ಯುವತಿ ಮದುವೆ ನಿರಾಕರಿಸಿದ್ದಕ್ಕೆ HIV ಸೋಂಕಿತ ರಕ್ತ ಇಂಜೆಕ್ಟ್‌ ಮಾಡಿದ ಭೂಪ! – ಆಮೇಲೆ ಏನಾಯ್ತು?

ಯುವತಿ ಮದುವೆ ನಿರಾಕರಿಸಿದ್ದಕ್ಕೆ HIV ಸೋಂಕಿತ ರಕ್ತ ಇಂಜೆಕ್ಟ್‌ ಮಾಡಿದ ಭೂಪ! – ಆಮೇಲೆ ಏನಾಯ್ತು?

ಮದುವೆ ಎಂಬುದು ಗಂಡು ಮತ್ತು ಹೆಣ್ಣಿನ ನಡುವಿನ ಪವಿತ್ರ ಬಂಧ. ಇಬ್ಬರ ಮಧ್ಯೆ ಪ್ರೀತಿ ಇದ್ರೆ ಮಾತ್ರ ಜೀವನ ಪರ್ಯಂತ ಸುಖವಾಗಿ ಬಾಳಲು ಸಾಧ್ಯ. ಇದೀಗ ಇಲ್ಲೊಂದು ಕಡೆ ಯುವತಿ ಮದುವೆ ರದ್ದು ಮಾಡಿದ್ದಾಳೆ ಎಂಬ ಕಾರಣಕ್ಕೆ ಯುವಕ ಆಕೆಗೆ HIV ಸೋಂಕಿತ ರಕ್ತ ಇಂಜೆಕ್ಟ್‌ ಮಾಡಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: ಭಾರತೀಯರಿಗೆ ಗುಡ್‌ನ್ಯೂಸ್!‌ – ವಾರ್‌ ನಡುವೆಯೂ ಭಾರತಕ್ಕೆ 45,000 ಮೆಟ್ರಿಕ್ ಟನ್ LPG ಹೊತ್ತು ತಂದ ಶಿವಾಲಿಕ್‌ ಹಡಗು

ಈ ವಿಲಕ್ಷಣಕಾರಿ ಘಟನೆ ಹೈದರಾಬಾದ್‌ನ ಮೆಡ್‌ಚಾಲ್‌ ಎಂಬಲ್ಲಿ ನಡೆದಿದೆ. ಐಟಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ವ್ಯಕ್ತಿಯೊಬ್ಬ, ಮದುವೆ ರದ್ದು ಮಾಡಿದ್ದಕ್ಕಾಗಿ 24 ವರ್ಷದ ಮಹಿಳೆಗೆ ತನ್ನ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ್ದಾನೆ. ಇದೀಗ ಆರೋಪಿ ಅರೆಸ್ಟ್‌ ಆಗಿದ್ದಾನೆ.

ಘಟನೆಯ ವಿವರ

ಆರೋಪಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ದಿನಾಂಕ ಕೂಡ ನಿಗದಿಯಾಗಿತ್ತು. ಆದ್ರೆ ಮದುವೆ ದಿನ ಹತ್ತಿರವಾಗ್ತಿದ್ದಂತೆ ಆತನ ಪೋಷಕರು ಹೆಚ್‌ಐವಿ ಸೋಂಕಿತರಾಗಿದ್ದು, ಈತನಿಗೂ ಬಾಲ್ಯದಿಂದಲೇ ಸೋಂಕು ತಗುಲಿತ್ತು ಎಂಬ ವಿಚಾರ ಗೊತ್ತಾಗಿದೆ. ಈ ವಿಷಯ ಇತ್ತೀಚೆಗೆ ಹುಡುಗಿಯ ಮನೆಯವರಿಗೆ ಗೊತ್ತಾಗಿ ಅವರು ಮದುವೆ ರದ್ದು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ, ಮಾ.11ರ ಸಂಜೆ 5ರ ವೇಳೆ ಮಹಿಳೆ ಫ್ಲಾಟ್‌ನಲ್ಲಿದ್ದಾಗ ನುಗ್ಗಿ ಕಿಸೆಯಿಂದ ಸಿರಿಂಜ್‌ ತೆಗೆದು ತನ್ನ ರಕ್ತವನ್ನು ಮಹಿಳೆಗೆ ಚುಚ್ಚಿದ್ದಾನೆ. ಮಾರನೆ ದಿನ ಮಹಿಳೆಗೆ ಜ್ವರ ಬಂದಿದೆ. ಈ ಬೆನ್ನಲ್ಲೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಇಂಜೆಕ್ಟ್‌ ಮಾಡಿರುವುದು ಬಯಲಾಗಿದೆ. ಇದೀಗ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಆರೋಪಿ ವಿರುದ್ದ ಯುವತಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Shwetha M