ಒಳ್ಳೆ ಕೆಲಸ.. ಕೈ ತುಂಬಾ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಾಂಬ್ ಸ್ಫೋಟಿಸಿದ್ಯಾಕೆ? – ಪೊಲೀಸರಿಗೆ ತಲೆನೋವಾದ ಕೇರಳ ಸ್ಫೋಟ ಪ್ರಕರಣ!
ಕೇರಳದಲ್ಲಿ ಕಳೆದ ಮೂರು ದಿನಗಳ ಹಿಂದೆ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧನದಲ್ಲಿರುವ ಡೊಮಿನಿಕ್ ವಿಚಾರಣೆ ವೇಳೆ ಒಂದೊಂದೇ ಸ್ಫೋಟಕ ವಿಚಾರಗಳನ್ನು ಬಾಯಿಬಿಡುತ್ತಿದ್ದಾನೆ. ಇದೀಗ ಆರೋಪಿ ಆತನ ಜೀವನ, ವೃತ್ತಿ ಬಗ್ಗೆ ಪೊಲೀಸರ ಮುಂದೆ ತಿಳಿಸಿದ್ದಾನೆ. ಈತನ ಕತೆಯನ್ನು ಕೇಳಿದ ತನಿಖಾಧಿಕಾರಿಗಳು ಆತ ಅಸಾಧಾರಣ ಬುದ್ಧಿವಂತ ಎಂದು ಹೇಳಿದ್ದಾರೆ.
ಡೊಮಿನಿಕ್ ಈ ದುಷ್ಕೃತ್ಯ ಎಸಗುವ ಮುನ್ನ ಕೊಲ್ಲಿ ರಾಷ್ಟ್ರದಲ್ಲಿ ಕೆಲಸದಲ್ಲಿ ಇದ್ದ. ಆತನಿಗೆ ಕೈತುಂಬ ಸಂಬಳ ಸಿಗುತ್ತಿತ್ತು. ಆತ ಬಾಂಬ್ ಸ್ಪೋಟಿಸುವುದಕ್ಕೆಂದೇ ಕೆಲಸ ಬಿಟ್ಟು ಬಂದಿದ್ದ. ಅಸಾಧಾರಣ ಬುದ್ಧಿವಂತಿಕೆ ಮತ್ತು ಶ್ರದ್ಧೆಯ ವ್ಯಕ್ತಿ ಈತ. ಆಘಾತಕಾರಿ ಕೃತ್ಯಕ್ಕಾಗಿ ಒಳ್ಳೆ ಸಂಬಳದ ಕೆಲಸ ಬಿಟ್ಟು ಬಂದು ಬಾಂಬ್ ಸ್ಫೋಟಿಸಿದ್ಯಾಕೆ ಎಂಬುದು ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.
ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್ – ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
ಪ್ರಾರ್ಥನಾ ಸಭೆಯಲ್ಲಿ ಸಂಭವಿಸಿದೆ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಲ್ಲದೇ 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟಕ್ಕೆ ಬಳಸಿದ ವಸ್ತುಗಳು ಯಾವುವು? ಸ್ಫೋಟಕ ಹೇಗೆ ತಯಾರಿಸಲಾಯಿತು ಎಂಬ ಬಗ್ಗೆ ಆರೋಪಿ ವಿವರಗಳನ್ನು ಪೊಲೀಸರಿಗೆ ನೀಡಿದ್ದಾನೆ. ಆರೋಪಿ ಮಾರ್ಟಿನ್ ಭಾನುವಾರ ಪೊಲೀಸರ ಮುಂದೆ ಶರಣಾದಾಗ, ತಾನು ಖರೀದಿಸಿದ ಸಾಮಗ್ರಿಗಳ ಬಿಲ್‌ಗಳನ್ನು ನೀಡಿದ್ದಾನೆ. ಇದು ಆತನ ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶದಲ್ಲಿ ಒಳ್ಳೆ ಕೆಲಸದಲ್ಲಿದ್ದ ಮಾರ್ಟಿನ್ ಸ್ಫೋಟದಲ್ಲಿ ಏಕೆ ಭಾಗಿಯಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ತನಿಖಾ ತಂಡವು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಪ್ರಕರಣ ಮುಂದುವರಿದಂತೆ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಆತನ ಪ್ರವೀಣತೆಯನ್ನು ಪೊಲೀಸರು ಗಮನಿಸಿದ್ದಾರೆ.