ನಾಯಕತ್ವ ಗೊಂದಲ ಹೈಕಮಾಂಡ್‌  ಸೃಷ್ಟಿ ಮಾಡಿಲ್ಲ – ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು : ಮಲ್ಲಿಕಾರ್ಜುನ್ ಖರ್ಗೆ

ನಾಯಕತ್ವ ಗೊಂದಲ  ಹೈಕಮಾಂಡ್‌  ಸೃಷ್ಟಿ ಮಾಡಿಲ್ಲ –  ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು : ಮಲ್ಲಿಕಾರ್ಜುನ್ ಖರ್ಗೆ

ರಾಜ್ಯದಲ್ಲಿ ಸಿಎಂ ಕುರ್ಚಿ ಕಾದಾಟಕ್ಕೆ ಬ್ರೇಕ್ ಬಿದ್ದಿಲ್ಲ. ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿದು, ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಮಾತು ಕೇಳಿ ಬರ್ತಾನೆ ಇದೆ. ಈ ನಡುವೆ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಮಾತನಾಡಿದ್ದಾರೆ.  ನಾಯಕತ್ವ ಗೊಂದಲ  ಕಾಂಗ್ರೆಸ್‌ ಹೈಕಮಾಂಡ್‌  ಸೃಷ್ಟಿ ಮಾಡಿಲ್ಲ, ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ ಹೈಕಮಾಂಡ್‌ ಅಂದ್ರೆ ಹೇಗೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಬೇಕಂತಲೇ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? – ಗಿಲ್ಲಿ ಮಾತಿಗೆ ಸಿಟ್ಟಾದ ಅಶ್ವಿನಿ ಗೌಡ

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ಶಾಸಕರು, ಸಚಿವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ  ಕುರ್ಚಿ ಕದನವನ್ನು ಜೀವಂತವಾಗಿಟ್ಟಿದ್ದಾರೆ. ನಾನೇ 5 ವರ್ಷ ಸಿಎಂ, ಎರಡೂವರೆ ವರ್ಷಕ್ಕೆ ನಾಯಕತ್ವ ಬದಲಾಗುತ್ತೆ ಅಂತ ಎಲ್ಲೂ ಒಪ್ಪಂದ ಆಗಿಲ್ಲ. ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ ಸೆಷನ್‌ನಲ್ಲಿ ಹೇಳಿಕೆ ಕೊಟ್ಟಿದ್ದರು. ನಂತರ, ನನಗೂ ಸಿಎಂಗೂ ಒಪ್ಪಂದವಾಗಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದರು. ಇದರ ಬೆನ್ನಲ್ಲೇ ಸಿಎಂ ಆಪ್ತರ ಭೇಟಿಗೆ ಡಿಕೆಶಿ ಮುಂದಾಗಿದ್ದಾರೆ. ಈ ನಡುವೆ ಸ್ಥಳೀಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಕ್ಷ್ಮ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ಇಲ್ಲಿನ ಸಮಸ್ಯೆಯನ್ನು ಇಲ್ಲೇ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರ ಕುರಿತು ಮಾತನಾಡಿದ ಅವರು, ಗೊಂದಲವನ್ನು ಹೈಕಮಾಂಡ್‌ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ ಅಂತ ಹೇಳಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.  ಮುಂದುವರಿದು, ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳೆದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Kishor KV