ಇತಿಹಾಸ ಬರೆದ ಸ್ಮೃತಿ ಸೇನೆ – ಅಂಪೈರ್ ಮಗಳ ಸುನಾಮಿ ಬ್ಯಾಟಿಂಗ್
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಪುರುಷರ ಕ್ರಿಕೆಟ್ ತಂಡ ಸೋಲು ಕಂಡಿದ್ದು, ಇದೀಗ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ ಹಾಗೇ ಏಕದಿನ ಸರಣಿ ಆಡೋಕೆ ರೆಡಿಯಾಗಿದೆ. ಮತ್ತೊಂದ್ಕಡೆ ಹುಡುಗಿಯರ ಕ್ರಿಕೆಟ್ ಟೀಂ ಸದ್ದೇ ಇಲ್ಲದೆ ಗೆಲುವಿನ ಕೇಕೆ ಹಾಕಿದೆ. ಐಸಿಸಿ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ ಮತ್ತು ಐರ್ಲೆಂಡ್ ನಡುವೆ ರಾಜ್‌ಕೋಟ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆದಿವೆ. ಆದ್ರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಸರಣಿಯಿಂದ ಹೊರಗುಳಿದಿದ್ದು, ಸ್ಮೃತಿ ಮಂದಾನ ಮಧ್ಯಂತರ ನಾಯಕಿಯಾಗಿ ಕಣಕ್ಕಿಳಿದಿದ್ರು. ಶುಕ್ರವಾರ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಜಯಗಳಿಸಿದ್ದ ಭಾರತ, ಭಾನುವಾರ ನಡೆದ ಪಂದ್ಯದಲ್ಲಿ ಐರಿಶ್ ತಂಡವನ್ನು 116 ರನ್‌ಗಳಿಂದ ಸೋಲಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ.
ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ನಿಜಕ್ಕೂ ಅತ್ಯದ್ಭುತವಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮಹಿಳಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ಮಹಿಳಾ ತಂಡ 31.4 ಓವರ್‌ಗಳಲ್ಲಿ 131 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 304 ರನ್ ಗಳ ಅಮೋಘ ಜಯ ಸಾಧಿಸಿದೆ.
ಇದನ್ನೂ ಓದಿ : ರಣಜಿಗೆ ರೋಹಿತ್, ಪಂತ್, ಜೈಸ್ವಾಲ್ – ವರ್ಕೌಟ್ ಆಗುತ್ತಾ ಡೊಮೆಸ್ಟಿಕ್ ಫೈಟ್?
ಹರ್ಮನ್ ಪ್ರೀತ್ ಅನುಪಸ್ಥಿತಿಯಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದ ಸ್ಮೃತಿ ಮಂದಾನ ಬ್ಯಾಟಿಂಗ್ನಲ್ಲೂ ಅಬ್ಬರಿಸಿದ್ರು. ಸ್ಮೃತಿ ಮಂಧಾನ ಹಾಗೂ ಪ್ರತೀಕಾ ರಾವಲ್ ಭರ್ಜರಿ ಶತಕ ಸಿಡಿಸಿದರು. 80 ಎಸೆತಗಳನ್ನು ಎದರುರಿಸಿದ ಸ್ಮೃತಿ 135 ರನ್ ಬಾರಿಸಿದರೆ, ಪ್ರತೀಕಾ ರಾವಲ್ 129 ಎಸೆತಗಳಲ್ಲಿ 154 ರನ್ ಸಿಡಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಚಾ ಘೋಷ್ 42 ಎಸೆತಗಳಲ್ಲಿ 59 ರನ್ ಬಾರಿಸಿದರು. ಈ ಮೂಲಕ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 435 ರನ್ ಗಳಿಸಿತು.
ಈ ಬೃಹತ್ ಸ್ಕೋರ್ ಮೂಲಕ ಭಾರತೀಯ ಏಕದಿಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ ದಾಖಲೆ ಟೀಮ್ ಇಂಡಿಯಾ ಮಹಿಳಾ ತಂಡದ ಪಾಲಾಯಿತು. ಅಂದರೆ ಈ ಹಿಂದೆ ಭಾರತೀಯ ಪುರುಷರ ತಂಡ ಒನ್ ಡೇ ಕ್ರಿಕೆಟ್‌ನಲ್ಲಿ ಬರೆದಿದ್ದ ಗರಿಷ್ಠ ಸ್ಕೋರ್ ದಾಖಲೆಯನ್ನು ಮಹಿಳಾ ತಂಡ ಅಳಿಸಿ ಹಾಕಿದೆ. ಭಾರತ ಪುರುಷರ ತಂಡ ಏಕದಿನ ಕ್ರಿಕೆಟ್‌ನಲ್ಲಿ ಕಲೆಹಾಕಿದ ಗರಿಷ್ಠ ಸ್ಕೋರ್ 418 ರನ್ಗಳು. 2011 ರಲ್ಲಿ ಇಂದೋರ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ ದ್ವಿಶತಕ ಸಿಡಿಸಿದ್ದರು. ಈ ಡಬಲ್ ಸೆಂಚುರಿಯ ನೆರವಿನಿಂದ ಭಾರತ ತಂಡವು 418 ರನ್ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಇದೀಗ 13 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಭಾರತೀಯ ಮಹಿಳಾ ತಂಡ ಯಶಸ್ವಿಯಾಗಿದೆ.
ಆಟಗಾರ್ತಿಯಾಗಿಯೂ ಅತ್ಯಧ್ಬುತ ಫಾರ್ಮ್ನಲ್ಲಿರುವ ಮಂಧಾನ ಕಳೆದ 10 ಇನ್ನಿಂಗ್ಸ್ಗಳಲ್ಲಿ ಕೇವಲ 2 ಬಾರಿ ಮಾತ್ರ ಅರ್ಧಶತಕ ವಂಚಿತರಾಗಿದ್ದಾರೆ. ಉಳಿದಂತೆ 8 ಇನ್ನಿಂಗ್ಸ್ಗಳಲ್ಲಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮಂಧಾನ 10ನೇ ಶತಕ ಸಿಡಿಸಿದ್ದು, ಈ ಮಾದರಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಆಟಗಾರ್ತಿಯೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಹಾಗೆಯೇ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಆರಂಭಿಕ ಆಟಗಾರ್ತಿಯಾಗಿದ್ದಾರೆ. ಹಾಗೇ ಮಹಿಳಾ ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ
ಇನ್ನು ಸ್ಮೃತಿ ಮಂದಾನರಂತೆಯೇ ಪ್ರತೀಕಾ ರಾವಲ್ ಕೂಡ ಸೆಂಚುರಿ ಸಿಡಿಸಿ ಆರ್ಭಟಿಸಿದ್ದಾರೆ. ತಿಂಗಳ ಹಿಂದೆ ಭಾರತದ ಪರ ಏಕದಿನ ಕ್ರಿಕೆಟ್ಗೆ ಕಾಲಿಟ್ಟಿದ್ದ ಈ ಯುವ ಬ್ಯಾಟರ್ ತಂಡದಲ್ಲಿ ಸುನಾಮಿ ಎಬ್ಬಿಸಿದ್ದಾರೆ. ಶೆಫಾಲಿ ವರ್ಮಾ ಅವರ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಜೊತೆ ಇನ್ನಿಂಗ್ಸ್ ಆರಂಭಿಸಿದ ಪ್ರತೀಕಾ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್ಗಳ ಶಿಖರ ಕಟ್ಟಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಪ್ರತೀಕಾ ರಾವಲ್ ವೆಸ್ಟ್ ಇಂಡೀಸ್ ವಿರುದ್ಧ ಸ್ವದೇಶಿ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕ್ರಮವಾಗಿ 40,76,18 ರನ್ ಕಲೆಹಾಕಿದ್ದರೆ, ಇದೀಗ ಐರ್ಲೆಂಡ್ ವಿರುದ್ಧ ಕ್ರಮವಾಗಿ 89,67,154 ರನ್ಗಳ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಪ್ರತೀಕಾ ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಇವರ ತಂದೆ ಪ್ರದೀಪ್ ರಾವಲ್ ಬಿಸಿಸಿಐನಿಂದ ಅನುಮೋದಿಸಲ್ಪಟ್ಟ ಲೆವೆಲ್ 2 ಅಂಪೈರ್ ಆಗಿದ್ದಾರೆ.