ಭಾರತ – ಮಾಲ್ಡೀವ್ಸ್ ವಿವಾದ – ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒತ್ತಾಯ!

ಭಾರತ – ಮಾಲ್ಡೀವ್ಸ್ ವಿವಾದ – ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒತ್ತಾಯ!

ಭಾರತದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್‌ ಸರ್ಕಾರದ ಪ್ರತಿನಿಧಿಗಳು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಂತೆ ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಇದೇ ಸಿಟ್ಟಲ್ಲಿ ಸಾಕಷ್ಟು ಭಾರತೀಯರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಲಕ್ಷ ದ್ವೀಪ ಅಥವಾ ಬೇರೆ ದೇಶಗಳ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ತಾವು ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ ಮಾಹಿತಿಯನ್ನ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡ್ತಿದ್ದಾರೆ. ಬಾಯ್ಕಾಟ್ ಮಾಲ್ಡೀವ್ಸ್‌ ಅಭಿಯಾನಕ್ಕೆ ತಮ್ಮ ಬೆಂಬಲ ಪ್ರಕಟಿಸಿದ್ದಾರೆ. ಇದರ ನಡುವೆ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿರುವುದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು ‘ತೀವ್ರಗೊಳಿಸುವಂತೆ’ ಚೀನಾಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್‌ಗೆ ಟೀಮ್ ಆಯ್ಕೆ – ಇವರಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಯಾರಿದ್ದಾರೆ?

ಹೌದು, ಭಾರತ-ಮಾಲ್ಡೀವ್ಸ್ ವಿವಾದದ ನಡುವೆ ಚೀನಾ ಪ್ರವಾಸ ಕೈಗೊಂಡಿರುವ ಮುಯಿಝು ದಕ್ಷಿಣ ಚೀನಾದ ಬಂದರು ನಗರದಲ್ಲಿರುವ “ಇನ್ವೆಸ್ಟ್ ಮಾಲ್ಡೀವ್ಸ್” ವೇದಿಕೆಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಫುಝೌನಲ್ಲಿ, ಮೊಹಮ್ಮದ್ ಮುಯಿಝು ಅವರ ನಿಯೋಗವು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರನ್ನು ಬೀಜಿಂಗ್‌ನಲ್ಲಿ ತಮ್ಮ ವಾರದ ಭೇಟಿಯ ಸಮಯದಲ್ಲಿ ಭೇಟಿ ಮಾಡಲಿದ್ದಾರೆ. ಇಲ್ಲಿ, ಮೂಲಸೌಕರ್ಯದಿಂದ ಪ್ರವಾಸೋದ್ಯಮದವರೆಗಿನ ಒಪ್ಪಂದಗಳಿಗೆ ಉಭಯ ದೇಶಗಳ ನಡುವೆ ಸಹಿ ಹಾಕುವ ನಿರೀಕ್ಷೆಯಿದೆ.

ಮುಯಿಝು ತನ್ನ ‘ಇಂಡಿಯಾ ಔಟ್’ ಪ್ರಚಾರದಿಂದಲೇ ಗೆದ್ದು ಅಧ್ಯಕ್ಷರಾದರು. ನವದೆಹಲಿಯ ಬಹುದೊಡ್ಡ ಪ್ರಭಾವ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು. ನಂತರ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಾಲ್ಡೀವ್ಸ್ ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯನ್ನು ದೇಶವನ್ನು ತೊರೆಯುವಂತೆ ಕೇಳಿಕೊಂಡಿದೆ. ಇನ್ನು ಮಾಲ್ಡೀವ್ಸ್ ನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮೊದಲು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿತ್ತು. ಆದರೆ ಈ ಬಾರಿ ಮುಯಿಝು ಚೀನಾಕ್ಕೆ ಭೇಟಿ ನೀಡುವ ಮೂಲಕ ತನ್ನ ದೇಶದಲ್ಲಿ ಸಂಪ್ರದಾಯವನ್ನು ಮುರಿದಿದ್ದಾರೆ.

ಇನ್ನು ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಡಿಯಲ್ಲಿ ಚೀನಾಕ್ಕೆ ಮೀನು ಉತ್ಪನ್ನಗಳ ರಫ್ತು ಹೆಚ್ಚಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಮುಯಿಝು ಹೇಳಿದರು. ಮಾಲ್ಡೀವ್ಸ್‌ನಲ್ಲಿ ಮೀನುಗಾರಿಕೆಯು ಉದ್ಯೋಗದ ಅತಿದೊಡ್ಡ ಮೂಲವಾಗಿದೆ. ಏಕೆಂದರೆ 99% ಪ್ರದೇಶವು ಸಮುದ್ರದಿಂದ ಆವೃತವಾಗಿದೆ.

ಕಳೆದ ವರ್ಷ, ಚೀನಾ ನ್ಯಾಷನಲ್ ಮೆಷಿನರಿ ಇಂಡಸ್ಟ್ರಿ ಕಾರ್ಪೊರೇಷನ್ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಕ್ಷೇತ್ರದಲ್ಲಿ $140 ಮಿಲಿಯನ್ ಹೂಡಿಕೆ ಮಾಡಿತು. ಇದು ದೇಶದ ರಾಷ್ಟ್ರೀಯ ಆದಾಯದ ಕಾಲು ಭಾಗಕ್ಕಿಂತ ಹೆಚ್ಚಿನದಾಗಿದೆ. 2019ರಲ್ಲಿ ಚೀನೀ ಪ್ರವಾಸಿಗರು ಶೇಕಡ 19.7ರಷ್ಟು ವಿದೇಶಿ ಸಂದರ್ಶಕರನ್ನು ಪ್ರತಿನಿಧಿಸಿದರು. ಇದು ಅವರನ್ನು ಅತಿದೊಡ್ಡ ಪ್ರವಾಸಿ ಸಮೂಹವನ್ನಾಗಿ ಮಾಡಿದೆ.

Shwetha M