಿಗೆ ಓಪನ್ ಆಗಿ ಹೇಳಿದ್ದೆ. ಅದೇ ರೀತಿ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ನೆರವಾಗಿದ್ದೇವೆ. ನಿಮ್ಮ ಚುನಾವಣೆಯಲ್ಲಿ ಸ್ವಾಭಿಮಾನದ ಬಗೆಗೆ ಮಾತಾಡಿದ್ದೀರಿ. ಈಗ ಸ್ವಾಭಿಮಾನ ಉಳಿಸೊ ಕೆಲಸ ಮಾಡಿ. ಮಳವಳ್ಳಿಯ ಹುಚ್ಚೆಗೌಡರ ಸೊಸೆ ಮಳವಳ್ಳಿಯ ಸ್ವಾಭಿಮಾನ ಕಳೆಯಬೇಡಿ, ಚುನಾವಣೆಗೆ ಯಾರ ಪರವಾಗಿ ಬರ್ತಿರೊ ಬರಲ್ವೊ ನನಗೆ ಚಿಂತೆ ಇಲ್ಲ. ಆಗ ಸ್ವಾಭಿಮಾನದ ಬಗೆಗೆ ಮಾತನಾಡಿರೊ ನೀವು ಈಗ ಸ್ವಾಭಿಮಾನ ಉಳಿಸೊ ಕೆಲಸ ಮಾಡಿ, ಈ ಚುನಾವಣೆಯಲ್ಲಿ ತಟಸ್ಥವಾಗಿರಿ ಅಥವಾ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ತಾಕೀತು ಮಾಡಿದ್ದಾರೆ.

ಒಟ್ನಲ್ಲಿ ಒಂದ್ಕಡೆ ಕುಮಾರಣ್ಣ ನಾನೇ ಗೆಲ್ಲೋದು, ನಮ್ಮದೇ ಭದ್ರಕೋಟೆ ಅನ್ನೋ ವಿಶ್ವಾಸದ್ಲಲ್ಲಿದ್ದಾರೆ. ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಸಿಡಿದೆದ್ದಿರೋ ಸುಮಲತಾ ಏಪ್ರಿಲ್ 3ರಂದು ಹೈಕಮಾಂಡ್ ಮಟ್ಟದ ನಾಯಕರನ್ನು ಭೇಟಿಯಾಗಲಿದ್ದಾರೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಹೀಗಾಗಿ ಮಂಡ್ಯ ಅಖಾಡದಲ್ಲಿ ಸುಮಲತಾ ಸ್ಪರ್ಧಿಸಿದ್ರೆ ತ್ರಿಕೋನ ಸಮರ ನಡೆಯೋದಂತೂ ಪಕ್ಕಾ.

Shwetha M