2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ – ಬಿಜೆಪಿ ಕಾರ್ಯಕರ್ತ ಅರೆಸ್ಟ್

2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ – ಬಿಜೆಪಿ ಕಾರ್ಯಕರ್ತ ಅರೆಸ್ಟ್

ತನ್ನ ತಪ್ಪು ಮರೆಮಾಚಲು ಕಾಂಗ್ರೆಸ್‌, ಬಿಜೆಪಿ ವಿರುದ್ಧ ದ್ವೇಷದ ರಾಜಕೀಯಕ್ಕೆ ಮುಂದಾಯಿತಾ ಅನ್ನೋ ಪ್ರಶ್ನೆಯೊಂದು ಈಗ ಉದ್ಭವವಾಗಿದೆ. ಇದಕ್ಕೆ ಕಾರಣ 2022ರಲ್ಲಿ ಮಂಡ್ಯದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಪಾಕ್‌ ಪರ ಘೋಷಣೆ ಕೂಗಿದ ವಿಚಾರವನ್ನೇ ಮುಂದಿಟ್ಟುಕೊಂಡು ಈಗ ಕಾಂಗ್ರೆಸ್‌ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ಲೋಕಯುದ್ಧಕ್ಕೆ ಕರುನಾಡ ಬಿಜೆಪಿ ಸೇನೆ ರೆಡಿ – ಯಾರ್ಯಾರಿಗೆ ಟಿಕೆಟ್.. ಯಾರು ಔಟ್?

ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ವಿಧಾನಸೌಧದ ಆವರಣದಲ್ಲಿ ನಾಸೀರ್‌ ಹುಸೇನ್‌ ಬೆಂಬಲಿಗರು ಪಾಕ್​ ಪರ ಘೋಷಣೆ ಕೂಗಿದ್ದರು. ಈ ಪ್ರಕರಣ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. ಅದು ಪಾಕ್​ ಪರ ಘೋಷಣೆ ಅಲ್ಲ, ಬದಲಿಗೆ ಚುಣಾವಣೆಯಲ್ಲಿ ಗೆದ್ದ ನಾಸಿರ್ ಹುಸೇನ್ ಪರ ಘೋಷಣೆ ಅಂತಾ ಕಾಂಗ್ರೆಸ್ ನಾಯಕರು ಸಮಜಾಯಿಶಿ ನೀಡಿದ್ರು. ಇದೀಗ, ಇದೇ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಪಾಕ್​ ಪರ ಘೋಷಣೆ ಕೂಗಿದ್ದು ದೃಢವಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂವರು ಅರೆಸ್ಟ್ ಆಗುತ್ತಿದ್ದಂತೆ ಮಂಡ್ಯದಲ್ಲೂ ಓರ್ವನನ್ನು ಅರೆಸ್ಟ್ ಮಾಡಲಾಗಿದೆ.  ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿ ಮೇಲೆ ಕಾಂಗ್ರೆಸ್ ಗೂಬೆ ಕೂರಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಏನಿದು ಪ್ರಕರಣ?

ಮಂಡ್ಯದ ಸಂಜಯ್ ವೃತ್ತದಲ್ಲಿ 2022ರ ಡಿಸೆಂಬರ್ 17 ರಂದು ಅಂದಿನ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ “ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್” ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಘೋಷಣೆ ಕೂಗುವ ಬರದಲ್ಲಿ ಪಾಕಿಸ್ತಾನ ಮುರ್ದಾಬಾದ್‌ ಎಂದು ಹೇಳುವ ಬದಲು ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದರು. ಕೂಡಲೇ ಎಚ್ಚೆತ್ತ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ ಕಾರ್ಯಕರ್ತನ ಬಾಯಿ ಮುಚ್ಚಿಸಿದ್ದರು. ಇದೀಗ ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕೈ  ಕಾರ್ಯಕರ್ತರು ಬಂಧನಕ್ಕೆ ಒಳಗಾದ ಬೆನ್ನಲ್ಲೇ ಈಗ ಕಾಂಗ್ರೆಸ್‌ ಮಂಡ್ಯದ ಬಿಜೆಪಿ ಕಾರ್ಯಕರ್ತರ ಮೇಲೆ ದೂರು ನೀಡಿದೆ.

ಕನ್ನಂಬಾಡಿ ಕುಮಾರ್‌ ದೂರು ನೀಡಿದ್ದು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 153 ಬಿ(ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಮೇರೆಗೆ ಆರಾಧ್ಯ, ರವಿ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಬಿಜೆಪಿ ಕಾರ್ಯಕರ್ತ ರವಿಯನ್ನು ವಶಕ್ಕೆ ಪಡೆದಿದ್ದಾರೆ.

Shwetha M