ರಾಜ್ಯದಲ್ಲಿ ಹನುಮಧ್ವಜ ಸಂಘರ್ಷದ ಕಿಚ್ಚು! – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

ರಾಜ್ಯದಲ್ಲಿ ಹನುಮಧ್ವಜ ಸಂಘರ್ಷದ ಕಿಚ್ಚು! – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

ಮಂಡ್ಯದಲ್ಲಿ ಹನುಮಧ್ವಜ ಸಂಘರ್ಷದ ಕಿಚ್ಚು ತಾರಕಕ್ಕೇರಿದೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಹನುಮಧ್ವಜ ತೆರವು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಕೆರಗೋಡು ಗ್ರಾಮದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಹೌದು, ರಾಜ್ಯ ಬಿಜೆಪಿ ಮಂಡ್ಯದ ಕೆರಗೋಡು ಹನುಮಧ್ವಜ ವಿವಾದವನ್ನೇ ಅಸ್ತ್ರ ಮಾಡಿಕೊಂಡಿದೆ. ಕಾಂಗ್ರೆಸ್ ಹನುಮ ಧ್ವಜಕ್ಕೆ ಅವಮಾನ ಮಾಡಿದೆ ಅಂತ ಸೋಮವಾರ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ರಾಜ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.  ಈ ಪ್ರಕರಣದ ಸಂಬಂಧ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಭಾರೀ ಹೈಡ್ರಾಮಾ ಕಂಡುಬಂದಿದೆ.

ಇದನ್ನೂ ಓದಿ: ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ – ಗೋಡಾನ್​ನಲ್ಲಿ ತಯಾರಾಗಿದ್ದು ಗ್ರೆನೇಡ್?

ರಾಷ್ಟ್ರಧ್ವಜಕ್ಕೆ ಸರ್ಕಾರದಿಂದ ಅಪಮಾನ ಹಾಗೂ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ  ಪ್ರತಿಭಟನೆ ನಡೆಸಲಾಗಿದೆ. ಬ್ಯಾರಿಕೇಡ್ ಮತ್ತು ಪೊಲೀಸ್ ದಿಗ್ಬಂಧನದ ನಡುವೆ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟವೂ ನಡೆದಿದ್ದು, ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಶೋಕ್ ಆಗಮಿಸುವ ಮೊದಲೇ ಪ್ರತಿಭಟನೆ ಮುಗಿದುಹೋಗಿದೆ. ಅಶೋಕ್ ಆಗಮನದ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಸಂಗವೂ ನಡೆದಿದೆ.

Shwetha M