ರಾಷ್ಟ್ರ ಮಟ್ಟದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಸದ್ದು – ಅಭ್ಯರ್ಥಿ ರೇಸ್ ನಲ್ಲಿ ಘಟಾನುಘಟಿಗಳ ತಂತ್ರಗಾರಿಕೆ

ರಾಷ್ಟ್ರ ಮಟ್ಟದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಸದ್ದು – ಅಭ್ಯರ್ಥಿ ರೇಸ್ ನಲ್ಲಿ ಘಟಾನುಘಟಿಗಳ ತಂತ್ರಗಾರಿಕೆ

ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆ ವಿಚಾರವಾಗಿ ಹಲವು ಸುತ್ತಿನ ಚರ್ಚೆ ನಡೆದಿದೆ. ಇದೀಗ ಬಿಜೆಪಿ ಹೈಕಮಾಂಡ್ ನಾಯಕರು ಜೆಡಿಎಸ್​ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡೋಕೆ ಒಪ್ಪಿದ್ದಾರೆ. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳು ದಳಪತಿಗಳಿಗೆ ಸಿಗೋದು ಬಹುತೇಕ ಫೈನಲ್ ಆಗಿದೆ. ಹಾಗೇ ಇನ್ನೊಂದು ಕ್ಷೇತ್ರ ನೀಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದ್ರೆ ಜೆಡಿಎಸ್​ಗೆ ಸಿಕ್ಕಿರೋ ಮೂರು ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು..? ಮತಗಳ ಲೆಕ್ಕಾಚಾರ ಹೇಗಿದೆ..? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಮಾತುಗಳೇ ಬಿಸಿತುಪ್ಪವಾಗ್ತಿದೆಯಾ..? ಡಿಸಿಎಂ ಡಿಕೆಶಿ ಕೆರಳಿದ್ದೇಕೆ..?

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಕ್ಕಿತ್ತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಕಮಲ ನಳನಳಿಸಿತ್ತು. ಮೋದಿ ಅಲೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕೊಚ್ಚಿ ಹೋಗಿದ್ದರು. ವಿಪರ್ಯಾಸ ಅಂದ್ರೆ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಇದೀಗ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಚುನಾವಣೆಗೆ ಸಜ್ಜಾಗಿವೆ. ಹಾಗಾದ್ರೆ ಮಂಡ್ಯದ ಬಲಾಬಲ ಏನು..? ಹಾಸನದ ಸ್ಥಿತಿ ಗತಿ ಹೇಗಿದೆ..? ಕೋಲಾರದಲ್ಲಿ ಗೆಲುವಿನ ಲೆಕ್ಕಾಚಾರ ಹೇಗಿದೆ ಅನ್ನೋದನ್ನ ಹೇಳ್ತೇನೆ ನೋಡಿ.

ಪ್ರತಿಷ್ಠೆಯ ಕಣ ಮಂಡ್ಯ! 

ಮಂಡ್ಯ ಲೋಕಸಭಾ ಕ್ಷೇತ್ರ ಕೇವಲ ರಾಜ್ಯ ಮಾತ್ರವಲ್ಲ. ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡುವ ಕ್ಷೇತ್ರ. ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ 2019ರ ಲೋಕಸಭಾ ಚುನಾವಣೆ ಎಲ್ಲವನ್ನ ತಲೆ ಕೆಳಗಾಗುವಂತೆ ಮಾಡಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಕಂಡಿದ್ದರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಕ್ಷೇತ್ರವನ್ನ ಮರಳಿ ತೆಕ್ಕೆಗೆ ಪಡೆಯೋಕೆ ಕಸರತ್ತು ನಡೆಸ್ತಿದೆ. ಸುಮಲತಾರನ್ನ ಪಕ್ಷಕ್ಕೆ ಸೆಳೆಯೋಕೆ ಕಸರತ್ತು ನಡೆಸ್ತಿದೆ. ಮತ್ತೊಂದೆಡೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಸ್ಪರ್ಧಿಸಬಹುದು ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಹಲವು ಘಟಾನುಘಟಿಗಳೇ ಅಭ್ಯರ್ಥಿ ರೇಸ್ ನಲ್ಲಿದ್ದು ಕ್ಷೇತ್ರದಲ್ಲಿ ತಂತ್ರಗಾರಿಕೆಯೂ ಜೋರಾಗಿದೆ.

ಇದಿಷ್ಟು ಮಂಡ್ಯ ಕಥೆಯಾದ್ರೆ ಹಾಸನ ಲೋಕಸಭಾ ಕ್ಷೇತ್ರ ದಳಪತಿಗಳ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 2019ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದರು. ಈಗ ರಾಜಕೀಯದಲ್ಲಿ ಬದಲಾವಣೆ ಆಗಿದ್ದು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಪ್ರಜ್ವಲ್ ರೇವಣ್ಣ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಹಾಸನದಲ್ಲಿ ಜೆಡಿಎಸ್ ಪ್ರಾಬಲ್ಯ

ಹಾಸನ ಲೋಕಸಭಾ ಕ್ಷೇತ್ರದಲ್ಲಿ 17 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಲಿಂಗಾಯತ ಹಾಗೂ ಎಸ್​ಸಿ, ಎಸ್​ಟಿ ಮತಗಳು ನಿರ್ಣಾಯಕವಾಗಲಿವೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್​ನಲ್ಲಿ ಯಾರಿಗೆ ಟಿಕೆಟ್ ಅನ್ನೋದು ಈವರೆಗೂ ಫೈನಲ್ ಆಗಿಲ್ಲ. ಹಾಸನ ಜೆಡಿಎಸ್​ನ ಭದ್ರಕೋಟೆಯಾಗಿದ್ದು, ದೇವೇಗೌಡರ ಕುಟುಂಬ ಬಿಗಿ ಹಿಡಿತ ಹೊಂದಿದೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಮತಗಳ ಕ್ರೂಢೀಕರಣವಾಗಲಿದೆ. ಸ್ಥಳೀಯ ಸಂಸ್ಥೆ, ಸಹಕಾರಿ ಸಂಘಗಳಲ್ಲೂ ಜೆಡಿಎಸ್ ಪ್ರಾಬಲ್ಯ ಹೊಂದಿದ್ದು, ಹಿಂದೂಗಳ ಮತ ಒಗ್ಗೂಡಿದರೆ ಜೆಡಿಎಸ್​ಗೆ ಲಾಭವಾಗಬಹುದು. ಇನ್ನು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಎರಡು ಕಡೆ ಬಿಜೆಪಿ ಹಾಗೂ ಮತ್ತೆರಡು ಕಡೆ ಕಾಂಗ್ರೆಸ್ ಗೆಲುವು ಕಂಡಿದೆ. ಈ ಲೆಕ್ಕಾಚಾರಗಳನ್ನ ನೋಡಿದಾಗ ಜೆಡಿಎಸ್ ಪ್ರಾಬಲ್ಯ ಇರೋದು ಗೊತ್ತಾಗುತ್ತೆ.

ಇಷ್ಟೆಲ್ಲಾ ಲಾಭಗಳಿದ್ರೂ ಜೆಡಿಎಸ್​ಗೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಅಲ್ಪಸಂಖ್ಯಾತ ಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗೇ ಪ್ರಜ್ವಲ್ ರೇವಣ್ಣ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂಬ ದೂರುಗಳೂ ಇವೆ.

ಇನ್ನು ಕೋಲಾರದ ಲೆಕ್ಕಾಚಾರ ನೋಡೋದಾದ್ರೆ, ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸುಭದ್ರ ಕೋಟೆ. ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣೆಗಳಲ್ಲಿ 15 ಸಲ ಕಾಂಗ್ರೆಸ್ ಗೆದ್ದಿದೆ. 1984ರ ಚುನಾವಣೆಯಲ್ಲಿ ಜನತಾಪಕ್ಷ ಮತ್ತು 2019ರಲ್ಲಿ ಬಿಜೆಪಿ ಗೆದ್ದಿದ್ದು ಬಿಟ್ಟರೆ ಇಲ್ಲಿ ಕಾಂಗ್ರೆಸ್​ದೇ ಪಾರುಪತ್ಯ.

ಕೋಲಾರದಲ್ಲಿ ಯಾರಿಗೆ ಸಕ್ಸಸ್?  

ಕೋಲಾರ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಬಿಜೆಪಿ ಗೆಲುವು ಕಂಡಿದ್ದು ಒಂದೇ ಸಲ. 2019ರ ಚುನಾವಣೆಯಲ್ಲಿ ಮೊದಲ ಸಲ ಸ್ಪರ್ಧಿಸಿದ್ದ ಮುನಿಸ್ವಾಮಿ ಗೆಲುವು ಕಂಡಿದ್ರು. ಅದೂ ಕೂಡ ಸತತ ಏಳು ಬಾರಿ ಸಂಸದರಾಗಿದ್ದ ಕಾಂಗ್ರೆಸ್‌ನ ಕೆ.ಹೆಚ್.ಮುನಿಯಪ್ಪ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳಿಂದ ಅನ್ನೋದೇ ಅಚ್ಚರಿಯ ವಿಚಾರ. ಆದ್ರೆ ಸದ್ಯದ ರಾಜಕೀಯ ಪರಿಸ್ಥಿತಿ ಬೇರೆಯೇ ಇದೆ. ವಿಧಾನಸಭಾ ಚುನಾವಣೆಯಲ್ಲೂ 8 ಕ್ಷೇತ್ರಗಳ ಪೈಕಿ ಬಿಜೆಪಿಗೆ ಒಂದೇ ಒಂದು ಸ್ಥಾನವೂ ಸಿಕ್ಕಿಲ್ಲ. 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ರೆ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಕ್ಷೇತ್ರದ ಬಗ್ಗೆ ಬಿಜೆಪಿಗೆ ಅಷ್ಟೇನು ಆಸಕ್ತಿ ಇಲ್ಲ. ಇದೇ ಕಾರಣಕ್ಕೆ ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇತ್ತು. ಆದ್ರೀಗ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಮತಗಳು ವಿಭಜನೆಯಾಗುತ್ತವೆ. ಈ ಮೈತ್ರಿ, ರಾಜಕೀಯ ಸ್ಥಾನ ಪಲ್ಲಟಗಳ ನಡುವೆ ಮತದಾರರು ಯಾವ ಪಕ್ಷದ ಕೈ ಹಿಡಿಯುತ್ತಾರೆ. ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಿಗೆ ಮತ ಹಾಕ್ತಾರೋ ಇಲ್ಲ ಮತ್ತೊಮ್ಮೆ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತೋ ಅನ್ನೋದೇ ಪ್ರಶ್ನೆ.

Sulekha