ಓದೋಕೆ ಒಳ್ಳೆ ಜಾಗ ಅಂತಾ ಮಾಲ್‌ ಅನ್ನೇ ಮನೆ ಮಾಡಿಕೊಂಡ! – 6 ತಿಂಗಳ ಬಳಿಕ ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್‌!

ಓದೋಕೆ ಒಳ್ಳೆ ಜಾಗ ಅಂತಾ ಮಾಲ್‌ ಅನ್ನೇ ಮನೆ ಮಾಡಿಕೊಂಡ! – 6 ತಿಂಗಳ ಬಳಿಕ ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್‌!

ನಗರಗಳಲ್ಲಿ ಮಾಲ್‌ಗಳಿಗೇನೂ ಕೊರತೆ ಇಲ್ಲ. ಒಂದೊಂದು ಏರಿಯಾಗೆ ಒಂದೊಂದು ಮಾಲ್‌ಗಳು ತಲೆಎತ್ತಿವೆ. ವೀಕೆಂಡ್‌ ಬಂತಂದ್ರೆ ಶಾಪಿಂಗ್‌, ಸುತ್ತಾಟ ಅಂತಾ ಜನರು ಮಾಲ್‌ಗೆ ಹೋಗುತ್ತಾರೆ. ಕೆಲವರು ಮಾಲ್‌ಗಳಿಗೆ ಶಾಪಿಂಗ್‌ಗೆ ಅಂತಾ ಹೋದ್ರೆ, ಇನ್ನು ಕೆಲವರು ಸುಮ್ಮನೆ ಸುತ್ತಾಡಲು ಹೋಗುತ್ತಾರೆ. ಸೆಲ್ಫೀ. ಫೋಟೋ ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಾ ವಾಪಸ್‌ ಆಗ್ತಾರೆ. ಆದ್ರೆ ಇಲ್ಲೊಬ್ಬ ಮಾಲ್‌ಗೆ ಅಂತಾ ಹೋಗಿ ಅಲ್ಲೇ ಠಿಕಾಣಿ ಹೂಡಿದ್ದಾನೆ. ಮಾಲ್‌ ಅನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಏನಿದು ಘಟನೆ?

ಮಾಲ್ ಗೆ ದಿನಕ್ಕೆ ಸಾವಿರಾರು ಮಂದಿ ಬರ್ತಾರೆ. ದೊಡ್ಡ ಮಾಲ್ ಆದ್ರೆ ಬರುವವರ ಸಂಖ್ಯೆ ಇನ್ನೂ ಹೆಚ್ಚು. ಯಾರು ಬಂದ್ರು ಎಂಬುದನ್ನು ಚೆಕಿಂಗ್ ಮೂಲಕ ನೋಡಲಾಗುತ್ತೆಯಾದ್ರೂ ಎಲ್ಲರ ಮುಖ ನೆನಪಿಟ್ಟುಕೊಳ್ಳಲು ಸೆಕ್ಯುರಿಟಿ ಗಾರ್ಡ್ ಗೆ ಸಾಧ್ಯವಿಲ್ಲ. ಇನ್ನು ಮಾಲ್ ನಿಂದ ಯಾರೆಲ್ಲ ಹೊರಗೆ ಹೋದ್ರು ಅನ್ನೋದನ್ನಂತೂ ನೋಡೋದು ಬಹಳ ಕಷ್ಟ. ನಾಲ್ಕೈದು ದಾರಿಗಳಿರೋದ್ರಿಂದ ಅದನ್ನೆಲ್ಲ ನೋಡ್ತಾ ಕೂರೋದಿಕ್ಕೂ ಸಾಧ್ಯ ಆಗಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಮಾಲನ್ನೇ ಮನೆ ಮಾಡಿಕೊಂಡಿದ್ದ. ಹಲವು ತಿಂಗಳ ಕಾಲ ಮಾಲ್‌ ಅನ್ನೇ ಠಿಕಾಣಿ ಹೂಡಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕಾರಲ್ಲಿ‌ ಬರುವ ಕಳ್ಳಿಯರ‌ ಕರಾಮತ್ತು – ಸಿಸಿಟಿವಿಯಲ್ಲಿ  ರೆಕಾರ್ಡ್ ಆಗಿದ್ದೇನು‌ ಗೊತ್ತಾ?

ಘಟನೆ ನಡೆದಿರುವುದು ಎಲ್ಲಿ?

ಈ ಘಟನೆ ನೆರೆಯ ರಾಷ್ಟ್ರ ಚೀನಾದಲ್ಲಿ ನಡೆದಿದೆ.  ಚೀನಾದ ಈ ವ್ಯಕ್ತಿ ಒಂದೋ ಎರಡೋ ದಿನದ ಮಟ್ಟಿಗೆ ಮಾಲನ್ನು ಮನೆ ಮಾಡಿಕೊಂಡಿಲ್ಲ. ಬರೋಬ್ಬರಿ ಆರು ತಿಂಗಳು ಆತ ಮಾಲ್ ನಲ್ಲಿಯೇ ವಾಸ ಮುಂದುವರೆಸಿದ್ದ. ಈತ ಅಲ್ಲಿ ನೆಲೆಸಿರುವುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಈ ಖತರ್ನಾಕ್‌ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಮಾಲ್‌ನ ಯಾವ ಭಾಗದಲ್ಲಿ ನೆಲೆಸಿದ್ದ?

ಈ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಚೆನ್ನಾಗಿಯೇ ತಲೆ ಓಡಿಸಿದ್ದಾನೆ. ಹೀಗಾಗಿಯೇ ಆರು ತಿಂಗಳ ಕಾಲ ಅಲ್ಲಿ ನೆಲೆಸಲು ಸಾಧ್ಯ ಆಯ್ತು. ಈತ ಯಾವ ಅಂಗಡಿಯನ್ನೂ ಟಾರ್ಗೆಟ್‌ ಮಾಡಿರಲಿಲ್ಲ. ಈ ವ್ಯಕ್ತಿ ಮಾಲ್‌ನ ಮೆಟ್ಟಿಲುಗಳ ಕೆಳಗೆ ಟೆಂಟ್ ಹಾಕಿದ್ದ. ಟೆಂಟ್ ಜೊತೆಗೆ ಮೇಜು, ಕುರ್ಚಿ, ಕಂಪ್ಯೂಟರ್ ಕೂಡ ಹಾಕಿಕೊಂಡಿದ್ದ. ವ್ಯಕ್ತಿ ಕಳೆದ 6 ತಿಂಗಳಿಂದ ಶಾಪಿಂಗ್ ಸೆಂಟರ್‌ನ ಔಟ್‌ಲೆಟ್ ಅನ್ನು ತನ್ನ ಮನೆ ಮಾಡಿಕೊಂಡಿದ್ದಲ್ಲದೆ, ಅಲ್ಲಿಯೇ ತನ್ನಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುತ್ತಿದ್ದ.

ಈ ಖತರ್ನಾಕ್‌ ಸಿಕ್ಕಿಬಿದ್ದಿದ್ದು ಹೇಗೆ?

ಸುಮಾರು ಆರು ತಿಂಗಳ ಕಾಲ ಮಾಲ್‌ನಲ್ಲಿ ಠಿಕಾಣಿ ಹೂಡಿದ್ದಾತ ಇಲ್ಲಿವರೆಗೂ ಯಾರ ಕಣ್ಣಿಗೂ ಸಿಕ್ಕಿಬಿದ್ದಿರಲಿಲ್ಲ. ಯಾರಿಗೂ ಒಂದೂ ಸುಳಿವು ಸಿಗದಂತೆ ನಿಭಾಯಿಸಿದ್ದ. ಇಲ್ಲೊಬ್ಬ ವ್ಯಕ್ತಿ ನೆಲೆಸಿದ್ದಾನೆ ಅಂತಾ ಯಾರಿಗೂ ಒಂಚೂರು ಡೌಟ್‌ ಬಂದಿರಲಿಲ್ಲ. ಆದ್ರೆ ಆ ದಿನ ಆತನ ಗ್ರಹಚಾರ ಕೆಟ್ಟಿತ್ತೋ ಏನೋ. ಆರು ತಿಂಗಳ ಕಾಲ ಅಡಗಿ ಕುಳಿತಿದ್ದಾತ ಸೆಕ್ಯುರಿಟಿ  ಕಣ್ಣಿಗೆ ಬಿದ್ದಾನೆ. ಇವನನ್ನು ನೋಡಿದ ಕೂಡಲೇ ಪ್ರಶ್ನಿಸಿದ್ದಾರೆ. ಈ ವೇಳೆ ಓದಲು ಶಾಂತವಾದ ಸ್ಥಳ ಹುಡುಕುತ್ತಿದ್ದೆ. ಇದು ಪ್ರಶಸ್ತವಾಗಿದ ಸ್ಥಳ ಅಂತಾ ಅನ್ನಿಸಿತು. ಹೀಗಾಗಿ ಇಲ್ಲೇ ಉಳಿದುಕೊಂಡಿದ್ದೇನೆ ಅಂತಾ ಹೇಳಿದ್ದಾನೆ. ಈ ಮಾತನ್ನು ಕೇಳಿದ ಸೆಕ್ಯೂರಿಟಿ ಗಾರ್ಡ್‌ಗೆ ಕರುಣೆ ಉಕ್ಕಿ ಬಂದಿದೆ. ಪಾಪ ಓದೋ ಹುಡುಗ ಅಂತಾ ಈ ವ್ಯಕ್ತಿಗೆ ಉಳಿದುಕೊಳ್ಳಲು ಅವಕಾಶ ನೀಡಿದ್ದಾರೆ.

ಕೈ ಕೊಟ್ಟ ಅದೃಷ್ಟ!

ಸೆಕ್ಯೂರಿಟಿಯನ್ನು ಮಂಗ ಮಾಡಿ ಈ ವ್ಯಕ್ತಿ ಹಲವು ತಿಂಗಳುಗಳ ಕಾಲ ಅಲ್ಲೇ ಉಳಿದುಕೊಂಡಿದ್ದ. ಮಾಲ್ ನಲ್ಲಿಯೇ ಮನೆ ಮಾಡಿದ್ದ ವ್ಯಕ್ತಿ  ಮುಖ್ಯ ಸೆಕ್ಯುರಿಟಿ ಗಾರ್ಡ್ ಕಣ್ಣಿಗೆ ಬೀಳೋವರೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ ಮುಖ್ಯ ಸೆಕ್ಯುರಿಟಿ ಗಾರ್ಡ್ ಗೆ ಈ ವ್ಯಕ್ತಿ ಟೆಂಟ್ ಹಾಕಿರುವುದು ಕಾಣ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ. ಮಾಲ್ ನಲ್ಲಿದ್ದ ಆತನ ಮನೆಯನ್ನು ತೆರವುಗೊಳಿಸಿದ್ದಾರೆ.  ಈ ಘಟನೆಗೆ ಸಂಬಂಧಿಸಿದ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ವಿಡಿಯೋದಲ್ಲಿ ಮಾಲ್ ನಲ್ಲಿರುವ ಈತನ ಮನೆ ನೋಡಿ ದಂಗಾಗಿದ್ದಾರೆ.

Shwetha M