ಮಂಡ್ಯ, ಹಾಸನದ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ರೆಬೆಲ್ – ದಳಪತಿಗಳಿಗೆ ಶುರುವಾಯ್ತು ಆತಂಕ

ಮಂಡ್ಯ, ಹಾಸನದ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ರೆಬೆಲ್ – ದಳಪತಿಗಳಿಗೆ ಶುರುವಾಯ್ತು ಆತಂಕ

ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಆದ್ರೆ ಮೈತ್ರಿಯಲ್ಲಿ ಕ್ಷೇತ್ರಗಳ ಹಂಚಿಕೆಯೇ ದೊಡ್ಡ ಕಗ್ಗಂಟಾಗಿದೆ. ಇಷ್ಟು ದಿನ ಜೆಡಿಎಸ್ ನಾಯಕರು ಹಾಸನ ಮತ್ತು ಮಂಡ್ಯ ನಮಗೇ ಎಂದು ಬೀಗುತಿದ್ರು. ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಜಿಲ್ಲೆಗಳಲ್ಲಿ ಈಗಾಗ್ಲೇ ತಂತ್ರಗಾರಿಕೆ ಶುರು ಮಾಡಿದ್ರು. ಆದ್ರೆ ಎರಡೂ ಕ್ಷೇತ್ರಗಳ ಬಿಜೆಪಿ ನಾಯಕರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನ ನಮಗೇ ಬಿಟ್ಟುಕೊಡಿ ಅಂದಿದ್ದಾರೆ. ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ದ ದಳಪತಿಗಳಿಗೆ ಈಗ ಆತಂಕ ಶುರುವಾಗಿದೆ. ಹಾಗಾದ್ರೆ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ತಿರುಗಿಬಿದ್ರಾ? ಜೆಡಿಎಸ್ ಎರಡೂ ಕ್ಷೇತ್ರಗಳನ್ನ ಕಳೆದುಕೊಳ್ಳುತ್ತಾ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿಗೆ ಸುಮಲತಾ ಎಚ್ಚರಿಕೆ- ಮಂಡ್ಯದಿಂದ ಕಣಕ್ಕಿಳಿಯುತ್ತಾರಾ ಕುಮಾರಸ್ವಾಮಿ?

ಹಾಸನ ಮತ್ತು ಮಂಡ್ಯ ಜಿಲ್ಲೆಗಳು ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಒಕ್ಕಲಿಗ ಪ್ರಾಬಲ್ಯದ ಈ ಜಿಲ್ಲೆಗಳಲ್ಲಿ ದಶಕಗಳವರೆಗೆ ದಳಪತಿಗಳದ್ದೇ ಪ್ರಾಬಲ್ಯ ಇತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಜೆಡಿಎಸ್ ಗೆ ಕಿಮ್ಮತ್ತೇ ಇಲ್ಲ. ಮಂಡ್ಯದಲ್ಲಿ ಜೆಡಿಎಸ್ ಹೀನಾಯವಾಗಿ ಸೋಲುತ್ತಿದ್ರೆ ಹಾಸನವೂ ಮೆಲ್ಲನೆ ಕೈ ಜಾರುತ್ತಿದೆ.  ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಾದ್ರೂ ಹಾಸನ, ಮಂಡ್ಯ ಸೇರಿದಂತೆ ಮತ್ತೆರಡು ಕ್ಷೇತ್ರಗಳನ್ನ ತೆಕ್ಕೆಗೆ ತೆಗೆದುಕೊಳ್ಬೇಕು ಅಂತಾ ಜೆಡಿಎಸ್ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರು. ಆದ್ರೆ ಮಂಡ್ಯ ಮತ್ತು ಹಾಸನದ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ರೆಬೆಲ್ ಆಗಿದ್ದಾರೆ. ಕ್ಷೇತ್ರ ಬಿಟ್ಟುಕೊಡಲ್ಲ ಅಂತಾ ತಗಾದೆ ತೆಗೆದಿದ್ದಾರೆ. ಇದೆಲ್ಲದಕ್ಕಿಂತ ದೊಡ್ಡ ಆಘಾತ ಅಂದ್ರೆ ಅದು ಸಂಸದೆ ಸುಮಲತಾ ಅಂಬರೀಶ್​ಗೆ ಬೆಂಬಲ ನೀಡ್ತಿರೋದು. ಬಿಜೆಪಿ ನಾಯಕರು ಸುಮಲತಾ ಪರ ಬ್ಯಾಟ್ ಬೀಸ್ತಿದ್ದಾರೆ.

ಕೆ.ಆರ್ ಪೇಟೆ ಮಾಜಿ ಶಾಸಕ ನಾರಾಯಣಗೌಡ, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಬಹಿರಂಗವಾಗಿಯೇ ಸುಮಲತಾ ಪರ ಬ್ಯಾಟ್ ಬೀಸುತ್ತಿದ್ದಾರೆ. ಜೆಡಿಎಸ್ ಪ್ರಕಾರ ಹಾಸನದಲ್ಲಿ ಜೆಡಿಎಸ್ ನ ಹಾಲಿ ಸಂಸದರು ಇರೋ ಕಾರಣಕ್ಕೆ ಕ್ಷೇತ್ರವನ್ನ ಕೇಳುತ್ತಿದ್ದಾರೆ. ಹಾಗಾದ್ರೆ ಮಂಡ್ಯದಲ್ಲೂ ಇದೇ ಫಾರ್ಮುಲ ಅಪ್ಲೈ ಆಗ್ಬೇಕು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸಂಸದೆಯಾಗಿದ್ದಾರೆ. ಈ ಸಲ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸುಮಲತಾಗೆ ಮಂಡ್ಯ ಟಿಕೆಟ್ ಸಿಗ್ಬೇಕು.  ಎರಡು ಪಕ್ಷದ ಕಾರ್ಯಕರ್ತರ ಒಪ್ಪಿಗೆಯಿಂದ ಅಭ್ಯರ್ಥಿ ಆಯ್ಕೆಯಾಗಬೇಕು ಎಂದು ಪ್ರೀತಂ ಗೌಡ ಒತ್ತಾಯಿಸಿದ್ದಾರೆ. ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಬಿಜೆಪಿ ಗೆದ್ದಿರಲಿಲ್ಲ. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಮೊದಲ ಬಾರಿಗೆ ಗೆದ್ದರು. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಮೈತ್ರಿಯಾಗಿದೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್ಯಕರ್ತರು ಕುಂದುವ ಅವಶ್ಯಕತೆ ಇಲ್ಲ. ಹಾಸನ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು ಒತ್ತಾಯಿಸಿದ್ದಾರೆ. ಇತ್ತ ಮಂಡ್ಯಕ್ಕಾಗಿ ನಾರಾಯಣ ಗೌಡ ಆಗ್ರಹಿಸುತ್ತಿದ್ದಾರೆ.

ಜೆಡಿಎಸ್ ಕಣ್ಣಿಟ್ಟಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನ ಬಿಟ್ಟುಕೊಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಪಾಂಡವಪುರದಲ್ಲಿ ಭಾನುವಾರ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಜೆಡಿಎಸ್ ಎನ್‍ಡಿಎ ಕೂಟಕ್ಕೆ ಸೇರಿದೆ ಅಷ್ಟೇ, ಇನ್ನೂ ಯಾವ ಕ್ಷೇತ್ರ, ಯಾವ ಪಕ್ಷಕ್ಕೆ ಎಂದು ನಿರ್ಧಾರವಾಗಿಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಅಲ್ದೇ ಹೈಕಮಾಂಡ್ ಮಟ್ಟದಲ್ಲೂ ಕೂಡ ಮೈತ್ರಿಯಾಗಿ 2 ತಿಂಗಳಾಗಿದ್ರೂ ಅಂತಿಮ ತೀರ್ಮಾನಗಳು ಆಗಿಲ್ಲ. ಈ ವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು. ಈ ವೇಳೆ ಸೀಟು ಹಂಚಿಕೆ ಮಾತುಕತೆ ಅಂತಿಮವಾಗಬಹುದು ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಐದರಿಂದ ಆರು ಸ್ಥಾನಗಳನ್ನಾದರೂ ತಮಗೆ ನೀಡಬೇಕು ಎನ್ನುವುದು ಜೆಡಿಎಸ್‌ ಬೇಡಿಕೆ. ಹಳೆ ಮೈಸೂರು ಭಾಗದಲ್ಲಿ ನಾಲ್ಕರಿಂದ ಐದು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಕ್ಷೇತ್ರ ಬಿಟ್ಟುಕೊಟ್ಟರೆ ಒಳ್ಳೆಯದು ಎನ್ನುವ ಪ್ರಸ್ತಾವನೆಯನ್ನು ಜೆಡಿಎಸ್‌ ನಾಯಕರು ಇಟ್ಟಿದ್ದಾರೆ. ಈ ವಾರಾಂತ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕದಲ್ಲಿ ಇರಲಿದ್ದಾರೆ. ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವ ಅವರು ಸುತ್ತೂರಿನಲ್ಲಿ ಕಾಂಗ್ರೆಸ್‌ ನಾಯಕ ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿರುವ ಅತಿಥಿಗೃಹವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಕ್ಷೇತ್ರಗಳ ಹಂಚಿಕೆ ಫೈನಲ್ ಆಗುವ ಸಾಧ್ಯತೆ ಇದೆ. ಅದ್ರಲ್ಲೂ ಮಂಡ್ಯ ಕ್ಷೇತ್ರದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದ್ದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದ್ರು. ಈ ವೇಳೆ  ಜೆಡಿಎಸ್‌ಗೆ ಉತ್ತರ ಕರ್ನಾಟಕದ ವಿಜಯಪುರ, ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಶಿವಮೊಗ್ಗ ಹಾಗೂ ಹಳೆ ಮೈಸೂರು ಭಾಗದಲ್ಲಿ ಮಂಡ್ಯ, ಹಾಸನ, ತುಮಕೂರು ಕ್ಷೇತ್ರ ಸೇರಿ 6 ಕ್ಷೇತ್ರ ಬಿಟ್ಟುಕೊಡಲಾಗಿತ್ತು. ಬರೀ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಜೆಡಿಎಸ್‌ ಐದು ಕ್ಷೇತ್ರ ಕಳೆದುಕೊಂಡಿತ್ತು. ಅದರಲ್ಲೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ನಿಖಿಲ್‌ ಕುಮಾರಸ್ವಾಮಿ ಸೋತರೆ, ಪ್ರಜ್ವಲ್‌ ರೇವಣ್ಣ ಮಾತ್ರ ಗೆದ್ದಿದ್ದರು. ಆದ್ರೀಗ ಬಿಜೆಪಿ ಎಷ್ಟು ಕ್ಷೇತ್ರಗಳನ್ನ ಜೆಡಿಎಸ್ ಗೆ ಬಿಟ್ಟುಕೊಡುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Sulekha