EaseMyTripನಿಂದ ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು – ಈಸ್ ಮೈ ಟ್ರಿಪ್ ಸಂಸ್ಥೆಗೆ ಮಾಲ್ಡೀವ್ಸ್ ಪ್ರವಾಸೋದ್ಯಮ ಮನವಿ!

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿರುವ ವಿವಾದಾತ್ಮಕ ಹೇಳಿಕೆಯಿಂದ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಸಿಡಿದೆದ್ದಿದ್ದಾರೆ. ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ #BoycottMaldives ಎಂಬ ಅಭಿಯಾನ ನಡೆಸಲಾಗುತ್ತಿದೆ. ಸಿನಿಮಾ ತಾರೆಯರು, ಗಣ್ಯರು ಕೂಡ ಮಾಲ್ಡೀವ್ಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. EaseMyTrip ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ. ಈ ಬೆನ್ನಲೇ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆಯು ತಮ್ಮ ಪ್ಲಾಟ್ಫಾರ್ಮ್ನಲ್ಲಿ ಮಾಲ್ಡೀವ್ಸ್ಗೆ ಫ್ಲೈಟ್ ಬುಕಿಂಗ್ ಮತ್ತೆ ಆರಂಭಿಸಿ ಎಂದು ಈಸ್ ಮೈ ಟ್ರಿಪ್ಗೆ ಮನವಿ ಮಾಡಿದೆ.
ಇದನ್ನೂ ಓದಿ: ಭಾರತ – ಮಾಲ್ಡೀವ್ಸ್ ವಿವಾದ – ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒತ್ತಾಯ!
ಮಾಲ್ಡೀವ್ಸ್ ಸಚಿವರು ಭಾರತದ ಪ್ರಧಾನಿ ಮತ್ತು ಭಾರತೀಯ ಬಗ್ಗೆ ಅವಹೇಳನ ಮಾಡಿದ ಬಳಿಕ ಈಸ್ ಮೈ ಟ್ರಿಪ್ ಸಂಸ್ಥೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ಸ್ ರದ್ದುಗೊಳಿಸಿತ್ತು. ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯತೆ ದೊಡ್ಡದು ಎಂದು ಹೇಳಿದ ಈಸ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್ಗೆ ಫ್ಲೈಟ್ ಬುಕಿಂಗ್ಗಳನ್ನೂ ನಿಲ್ಲಿಸಿತ್ತು. ಅಂತೆಯೇ, ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ ಹೊಂದಿರುವ ಮಾಲ್ಡೀವ್ಸ್ಗೆ ಈ ಬೆಳವಣಿ ಪೆಟ್ಟು ಕೊಡುವ ಸಾಧ್ಯತೆ ಇದೆ. ಅಲ್ಲಿನ ಪ್ರವಾಸೋದ್ಯಮ ಸಂಘಟನೆಗಳು ಈ ವಿವಾದ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆಯು ತಮ್ಮ ಪ್ಲಾಟ್ಫಾರ್ಮ್ನಲ್ಲಿ ಮಾಲ್ಡೀವ್ಸ್ಗೆ ಫ್ಲೈಟ್ ಬುಕಿಂಗ್ ಮತ್ತೆ ಆರಂಭಿಸಿ ಎಂದು ಈಸ್ ಮೈ ಟ್ರಿಪ್ಗೆ ಮನವಿ ಮಾಡಿದೆ.
ಮಾಲ್ಡೀವ್ಸ್ ಟೂರ್ ಮತ್ತು ಟ್ರಾವಲ್ ಆಪರೇಟರ್ಸ್ ಸಂಘಟನೆ (MATATO) ಹೇಳಿಕೆ ನೀಡಿದ್ದು, ಮಾಲ್ಡೀವ್ಸ್ನ ಸಚಿವರು ಆಡಿದ ಮಾತು ಸಾಮಾನ್ಯ ಮಾಲ್ಡೀವ್ಸ್ ಜನರ ಧ್ವನಿ ಅಲ್ಲ. ಅದನ್ನು ನಿರ್ಲಕ್ಷಿಸಿ ಎಂದು ಈಸ್ ಮೈ ಟ್ರಿಪ್ ಸಿಇಒ ನಿಶಾಂತ್ ಪಿಟ್ಟಿ ಅವರಿಗೆ ಮನವಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಬಳಿಕ ಮಾಲ್ಡೀವ್ಸ್ಗೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅದರಲ್ಲೂ ಪ್ರಧಾನಿ ಬಗ್ಗೆ ಮಾಲ್ಡೀವ್ಸ್ ಸಚಿವರು ಲೇವಡಿ ಮಾಡಿದ ಬಳಿಕ ಇದು ಇನ್ನಷ್ಟು ಪರಿಣಾಮ ಬೀರಿದೆ.