ಹೈಹೀಲ್ಸ್ ಧರಿಸಿ 100 ಮೀಟರ್ ಓಟ – ಗಿನ್ನೆಸ್ ದಾಖಲೆಯ ಪುಟದಲ್ಲಿ ಹೆಸರು ಬರೆಸಿಕೊಂಡ  ರೊಡ್ರಿಗಸ್..!

ಹೈಹೀಲ್ಸ್ ಧರಿಸಿ 100 ಮೀಟರ್ ಓಟ – ಗಿನ್ನೆಸ್ ದಾಖಲೆಯ ಪುಟದಲ್ಲಿ ಹೆಸರು ಬರೆಸಿಕೊಂಡ  ರೊಡ್ರಿಗಸ್..!

ಹೆಣ್ಣು ಮಕ್ಕಳಿಗೂ ಹೈ ಹೀಲ್ಸ್‌ಗೂ ಬಿಡಲಾರದ ನಂಟು. ಹೈಹೀಲ್ಸ್ ಧರಿಸಿ ಬಳುಕುತ್ತಾ ಹೆಜ್ಜೆ ಹಾಕುವ ನಾರಿಮಣಿಯರು ಎಲ್ಲರಿಗೂ ಗೊತ್ತು. ಆದರೆ, ಹೈ ಹೀಲ್ಸ್ ಧರಿಸಿ ರೇಸ್ ಮಾಡಿ ಅಂದರೆ ಆಗುತ್ತಾ ಹೇಳಿ. ಜೋರಾಗಿ ನಡೆದರೆ ಮುಗ್ಗರಿಸಿ ಬೀಳುವುದು ಗ್ಯಾರಂಟಿ. ಆದರೆ, ಇಲ್ಲೊಬ್ಬ ಮಹರಾಯ ಇದ್ದಾನೆ. ಆಗದೇ ಇರುವುದನ್ನು ಮಾಡಿ ತೋರಿಸಿಯೇ ಸಿದ್ಧ ಅನ್ನೋದು ಅವನ ಉದ್ದೇಶ. ಹೀಗಾಗಿ ಹೈಹೀಲ್ಸ್ ಧರಿಸಿ 100 ಮೀಟರ್ ಓಡಿದ್ದಾನೆ. ಈ ಮೂಲಕ ಗಿನ್ನೆಸ್ ಪುಟದಲ್ಲಿಯೂ ತನ್ನ ಹೆಸರು ಸೇರಿಸಿಕೊಂಡು ಮಿಂಚಿದ್ದಾನೆ.

ಇದನ್ನೂ ಓದಿ: ಮದುಮಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ಗೌನ್‌ – ವಿಶ್ವದಾಖಲೆ ಬರೆದಿದ್ದು ಯಾಕೆ ಗೊತ್ತಾ?

ನಡೆಯುವುದಕ್ಕೆ ಕಷ್ಟವೆನಿಸುವ ಹೈಹೀಲ್ಸ್ ಧರಿಸಿ ಪುರುಷರೊಬ್ಬರು ಓಡಿ ಸಾಧನೆ ಮಾಡಿರುವುದು ಈಗ ದೊಡ್ಡ ವಿಚಾರವಾಗಿದೆ. ಸ್ಪೇನ್‌ನ  ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೊಡ್ರಿಗಸ್ ಎಂಬುವವರೇ ಹೀಗೆ ಹೈ ಹೀಲ್ಸ್ ಧರಿಸಿ ಓಡುವ ಮೂಲಕ ದಾಖಲೆ ಬರೆದಿದ್ದಾರೆ.  ಹೈ ಹೀಲ್ಸ್ ಧರಿಸಿ 100 ಮೀಟರ್ ಓಟವನ್ನು 12.28 ಸೆಕೆಂಡ್‌ನಲ್ಲಿ ಮುಗಿಸಿದ್ದಾರೆ.  ಈ ಸಾಧನೆ ಮಾಡುವುದಕ್ಕಾಗಿ  ಲೋಪೆಜ್ ರೊಡ್ರಿಗಸ್ 2.76 ಇಂಚು ಉದ್ದದ ಹೈ ಹೀಲ್ ಪಾದರಕ್ಷೆಯನ್ನು ಧರಿಸಿದ್ದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೋಪೆಜ್ ರೊಡ್ರಿಗಸ್ ಹೈ ಹೀಲ್ಸ್ ಧರಿಸಿ ಓಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದೆ.  12.82 ಸೆಕೆಂಡ್‌ನಲ್ಲಿ ಹೈ ಹೀಲ್ಸ್‌ನಲ್ಲಿ ಅತ್ಯಂತ ವೇಗದ 100 ಮೀಟರ್ ಓಟ ಪುರುಷನಿಂದ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೋಡ್ರಿಗಸ್ ಎಂದು ಬರೆದುಕೊಂಡಿದೆ. ರೋಡ್ರಿಗಸ್ ಅವರು ಒಲಿಂಪಿಕ್ಸ್‌ನಲ್ಲಿ ಅತ್ಯಂತ ವೇಗವಾಗಿ 100 ಮೀಟರ್ ಓಡಿ ಚಿನ್ನದ ಪದಕ ಗೆದ್ದ  ಉಸೇನ್ ಬೋಲ್ಟ್ ಅವರಿಗಿಂತ ಕೇವಲ 3.2 ಸೆಕೆಂಡುಗಳಷ್ಟೇ ವಿಳಂಬವಾಗಿ ಈ ಓಟ ಓಡಿ ಈ ಸಾಧನೆ ಮಾಡಿದ್ದಾರೆ.

ಈ ಓಟಕ್ಕಾಗಿ ತಾನು ಹೇಗೆ ತಯಾರಿ ಮಾಡಿಕೊಂಡಿದ್ದೇನೆ ಎಂಬ ಬಗ್ಗೆ ರೋಡ್ರಿಗಸ್ ವಿವರಿಸಿದ್ದಾರೆ. ಇದಕ್ಕಾಗಿ ನನ್ನ ತಯಾರಿ ಬಹಳ ನಿರ್ದಿಷ್ಟ ಹಾಗೂ ಸಮಗ್ರವಾಗಿತ್ತು. ಅತ್ಯಂತ ವೇಗವಾಗಿ ಹೈ ಹೀಲ್ಸ್ ಧರಿಸಿ ಓಡುವುದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ಸ್ಪೇನ್‌ನಲ್ಲಿ  ಈ ರೀತಿಯ ಓಟದ ಸ್ಪರ್ಧೆಗಳಿವೆ. ಅವು ಯಾವಾಗಲೂ ನನಗೆ ಇಷ್ಟವಾಗುತ್ತವೆ ಎಂದು  ರೋಡ್ರಿಗಸ್ ಹೇಳಿದ್ದಾರೆ.

2019 ರಲ್ಲಿ ಇದೇ ರೀತಿಯ ಸಾಧನೆಯನ್ನು  ಜರ್ಮನಿಯ ಆಂಡ್ರೆ ಓರ್ಟೋಲ್ಫ್ ಅವರು ನಿರ್ಮಿಸಿದ್ದರು. 14.02 ಸೆಕೆಂಡುಗಳಲ್ಲಿ ಅವರು 100 ಮೀಟರ್ ಓಟ ಮುಗಿಸಿದ್ದರು. ಅವರ ಈ ಸಾಧನೆಯನ್ನು ಈಗ ರೋಡ್ರಿಗಸ್ ಬ್ರೇಕ್ ಮಾಡಿದ್ದಾರೆ.

suddiyaana