ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?

ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?

ಒಂದಲ್ಲ ಎರಡಲ್ಲ 900ಕ್ಕೂ ಹೆಚ್ಚು ಭ್ರೂಣಗಳ ಹತ್ಯೆ. ಹೆಣ್ಣು ಅನ್ನೋ ಒಂದೇ ಕಾರಣಕ್ಕೆ ಅಮ್ಮನ ಗರ್ಭದಲ್ಲೇ ಶಿಶುಗಳನ್ನು ಅಮಾನೀಯವಾಗಿ ಕೊಲ್ಲುತ್ತಿದ್ದರು. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಮನುಷ್ಯ ಕುಲವೇ ತಲೆತಗ್ಗಿಸುವಂತೆ ಮಾಡಿದೆ. ಕರಾಳ ದಂಧೆಗೆ ಮಂಡ್ಯ ಜಿಲ್ಲೆಯನ್ನೇ ಅಡ್ಡೆ ಮಾಡಿಕೊಂಡಿದ್ದ ಪಾಪಿಗಳು ಕೂಸುಗಳ ಮಾರಣಹೋಮ ನಡೆಸಿದ್ದಾರೆ. ಹೊರಜಗತ್ತಿಗೆ ಸಣ್ಣ ಸುಳಿವನ್ನೂ ಬಿಟ್ಟುಕೊಡದೆ 2 ವರ್ಷಗಳಿಂದಲೂ ಸಾಲು ಸಾಲು ಗರ್ಭಪಾತ ಮಾಡಿದ್ದಾರೆ. ದೇಶಾದ್ಯಂತ ಸಂಚಲನ ಮೂಡಿಸಿರುವ ಹೆಣ್ಣು ಭ್ರೂಣ ಹತ್ಯೆಯಲ್ಲಿ ಕೆದಕಿದಷ್ಟೂ ಕರಾಳ ಸತ್ಯಗಳು ಹೊರ ಬರ್ತಿವೆ.

ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರ ನಡೆಸಿದ ಒಂದು ತಪಾಸಣೆ ಭಯಾನಕ ದಂಧೆಯನ್ನ ಹೊರಗೆಳೆದಿದೆ. ಹೆಣ್ಣು ಭ್ರೂಣಗಳನ್ನು ಹೊಟ್ಟೆಯಲ್ಲೇ ಕೊಂದು ಕಾಸು ಮಾಡುತ್ತಿದ್ದ ಕಿರಾತಕರ ಗ್ಯಾಂಗ್ ಸಿಕ್ಕಿ ಬಿದ್ದಿದೆ. ವಿಪರ್ಯಾಸ ಅಂದ್ರೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ಕ್ರೌರ್ಯದಲ್ಲಿ ನೂರಾರು ಶಿಶುಗಳು ಹುಟ್ಟುವ ಮುನ್ನವೇ ಸಾವಿನ ಮನೆ ಸೇರಿವೆ. ವ್ಯವಸ್ಥಿತ ಜಾಲವೊಂದು ಈ ನೀಚ ದಂಧೆಯಲ್ಲಿ ಆಕ್ಟಿವ್ ಆಗಿದ್ದು, ವೈದ್ಯರ ಕುಮ್ಮಕ್ಕಿನಿಂದಲೇ ಹೀನ ಕೃತ್ಯಗಳು ನಡೆದಿವೆ. ಪೊಲೀಸರ ತನಿಖೆ ವೇಳೆ ಆರಂಭದಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಅನ್ನೋರು ಅರೆಸ್ಟ್ ಆಗಿದ್ರು. ಪ್ರಕರಣದ ಗಂಭೀರತೆ ಅರಿದ ಪೊಲೀಸರು ತನಿಖೆ ಮುಂದುವರೆಸಿದಾಗ ವೈದ್ಯರ ಕೈವಾಡವೂ ಪತ್ತೆಯಾಗಿದೆ. ಚೆನ್ನೈ ಮೂಲದ ಡಾ.ತುಳಸಿರಾಮ್, ಮೈಸೂರಿನ ಮಾತಾ ಆಸ್ಪತ್ರೆಯ ವೈದ್ಯ ಡಾ.ಚಂದನ್ ಬಲ್ಲಾಳ್ ಹಾಗೂ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರೀಜ್ಮಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಎಂಬುವವರು ಬಲೆಗೆ ಬಿದ್ದಿದ್ದಾರೆ. ಈ ಭ್ರೂಣಗಳ ಪತ್ತೆ, ಗರ್ಭಪಾತ ಹೇಗೆ ನಡೆಯುತ್ತಿತ್ತು ಅನ್ನೋದೇ ಭಯಾನಕವಾಗಿದೆ.

ಇದನ್ನೂ ಓದಿ : ಒಂದೇ ವರ್ಷದಲ್ಲಿ 1 ಲಕ್ಷ ಜನರನ್ನು ಕೊಂದ ‘ಚೈನೀಸ್ ಗರ್ಲ್’ – ಅಮೆರಿಕಕ್ಕೆ ಚೀನಾದ ಫೆಂಟನಿಲ್ ಪಾಯ್ಸನ್!

ಮಂಡ್ಯ ಜಿಲ್ಲೆಯ ಆಲೆಮನೆಯೊಂದರಲ್ಲಿ ಗರ್ಭದಲ್ಲಿದ್ದ ಭ್ರೂಣಗಳನ್ನು ಹತ್ಯೆ ಮಾಡುವಂತಹ ಘೋರ ಕೃತ್ಯ ನಡೆಯುತ್ತಿತ್ತು. ಆಲೆಮನೆ ಸುತ್ತಲೂ ಕಬ್ಬಿನಗದ್ದೆಗಳಿದ್ದು ಆರೋಪಿ ನವೀನ್ ​ಗೆ ಸೇರಿದ ಜಾಗ ಇದಾಗಿದೆ. ಆರೋಪಿಗಳು ಮಧ್ಯವರ್ತಿಗಳಿಂದ ಗರ್ಭಿಣಿಯರ ಸಂಪರ್ಕ‌ ಸಾಧಿಸಿ ಮಾತುಕತೆ ನಡೆಸುತ್ತಿದ್ದರು. ಭ್ರೂಣ ಪತ್ತೆಗೆ ಕುಟುಂಬಸ್ಥರು ಒಪ್ಪಿದರೆ ಆಲೆಮನೆಗೆ ತಮ್ಮ ಸ್ವಂತ ವಾಹನದಲ್ಲಿಯೇ ಕರೆತಂದು ಸ್ಕ್ಯಾನಿಂಗ್ ಮಾಡುತ್ತಿದ್ದರು. ಕಬ್ಬಿನಗದ್ದೆ ಒಳಭಾಗದ ಆಲೆಮನೆ ಪಕ್ಕದಲ್ಲಿ ಸ್ಕ್ಯಾನಿಂಗ್ ಮಷಿನ್ ಇಟ್ಟುಕೊಂಡಿದ್ದ ಪಾಪಿಗಳು ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಿಸುತ್ತಿದ್ದರು. ಹೊರ ಜಗತ್ತಿಗೆ ಸಣ್ಣ ಸುಳಿವನ್ನೂ ಕೂಡ ಬಿಟ್ಟು ಕೊಡದೆ ಕಳೆದ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ನಡೆಸುತ್ತಿದ್ದರು.  ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು 22 ರಿಂದ 25 ಭ್ರೂಣಗಳನ್ನು  ಗರ್ಭಪಾತ ಮಾಡುತ್ತಿದ್ದರು. 2 ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇನ್ನು ಈ ಪಾಪಿಗಳು ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಗರ್ಭಿಣಿಯರನ್ನೇ ಟಾರ್ಗೆಟ್ ಮಾಡ್ತಿದ್ರು. ಬೆಂಗಳೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳು, ಉತ್ತರ ಕರ್ನಾಟಕದ ಭಾಗದಿಂದಲೂ ಮಹಿಳೆಯರನ್ನು ಗುರುತಿಸಿ ಗರ್ಭಪಾತಕ್ಕೆ ಕರೆ ತರುತ್ತಿತ್ತು. ಕೆಲವರು ಭ್ರೂಣ ಪತ್ತೆಗೂ ಬರುತ್ತಿದ್ದರು. ಆನಂತರ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡುತ್ತಿದ್ದರು. ಇದಕ್ಕಾಗಿ ಇಂತಿಷ್ಟು ಹಣ ಕೊಡುವಂತೆ ಮೊದಲೇ ಡೀಲ್ ಮಾಡುತ್ತಿದ್ದರು. ಮಂಡ್ಯದ ಆಲೆಮನೆಯಲ್ಲಿಯೇ ಸ್ಕ್ಯಾನಿಂಗ್‌ ಮಾಡಿ ಗರ್ಭಪಾತ ಮಾಡುವ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಇಂಥಾದ್ದೊಂದು ಭಯಾನಕ ಕೃತ್ಯ ಎಸಗುತ್ತಿದ್ರೂ ಸಣ್ಣ ಸುಳಿವು ಹೊರ ಪ್ರಪಂಚಕ್ಕೆ ಗೊತ್ತಾಗಿರಲಿಲ್ಲ. ಕೇವಲ ಎರಡು ವರ್ಷಗಳಲ್ಲೇ 900 ಕ್ಕೂ ಹೆಚ್ಚು ಶಿಶುಗಳನ್ನ ಗರ್ಭದಲ್ಲೇ ಹತ್ಯೆ ಮಾಡಲಾಗಿತ್ತು. ಅಷ್ಟಕ್ಕೂ ಈ ಗ್ಯಾಂಗ್ ಸಿಕ್ಕಿಬಿದ್ದಿದ್ದೇ ರೋಚಕವಾಗಿದೆ.

ಅಕ್ಟೋಬರ್ 15ರಂದು ಹಳೆ ಮದ್ರಾಸ್‌ ರಸ್ತೆಯಲ್ಲಿ ಪೊಲೀಸರು ರಸ್ತೆ ಬದಿ ನಿಂತು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ವಾಹನವನ್ನು ತಡೆದು ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ಕಾರೊಂದು ಬಂದಿತ್ತು. ಈ ವೇಳೆ ತಡಮಾಡದ ಪೊಲೀಸರು ಕಾರಿಗೆ ಕೈ ತೋರಿಸಿ ನಿಲ್ಲಿಸುವಂತೆ ಸೂಚಿಸಿದ್ದಾರೆ.  ಆದ್ರೆ ಪೊಲೀಸರನ್ನು ಕಂಡೊಡನೆ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಚಾಲನೆ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಲರ್ಟ್‌ ಆದ ಪೊಲೀಸರು ಬೈಕ್‌ ಮೂಲಕ ಕಾರನ್ನ ಹಿಂಬಾಲಿಸಿಕೊಂಡು ಹೋಗಿ ಹಳೇ ಮದ್ರಾಸ್‌ ರಸ್ತೆಯ ಎನ್‌ ಜಿಎಫ್‌ ಸಿಗ್ನಲ್‌ ಬಳಿ ತಡೆದಿದ್ದಾರೆ. ಕಾರಿನಲ್ಲಿದ್ದ ಶಿವಲಿಂಗೇಗೌಡ ಅಲಿಯಾಸ್‌ ಶಿವು, ನಯನ್‌ ಕುಮಾರ್‌ ಅಲಿಯಾಸ್‌ ನಯನ್​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ತಡವರಿಸಿದ ಆರೋಪಿಗಳು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ತಮ್ಮ ಹೀನ ಕೃತ್ಯವನ್ನೆಲ್ಲಾ ಕಕ್ಕಿದ್ದಾರೆ. ಭ್ರೂಣ ಲಿಂಗ ಪತ್ತೆಗಾಗಿ ಮಹಿಳೆಯೊಬ್ಬರನ್ನು ಮಂಡ್ಯಕ್ಕೆ ಕರೆದೊಯ್ಯುವಾಗಲೇ ಸಿಕ್ಕಿಬಿದ್ದಿದ್ದಾರೆ. ಇನ್ನು ಸುನಂದ ಮತ್ತು ವಿರೇಶ್‌, ಸಿದ್ದೇಶ್‌ ಎಂಬುವವರು ಗರ್ಭಿಣಿಯರ ಹೊಟ್ಟೆಯನ್ನ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು. ಹೊಟ್ಟೆಯಲ್ಲಿರುವ ಮಗು ಗಂಡೋ ಹೆಣ್ಣೋ ಅನ್ನೋದನ್ನ ತಿಳಿಸುತ್ತಿದ್ರು. ಒಂದು ವೇಳೆ ಭ್ರೂಣ ಹೆಣ್ಣಾಗಿದ್ದು ಅದು ತಂದೆ ತಾಯಿಗೆ ಬೇಡ ಎಂದರೆ ಅದನ್ನು ತೆಗೆಸುತ್ತಿದ್ದರು.

ಮಂಡ್ಯದ ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ನ ಪೊಲೀಸರು ಸೀಜ್ ಮಾಡಿದ್ದಾರೆ. ಯಾಕಂದ್ರೆ ಆಯುರ್ವೇದ ಡೇ ಕೇರ್ ಸೆಂಟರ್‌ನಲ್ಲಿಯೇ ಭ್ರೂಣ ಹತ್ಯೆ ನಡೆಯುತ್ತಿತ್ತು ಎಂಬ ಸತ್ಯ ಗೊತ್ತಾಗಿದೆ.  ಹಾಗೇ ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಮೈಸೂರು ಜಿಲ್ಲೆಯ ನರ್ಸಿಂಗ್ ಹೋಂ, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಕ್ರಮ ತಡೆಗಟ್ಟಲು ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್ ಪಡೆಯನ್ನು ನಿಯೋಜಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ನೀಚ ಕೃತ್ಯವನ್ನು ನಿಲ್ಲಿಸಲು ಸರ್ಕಾರ ಅದೆಷ್ಟೇ ಕಠಿಣ ಕಾನೂನು ಜಾರಿ ಮಾಡಿದರೂ ಭ್ರೂಣ ಹತ್ಯೆ ನಿಲ್ಲುತ್ತಿಲ್ಲ. ಇದು ನಿರಂತವಾಗಿ ನಡೆಯುತ್ತಲೇ ಇದೆ.    ಹೆಣ್ಣು ಭ್ರೂಣ ಹತ್ಯೆ ನಿಷೇಧ ಸಂಬಂಧ 1994 ರಲ್ಲಿ ಕಾಯಿದೆ ರೂಪಿಸಲಾಯ್ತು. ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆ 1994ರ ಕಾಯಿದೆಗೆ 2003ರಲ್ಲಿ ತಿದ್ದುಪಡಿ ತರಲಾಯ್ತು. ಬಳಿಕ 2011ರಲ್ಲಿ ಕಾಯಿದೆಗೆ ಸಮಗ್ರ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ವೈಜ್ಞಾನಿಕ ತಂತ್ರಗಳನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸಿದರೆ ಅಥವಾ ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯ ಮೇಲೆ ಒತ್ತಡ ಹೇರಿದರೆ ಅದು ಅಪರಾಧವಾಗುತ್ತದೆ. ಹೆರಿಗೆಗೂ ಮುನ್ನ ಭ್ರೂಣಲಿಂಗ ಪತ್ತೆ ಮಾಡಿದ ವ್ಯಕ್ತಿ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಮೊದಲ ಸಲ ಅಪರಾಧ ಮಾಡಿದ್ರೆ 3 ವರ್ಷಗಳ ಜೈಲುಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತೆ. ನಂತರದ ಅಪರಾಧಕ್ಕೆ 5 ವರ್ಷಗಳ ಜೈಲು ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ. ಭ್ರೂಣ ಪತ್ತೆ ಕೃತ್ಯಕ್ಕೆ ಸಹಾಯ ಮಾಡುವ ವ್ಯಕ್ತಿಯೂ ಶಿಕ್ಷೆಗೆ ಅರ್ಹನಾಗಿದ್ದು, ಈ ಕಾನೂನಿನ ಅಡಿಯಲ್ಲಿ ಎಲ್ಲ ಅಪರಾಧಗಳೂ ಜಾಮೀನಿಗೆ ಅರ್ಹವಲ್ಲ ಹಾಗೂ ರಾಜಿ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಈಗಾಗಲೇ ಲಿಂಗ ಅನುಪಾತದಲ್ಲಿ ತಾರತಮ್ಯ ಇದೆ. ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 2011ರಲ್ಲಿ 968ರಷ್ಟಿದೆ. ಅಂದ್ರೆ ಸಾವಿರ ಪುರುಷರಿಗೆ 968 ಮಹಿಳೆಯರಿದ್ದಾರೆ. ಈಗಾಗಲೇ ಮಹಿಳೆಯರ ಕೊರತೆಯಿಂದ ಅಸಮತೋಲನ ಉಂಟಾಗಿರುವ ಹೊತ್ತಲ್ಲೇ ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಿರೋದು ಆತಂಕ ಮೂಡಿಸಿದೆ. ಈ ಬೆಳವಣಿಗೆಯಿಂದ ಲೈಂಗಿಕ ದೌರ್ಜನ್ಯ, ಹೆಂಡತಿಯನ್ನು ಪರ ಪುರುಷನೊಂದಿಗೆ ಹಂಚಿಕೊಳ್ಳುವುದು, ಮಕ್ಕಳ ಮೇಲೆ ದೌರ್ಜನ್ಯ ಸೇರಿದಂತೆ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಇದು ದೇಶದ ಸಾಮಾಜಿಕ ಮೌಲ್ಯಗಳನ್ನು ಅಧೋಗತಿಗಿಳಿಸಿ ಸಂಧಿಗ್ಧ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಆದ್ರೆ 21ನೇ ಶತಮಾನದಲ್ಲೂ ಕೂಡ ಜನ ಎಚ್ಚೆತ್ತುಕೊಳ್ತಿಲ್ಲ. ದೇಶದಲ್ಲಿ ಕಾಯ್ದೆ ಜಾರಿಗೆ ತಂದು ಕಾನೂನು ರೂಪಿಸಿದ್ರೂ ಪ್ರಯೋಜನ ಆಗ್ತಿಲ್ಲ. ಎಲ್ಲಿವರೆಗೆ ಜನರ ಮನಸ್ಥಿತಿ ಬದಲಾಗುವುದಿಲ್ಲವೋ ಅಲ್ಲಿವರೆಗೆ ಈ ಪಿಡುಗನ್ನ ನಿರ್ಮೂಲನೆ ಮಾಡುವುದು ಕೂಡ ಅಸಾಧ್ಯ.

Shantha Kumari