ಅತ್ತೆ ಅಂತ್ಯಕ್ರಿಯೆಗೆ ಹೋದವನ ಬದುಕು ಅಂತ್ಯ – ಸರಯು ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅಟ್ಯಾಕ್

ಅತ್ತೆ ಅಂತ್ಯಕ್ರಿಯೆಗೆ ಹೋದವನ ಬದುಕು ಅಂತ್ಯ –   ಸರಯು ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅಟ್ಯಾಕ್

ಅತ್ತೆಯ ಅಂತ್ಯಕ್ರಿಯೆಗೆಂದು ಹೋದ ಅಳಿಯನನ್ನು ಮೊಸಳೆಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು.

ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ನಂತರ, ಅವರು ಸ್ನಾನ ಮಾಡಲು ಸರಯು ನದಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿದ್ದಾಗ ಹಠಾತ್ ಆಗಿ ಬಂದ ದೊಡ್ಡ ಮೊಸಳೆಯೊಂದು, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.

ಇದನ್ನೂ ಓದಿ: ಒಂದೇ ಒಂದು ಪಂದ್ಯವನ್ನಾಡದೆ ಫ್ಯಾನ್ಸ್‌ಗೆ ಬೇಸರ ಮಾಡಿದ ಧೋನಿ – ಐಪಿಎಲ್ ಮುಗಿಯುವ ಮುನ್ನವೇ ತಲಾ ರಾಂಚಿಗೆ ವಾಪಸ್

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ನದಿಯಲ್ಲಿ ಮೊಸಳೆಗಳ ಕಾಟ ಇರುವುದರಿಂದ ನೀರಿಗೆ ಇಳಿಯದಂತೆ ದೀಪಕ್ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅವರು ಈ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ತಿಳಿಸಿದ್ದಾರೆ.

ದೀಪಕ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ನದಿಯಲ್ಲಿ ಹುಡುಕಾಟ ನಡೆಸಿದರೂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಕ್ನೋದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಕರೆಯಿಸಲಾಗಿದೆ. ಇಡೀ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಯುವಕನ ದೇಹಕ್ಕಾಗಿ ನದಿಯ ದಡದಲ್ಲಿ ಕಣ್ಣೀರು ಹಾಕುತ್ತಾ ಕಾಯುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *