ದೋಸ್ತಿ ಎಂದು ಜೆಡಿಎಸ್ ಗೆ ಒಳಗೊಳಗೇ ಗುನ್ನಾ ಇಟ್ರಾ ಬಿಜೆಪಿ ನಾಯಕರು?

ದೋಸ್ತಿ ಎಂದು ಜೆಡಿಎಸ್ ಗೆ ಒಳಗೊಳಗೇ ಗುನ್ನಾ ಇಟ್ರಾ ಬಿಜೆಪಿ ನಾಯಕರು?

ಕಡೇ ಕ್ಷಣದವರೆಗೂ ಟಿಕೆಟ್​​ಗಾಗಿ ಪಟ್ಟು ಹಿಡಿದು ಒಲ್ಲದ ಮನಸ್ಸಿಂದಲೇ ಸುಮಲತಾ ಅಂಬರೀಶ್ ಮಂಡ್ಯ ಟಿಕೆಟ್​ ಅನ್ನು ಹೆಚ್.ಡಿ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ರು. ಇನ್ನೇನು ಸುಮಕ್ಕ ಕುಮಾರಣ್ಣನ ಪರ ಪ್ರಚಾರ ಮಾಡ್ತಾರೆ. ಮಂಡ್ಯದಲ್ಲಿ ದಳಪತಿಯೇ ಗೆಲ್ಲೋದು ಅಂತಾ ಲೆಕ್ಕಾಚಾರ ಹಾಕ್ತಿದ್ರು. ಮತ್ತೊಂದೆಡೆ ಹಾಸನದಲ್ಲಿ ದೊಡ್ಡಗೌಡ್ರ ಮೊಮ್ಮಗ ಪ್ರಜ್ವಲ್ ರೇವಣ್ಣ ಈ ಬಾರಿಯೂ ಸಂಸತ್ ಪ್ರವೇಶ ಮಾಡ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದ್ರೆ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್​​ಗೆ ಒಳಗೊಳಗೇ ಏಟು ಬೀಳ್ತಿದೆ. ಮೇಲ್ನೋಟಕ್ಕೆ ಬಿಜೆಪಿ ಜೊತೆ ಮೈತ್ರಿ ಇದ್ರೂ ಆಂತರಿಕವಾಗಿ ಯಾವುದೇ ಬೆಂಬಲ ಸಿಗ್ತಿಲ್ಲ. ಇದೇ ಈಗ ದಳಪತಿಗಳ ಆತಂಕಕ್ಕೆ ಕಾರಣವಾಗಿದೆ. ಖುದ್ದು ದೇವೇಗೌಡರೇ ಈ ಭಯವನ್ನ ಹೊರ ಹಾಕಿದ್ದಾರೆ. ಹಾಗಾದ್ರೆ ಸುಮಲತಾ ಕುಮಾರಣ್ಣನಿಗೆ ಕೈ ಕೊಟ್ರಾ..? ಮಂಡ್ಯ ಅಖಾಡ ಮೈತ್ರಿಗೆ ಕಷ್ಟವಾಯ್ತಾ..? ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಇರೋ ಸವಾಲುಗಳೇನು..? ಈ  ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್​ ​ಗೆ ಹೀನಾಯ ಸೋಲು!

ಲೋಕಸಭಾ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಗುರುವಾರ ಮನೆ ಮನೆ ಪ್ರಚಾರಕ್ಕೆ ಅವಕಾಶ ಇದ್ದು, ಶುಕ್ರವಾರ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ಮಂಡ್ಯ ಮತ್ತು ಹಾಸನ ಕ್ಷೇತ್ರಗಳೂ ಸೇರಿವೆ. ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, ದೊಡ್ಡಗೌಡ್ರ ಕುಟುಂಬಕ್ಕೆ ಪ್ರತಿಷ್ಠೆಯ ಕದನವಾಗಿದೆ. ಯಾಕಂದ್ರೆ ಮಂಡ್ಯದಲ್ಲಿ ದೊಡ್ಡಗೌಡ್ರ ಮಗ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಣದಲ್ಲಿದ್ರೆ ಹಾಸನದಲ್ಲಿ ದೊಡ್ಡಗೌಡ್ರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ. ಆದ್ರೀಗ ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗಳಿಂದ ಅಂತರ ಕಾಯ್ದುಕೊಂಡಿರೋದೇ ಆತಂಕಕ್ಕೆ ಕಾರಣವಾಗಿದೆ.

ಕೈ ಕೊಟ್ಟ ಸುಮಲತಾ!    

ಮಂಡ್ಯದ ಬಿಜೆಪಿ ಟಿಕೆಟ್​ಗಾಗಿ ಪಟ್ಟು ಹಿಡಿದು ಕೊನೇ ಗಳಿಗೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುಮಲತಾ ಅಂಬರೀಶ್ ಕೊನೆಗೂ ಕುಮಾರಣ್ಣನ ಪರ ಪ್ರಚಾರಕ್ಕೆ ಇಳಿಯಲೇ ಇಲ್ಲ. ಮಂಡ್ಯ ಸಂಸದೆಯಾಗಿ ಇಲ್ಲಿಯವರೆಗೆ ಹೆಚ್‌ಡಿಕೆ ಜೊತೆ ಪ್ರಚಾರದಲ್ಲಿ ಕಾಣಿಸಿಲ್ಲ. ಬುಧವಾರ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಪರ ಸುಮಲತಾ ಮತಯಾಚನೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದ್ರೆ  ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ಪ್ರಚಾರವನ್ನೇ ರದ್ದು ಮಾಡಲಾಗಿದೆ. ಮಂಡ್ಯಕ್ಕೆ ತೆರಳದೇ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಉಳಿದಿದ್ದಾರೆ. ಸುಮಲತಾ ನಡೆ ಬಗ್ಗೆ ದೋಸ್ತಿ ಪಾಳಯದಲ್ಲಿ ಈಗ ಭಾರೀ ಚರ್ಚೆ ನಡೆಯುತ್ತಿದೆ.

ಸುಮಲತಾ ಮಂಡ್ಯ ಕ್ಷೇತ್ರವನ್ನ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಾಗಲೇ ಸಾಕಷ್ಟು ಚರ್ಚೆಯಾಗಿತ್ತು. ಆದ್ರೆ ಸುಮಲತಾ ಮಾತ್ರ ಎಲ್ಲೂ ಕೂಡ ನಾನು ಹೆಚ್​ಡಿಕೆ ಪರ ಪ್ರಚಾರ ಮಾಡ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಪಕ್ಷ ಹೇಳಿದರೆ ಕ್ಯಾಂಪೇನ್ ಮಾಡ್ತೇನೆ ಎಂದಷ್ಟೇ ಹೇಳಿದ್ರು. ಇದೀಗ ಕೊನೆಗೂ ಹೆಚ್​ಡಿಕೆ ಜೊತೆ ಪ್ರಚಾರಕ್ಕೆ ಸುಮಕ್ಕ ಬಂದೇ ಇಲ್ಲ. ಈ ಮೂಲಕ ಬಿಜೆಪಿ ಜೆಡಿಎಸ್​​ ಮೈತ್ರಿಯಲ್ಲಿ ಇನ್ನೂ ಕೆಲವು ಸಣ್ಣಪುಟ್ಟ ಬಿರುಕು ಇರುವುದನ್ನು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಒಪ್ಪಿಕೊಂಡಿದ್ದಾರೆ. ಹಾಸನದಲ್ಲಿ ಕೆಲವು ಬಿಜೆಪಿ ನಾಯಕರು ಸಹಕಾರ ಕೊಡುತ್ತಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಎಂದಿದ್ದಾರೆ.

ಬಿಜೆಪಿ ಸಹಕಾರ ನೀಡಿಲ್ಲ!  

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿರುವ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಮೈತ್ರಿಯಲ್ಲಿ ಇನ್ನೂ ಪೂರ್ಣ ಒಮ್ಮತ ಮೂಡದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಆದಾಗ್ಯೂ, ಮೈತ್ರಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಬಿಜೆಪಿಯ ಕೆಲವರು ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯ ಕೆಲವರು ಸಹಕಾರ ನೀಡದೇ ಇರುವುದು ನಿಜ. ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸುಮಲತಾ ಸಹಾಯ ಮಾಡಿಲ್ಲ. ಹಾಗೆಂದು ಅದರಿಂದ ಕುಮಾರಸ್ವಾಮಿಗೆ ಬಹಳ ಅಪಾಯ ಆಗಿಬಿಡುತ್ತದೆ ಎನ್ನೋ ಹಾಗಿಲ್ಲ. ಕಳೆದ ಎರಡು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಹೋರಾಟ ನಡೆದಿದೆ. ನಾವು 28ಕ್ಕೆ 28 ಸ್ಥಾನ‌ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಹೆಚ್​ಡಿಕೆಗೆ ಟಿಕೆಟ್ ಘೋಷಣೆಯಾಗಿ ವಾರಗಳೇ ಕಳೆದ್ರೂ ಸುಮಲತಾ ಮಂಡ್ಯ ಕ್ಷೇತ್ರದಿಂದ ದೂರವೇ ಉಳಿದಿದ್ದಾರೆ. ಆದ್ರೆ ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಪ್ರಚಾರ ನಡೆಸಿದ್ದಾರೆ. ಮೋದಿ ಅವರು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ನಮ್ಮ ದೇಶದ ಜನರಿಗಾಗಿ ಶ್ರಮಿಸುತ್ತಿದ್ದಾರೆ, ಮಹಿಳೆಯರಿಗೆ ಹಲವಾರು ಯೋಜನೆಗಳನ್ನ ಕೊಟ್ಟಿದ್ದಾರೆ, ಉಜ್ವಲ್ ಯೋಜನೆ ಸೇರಿದಂತೆ ಹಲವಾರು ಯೋಜನೆ ಕೊಟ್ಟು ಸ್ವಾಭಿಮಾನದ ಜೀವನ ನಡೆಸಲು ನೆರವಾಗಿದ್ದಾರೆ. ಬಿಜೆಪಿಗೆ ಮತ ನೀಡಿ ಅಂತಾ ಕೇಳಿದ್ದಾರೆ. ಒಟ್ನಲ್ಲಿ ಮೈತ್ರಿ ನಾಯಕರ ಈ ಒಳಜಗಳದಿಂದ ಕಾಂಗ್ರೆಸ್​ಗೆ ಲಾಭವಾಗುತ್ತಾ ಅನ್ನೋದನ್ನ ಕಾದು ನೊಡ್ಬೇಕು.

Shwetha M