ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!

ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!

ವಾಕಿಂಗ್.. ಡೈವಿಂಗ್.. ಕ್ಯಾಮರಾಗೆ ಒಂದಷ್ಟು ಪೋಸ್.. ಹಾಗೆಯೇ ಸೋಷಿಯಲ್​​ ಮೀಡಿಯಾದಲ್ಲಿ ಒಂದು ಪೋಸ್ಟ್.. ಪ್ರಧಾನಿ ಮೋದಿ ಮಾಡಿದ್ದಿಷ್ಟೇ.. ಕೇವಲ ಇಷ್ಟಕ್ಕೇ ಇಡೀ ಮಾಲ್ಡೀವ್ಸ್ ದ್ವೀಪವೇ ನಡುಗಿ ಹೋಗಿದೆ. 140 ಕೋಟಿ ಭಾರತೀಯರ ಮುಂದೆ ನಾವು ಏನೇನೂ ಅಲ್ಲ ಅನ್ನೋದು ಈಗ ಮಾಲ್ಡೀವ್ಸ್​ಗೂ ಸರಿಯಾಗಿಯೇ ಅರ್ಥವಾಗ್ತಿದೆ. ತಲೆಗೆ ಹತ್ತಿದ್ದ ಅವರ ಅಹಂಕಾರ ಒಮ್ಮೆಗೇ ಸಮುದ್ರ ನೀರಲ್ಲಿ ಕೊಚ್ಚಿಕೊಂಡು ಹೋಗ್ತಿದೆ. ಬಾಯಿಗೆ ಬಂದಂತೆ ಮಾತನಾಡಿದ ಮೂವರು ಮಿನಿಸ್ಟರ್ಸ್​ಗಳ ಬಾಯಿಗೆ ಬೀಗ ಜಡಿದಿದ್ದಷ್ಟೇ ಅಲ್ಲ, ಕುರ್ಚಿಯಿಂದಲೇ ಕೆಳಕ್ಕೆ ಬಿದ್ದಿದ್ದಾರೆ. ಕೋಲು ಕೊಟ್ಟು ಹೊಡೆಸಿಕೊಳ್ಳೋದು ಅಂದರೆ ಇದೇ ಅಲ್ವಾ. ಕೆಣಕಿ ಪೆಟ್ಟು ತಿಂದ ಮಾಲ್ಡೀವ್ಸ್​​ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.

ಇದನ್ನೂ ಓದಿ: EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು –  ಈಸ್ ಮೈ ಟ್ರಿಪ್ ಸಂಸ್ಥೆಗೆ ಮಾಲ್ಡೀವ್ಸ್ ಪ್ರವಾಸೋದ್ಯಮ ಮನವಿ!

ಜನವರಿ 2ರಂದು ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದರು. ಬಳಿಕ ಲಕ್ಷದ್ವೀಪದ ಒಂದಷ್ಟು ಫೋಟೋಗಳನ್ನ ಕೂಡಾ ಸೋಷಿಯಲ್​ ಮೀಡಿಯಾದಲ್ಲಿ ಹಾಕ್ಕೊಂಡು, ಟೂರಿಸಂನ್ನ ಪ್ರಮೋಟ್ ಮಾಡಿದ್ದರು. ಪ್ರಧಾನಿಯ ಈ ಪೋಸ್ಟ್​ನಿಂದ ನೆರೆಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನ ಮೂವರು ಮಿನಿಸ್ಟರ್ಸ್​​ಗೆ ಉರಿ ಹೊತ್ತಿಕೊಂಡಿತ್ತು. ಮರಿಯಮ್ ಶಿವ್ನ, ಮಾಲ್ಷಾ ಷರೀಫ್ ಮತ್ತು ಮೆಹಜೂಮ್ ಮಾಜಿದ್ ಈ ಮೂವರು ಪ್ರಧಾನಿ ಮೋದಿಯನ್ನ ಮತ್ತು ಭಾರತೀಯರನ್ನ ಟಾರ್ಗೆಟ್ ಮಾಡಿದ್ರು. ನರೇಂದ್ರ ಮೋದಿ ಒಬ್ಬ ಹಾಸ್ಯಗಾರ.. ಇಸ್ರೇಲ್​ನ ಕೈಗೊಂಬೆ. ಭಾರತದ ಜನರ ಹತ್ತಿರ ಹೋದ್ರೆ ವಾಸನೆ ಬರುತ್ತೆ. ಈಗಲೂ ಭಾರತೀಯರು ಬಯಲಿನಲ್ಲಿ ಶೌಚ ಮಾಡ್ತಾರೆ. ಭಾರತದ ಬೀಚ್​ಗಳ ಬಳಿ ಇರೋ ರೆಸಾರ್ಟ್​​ಗಳಿಗೆ ಹೋದರೆ ಗಬ್ಬು ನಾರುತ್ತಾ ಇರುತ್ತೆ. ಹೀಗಾಗಿ ಭಾರತೀಯರು ಲಕ್ಷಾದ್ವೀಪವನ್ನ ಎಷ್ಟೇ ಪ್ರಮೋಟ್ ಮಾಡಿದ್ರೂ ಯಾವತ್ತಿಗೂ ಮಾಲ್ಡೀವ್ಸ್​​ಗೆ ಸಮಾನವಾಗಿ ನಿಲ್ಲೋಕೆ ಸಾಧ್ಯವೇ ಇಲ್ಲ ಎಂದಿದ್ದರು. ಈ ಪೈಕಿ ಮಾಲ್ಡೀವ್ಸ್​ನ ಒಬ್ಬರು ಮಿನಿಸ್ಟರ್ ಬಯಲಿನಲ್ಲೇ ಶೌಚ ಮಾಡ್ತಾರೆ ಅಂತಾ ಹೇಳ್ಕೊಂಡು ಮೀನುಗಾರಿಕೆಗೆ ರೆಡಿಯಾಗ್ತಾ ಮೀನುಗಾರನ ಫೋಟೋವೊಂದನ್ನ ಶೇರ್​ ಮಾಡಿದ್ರು. ಈ ಮೂವರು ಮೂರ್ಖ ಮಿನಿಸ್ಟರ್ಸ್​​ಗಳ ಸ್ಟೇಟ್​​ಮೆಂಟ್​​ನಿಂದ 140 ಕೋಟಿ ಜನಸಂಖ್ಯೆ ಇರೋ ಇಡೀ ಭಾರತವೇ ಕೆರಳಿಬಿಟ್ಟಿದೆ. ಅಲ್ಲಿವರೆಗೂ ಭಾರತೀಯರೆಲ್ಲಾ ತಮ್ಮ ಪಾಡಿಗೆ ಮೋದಿ ವಿಸಿಟ್ ಮಾಡಿದ ಲಕ್ಷದ್ವೀಪದ ಟೂರಿಸ್ಟ್​ ಪ್ಲೇಸ್​​ಗಳನ್ನ ಸರ್ಚ್ ಮಾಡ್ತಾ. ಟ್ರಿಪ್​ ಪ್ಲ್ಯಾನ್ ಮಾಡ್ತಾ ಇದ್ರು. ಭಾರತದಲ್ಲೂ ಇಂಥದ್ದೊಂದು ಜಾಗ ಇದ್ಯಾ ಅಂತಾ ಎಲ್ಲರೂ ಆಶ್ಚರ್ಯದಿಂದ ಚೆಕ್ ಮಾಡ್ತಾ ಇದ್ರು. ಯಾವಾಗ ಮಾಲ್ಡೀವ್ಸ್​ನ ಈ ಮೂವರು ಮಿನಿಸ್ಟರ್ಸ್ ನಮ್ಮ ಬಗ್ಗೆಯೇ ಅವಹೇಳನಾಕಾರಿ ಹೇಳಿಕೆಗಳನ್ನ ಕೊಟ್ರೋ, ಅಲ್ಲಿಂದ ಶುರುವಾಯ್ತು ನೋಡಿ ಅಸಲಿ ಆಟ.

ಬಾಯ್ಕಾಟ್ ಮಾಲ್ಡೀವ್ಸ್.. ಬಾಯ್ಕಾಟ್ ಮಾಲ್ಡೀವ್ಸ್.. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಬಾಯ್ಕಾಟ್ ಮಾಲ್ಡೀವ್ಸ್ ಫುಲ್​ ಟ್ರೆಂಡಿಂಗ್. ಸಾವಿರಾರು ಮಂದಿ ತಮ್ಮ ಮಾಲ್ಡೀವ್ಸ್ ಟ್ರಿಪ್​ನ್ನೇ ಕ್ಯಾನ್ಸಲ್ ಮಾಡಿ ಲಕ್ಷದ್ವೀಪಕ್ಕೆ ಟ್ರಿಪ್​ ಪ್ಲ್ಯಾನ್ ಮಾಡುತ್ತಾ, ನಮ್ಮದೇ ನೆಲದ ಸೌಂದರ್ಯವನ್ನ ಪ್ರಮೋಟ್ ಮಾಡೋಕೆ ಶುರು ಮಾಡಿದ್ರು. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ನಿರ್ತಾರೆ ಹೇಳಿ.. ಅದ್ರಲ್ಲೂ ಭಾರತೀಯರಿಗಂತೂ ಸ್ವಾಭಿಮಾನ ಅನ್ನೋದು ಸ್ವಲ್ಪ ಜಾಸ್ತಿನೇ ಇದೆ. ಹೀಗಾಗಿ ಇಡೀ ದೇಶದ ಜನರೇ ಒಟ್ಟಾಗಿ ಮಾಲ್ಡೀವ್ಸ್​ನ್ನ ಬಾಯ್ಕಾಟ್ ಮಾಡೋಕೆ ನಿರ್ಧರಿಸಿದ್ರು. ಭಾರತೀಯರ ಲಕ್ಷ್ಯ ಲಕ್ಷದ್ವೀಪದತ್ತ ಟರ್ನ್ ಆಗ್ತಾನೆ ಅತ್ತ ಮಾಲ್ಡೀವ್ಸ್ ಸರ್ಕಾರ ಕೈಕೈ ಹಿಸುಕಿಕೊಳ್ಳೋಕೆ ಶುರು ಮಾಡಿತ್ತು. ದ್ವೀಪ ರಾಷ್ಟಕ್ಕೆ ಬೆಂಕಿ ಬಿದ್ದಾಗಿತ್ತು. ಇದ್ರ ಪರಿಣಾಮ ಮಾಲ್ಡೀವ್ಸ್ ಈಗ ಕಂಪ್ಲೀಟ್ ಆಗಿ ಬ್ಯಾಕ್​​ಫುಟ್​​ಗೆ ಹೋಯ್ತು. ಸಚಿವರ ಹೇಳಿಕೆ ಸರ್ಕಾರದ ನಿಲುವನ್ನ ರೆಪ್ರೆಸೆಂಟ್ ಮಾಡಲ್ಲ ಅಂತಾ ಹೇಳ್ಕೊಂಡು ಮೂವರು ಮಂತ್ರಿಗಳನ್ನ ಕಿತ್ತು ಬಿಸಾಕಿದ್ರು.

ಇಲ್ಲಿ ಇನ್ನೊಂದು ಸೂಕ್ಷ್ಮ ರಾಜತಾಂತ್ರಿಕ ವಿಚಾರವನ್ನ ಕೂಡ ಹೇಳಲೇಬೇಕು. ಮಾಲ್ಡೀವ್ಸ್​​ನ ಆ ಮೂವರು ಮಂತ್ರಿಗಳು ಭಾರತೀಯರ ಬಗ್ಗೆ, ಭಾರತದ ಪ್ರಧಾನಿ ಬಗ್ಗೆ ಆ ರೀತಿ ಅವಹೇಳನಾಕಾರಿ ಸ್ಟೇಟ್​​ಮೆಂಟ್​​ಗಳನ್ನ ನೀಡುವಷ್ಟು ಧೈರ್ಯ ಅವರಿಗೆ ಬಂದಿದ್ದು ಹೇಗೆ ಅನ್ನೋದು. ಯಾಕಂದ್ರೆ ಇದುವರೆಗೂ ಮಾಲ್ಡೀವ್ಸ್​ ಭಾರತದ ಅತ್ಯಂತ ಆಪ್ತ ರಾಷ್ಟ್ರ ಅಂತಾನೆ ಗುರುತಿಸಿಕೊಂಡಿದೆ. ರಾಜತಾಂತ್ರಿಕ ಭಾಷೆಯಲ್ಲಿ ಹೇಳೋದಾದ್ರೆ ಕೋಸೆಸ್ಟ್ ಆ್ಯಲಿ.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಹೀಗೆ ಸಾಕಷ್ಟು ಕ್ಷೇತ್ರಗಳಿಗೆ ಸಂಬಂಧಿಸಿ ಮಾಲ್ಡೀವ್ಸ್ ತಲೆ ತಲಾಂತರದಿಂದ ಹಿಡಿದು ಇವತ್ತಿಗೂ ಭಾರತವನ್ನೇ ಅವಲಂಬಿಸಿದೆ. ಮಾಲ್ಡೀವ್ಸ್​ ಜೊತೆಗಿನ ಸಂಪರ್ಕವಿಲ್ಲದೆ ಭಾರತೀಯರಿಗೆ ಬದುಕಬಹುದು. ಆದ್ರೆ ಭಾರತದ ಸಂಪರ್ಕ ಇಲ್ಲದೆ ಮಾಲ್ಡೀವ್ಸ್​​ಗೆ ಸರ್ವೈವ್ ಆಗೋಕೆ ಸಾಧ್ಯವೇ ಇಲ್ಲ. ಇದು ಅವರ ಸ್ವಿಚ್ಯುವೇಶನ್. ರಿಯಾಲಿಟಿ ಹೀಗಿದ್ರೂ, ಮೂವರು ಮಂತ್ರಿಗಳಿಗೆ ಆ ರೀತಿಯ ಸ್ಟೇಟ್​​ಮೆಂಟ್ ಕೊಡೋಕೆ ಧೈರ್ಯ ಹೇಗೆ ಬಂತು ಅನ್ನೋದು ಪ್ರಶ್ನೆ. ಇದ್ರ ಹಿಂದೆ ಇರೋದು ಮತ್ಯಾರೂ ಯಾವಾಗಲೂ ಭಾರತದ ಬೆನ್ನಿಗೆ ಚಾಕು ಇರಿಯೋ ಚೀನಾ. ನೂತನವಾಗಿ ಆಯ್ಕೆಯಾಗಿರೋ ಮಾಲ್ಡೀವ್ಸ್​ನ ಅಧ್ಯಕ್ಷ ಮೊಹಮ್ಮದ್ ಮೊಯಿಜು ಚೀನಾಗೆ ಭೇಟಿ ನೀಡಿದ್ದಾರೆ. ಆ ಟೈಮ್​​ನಲ್ಲೇ ಮೂವರು ಮಂತ್ರಿಗಳಿಂದ ಈ ಸ್ಟೇಟ್​ಮೆಂಟ್​ ಬಂದಿದೆ.

ಇದೇ ಮೊದಲ ಬಾರಿಗೆ ಮಾಲ್ಡೀವ್ಸ್​ನ ಅಧ್ಯಕ್ಷರೊಬ್ಬರು ಆ ಹುದ್ದೆಗೆ ಏರಿದ ಮೇಲೆ ಭಾರತಕ್ಕೆ ಭೇಟಿ ನೀಡೋ ಮೊದಲು ಚೀನಾಗೆ ತೆರಳಿರೋದು ಇದೇ ಫಸ್ಟ್ ಟೈಮ್. ಈ ಹಿಂದೆಲ್ಲಾ ಮಾಲ್ಡೀವ್ಸ್​​ ನೂತನ ಅಧ್ಯಕ್ಷರಾದವರು ಮೊದಲಿಗೆ ಭಾರತಕ್ಕೆ ಭೇಟಿ ನೀಡ್ತಾ ಇದ್ರು. ಬಳಿಕ ಬೇರೆ ದೇಶಗಳ ಪ್ರವಾಸ ಕೈಗೊಳ್ತಾ ಇದ್ರು. ಆದ್ರೆ ಹೊಸ ಅಧ್ಯಕ್ಷ ಮೊಹಮ್ಮದ್ ಮೊಯಿಜು ನೇರವಾಗಿ ಚೀನಾದ ಬುಟ್ಟಿಗೆ ಹೋಗಿ ಬಿದ್ದಿದ್ದಾರೆ. ಮೊಹಮ್ಮದ್ ಮೊಯಿಜುಗೆ ಮೊದಲಿನಿಂದಲೂ ಚೀನಾದ ಮೇಲೆ ಹೆಚ್ಚಿನ ಒಲವು ಇತ್ತು. ಭಾರತವನ್ನ ಕಂಡ್ರೆ ಈ ಮನುಷ್ಯನಿಗೆ ಆಗೋದಿಲ್ಲ. ಚುನಾವಣಾ ಪ್ರಚಾರದ ವೇಳೆಯೂ ಇಂಡಿಯಾ ಔಟ್ ಘೋಷಣೆಗಳನ್ನ ಕೂಗುತ್ತಾ, ಭಾರತ ವಿರೋಧಿ ಱಲಿಗಳನ್ನ ನಡೆಸ್ತಾನೆ ಬಂದಿದ್ರು.

ಹಿಂದಿನಿಂದಲೂ ಭಾರತ ನೀಡ್ತಾ ಇರೋ ನೆರವನ್ನ ಮರೆತೇ ಬಿಟ್ಟಿದ್ದಾರೆ. ಈ ಹಿಂದೆ ಭಾರತದಂತೆ ಮಾಲ್ಡೀವ್ಸ್​​ನ್ನ ಬ್ರಿಟೀಷರು ಆಳಿದ್ರು. ನಮ್ಮಂತೆಯೇ ಅವರು ಕೂಡ ಗುಲಾಮಿರಾಗಿಯೇ ಇದ್ರು. ನಮಗೆ 1947ರಲ್ಲಿ ಸ್ವಾತಂತ್ರ್ಯ ಸಿಕ್ರೆ, ಮಾಲ್ಡೀವ್ಸ್​ಗೆ 1965ರಲ್ಲಿ ಬ್ರಿಟೀಷರ ಆಡಳಿತದಿಂದ ಮುಕ್ತಿ ಸಿಗುತ್ತೆ. ಆದ್ರೆ ಮಾಲ್ಡೀವ್ಸ್​ಗೆ ಒಂದು ದೇಶದ ಮಾನ್ಯತೆಯನ್ನೇ ಕೊಟ್ಟಿರೋದೆ ಭಾರತ. ಒಂದು ದ್ವೀಪವಾದ್ರೂ ಮಾಲ್ಡೀವ್ಸ್​​ನ್ನ ಕೂಡ ಒಂದು ರಾಷ್ಟ್ರ ಅಂತಾ ಮೊದಲು ಪರಿಗಣಿಸಿದ್ದೇ ನಾವು. ಹೀಗಾಗಿ ಅಂದಿನಿಂದಲೂ ಮಾಲ್ಡೀವ್ಸ್​ ಕೂಡ ಭಾರತವನ್ನ ತನ್ನ ಸಹೋದರ ರಾಷ್ಟ್ರ ಅಂತಾ ಟ್ರೀಟ್ ಮಾಡ್ತಾ ಬಂದಿತ್ತು. ಕೇವಲ 298 ಕಿಲೋ ಮೀಟರ್​ ವ್ಯಾಪ್ತಿಯಲ್ಲಷ್ಟೇ ಇರೋ ಮಾಲ್ಡೀವ್ಸ್​ಗೆ ನಮ್ಮ ಕೇರಳದಿಂದ 800 ಕಿಲೋ ಮೀಟರ್​ಗಷ್ಟೇ ದೂರ ಇರೋದು. ಸುಮಾರು 5 ಲಕ್ಷ 15 ಸಾವಿರ ಮಾಲ್ಡೀವ್ಸ್​ನ ಜನಸಂಖ್ಯೆ. ಈ ಪೈಕಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ. ಈಗ ಟೂರಿಸಂನಲ್ಲಿ ಮಾಲ್ಡೀವ್ಸ್​ ಜೊತೆಗೆ ಕಾಂಪಿಟೀಶನ್​ಗೆ ಇಳಿದಿರೋ ನಮ್ಮ ಲಕ್ಷದ್ವೀಪದಲ್ಲೂ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರೋದು. ಒಂದು ಕಾಲದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷಾದ್ವೀಪದಲ್ಲಿ ಬೌದ್ಧರೇ ಶೇಕಡಾ 90ರಷ್ಟಿದ್ರು. ನಂತರ ಇವರೆಡೂ ದ್ವೀಪಗಳನ್ನ ಮುಸ್ಲಿಮ್ ಸಮುದಾಯದ ಜನರ ಸಂಖ್ಯೆ ಹೆಚ್ಚಾಯ್ತು. ಇನ್ನು ಮಾಲ್ಡೀವ್ಸ್​ ಆರ್ಥಿಕತೆಗೆ ಭಾರತ ಅತ್ಯಂತ ಅನಿವಾರ್ಯವಾಗಿರೋದ್ಯಾಕೆ ಅನ್ನೋ ವಿಚಾರವನ್ನೂ ಇಲ್ಲಿ ತಿಳಿದುಕೊಳ್ಳಲೇಬೇಕಾಗುತ್ತೆ.

ಮಾಲ್ಡೀವ್ಸ್​ಗೆ ಭೇಟಿ ನೀಡೋ ವಿದೇಶಿಗರ ಪೈಕಿ ಅತೀ ಹೆಚ್ಚಿನ ಸಂಖ್ಯೆಯ ಟೂರಿಸ್ಟ್​ಗಳು ಭಾರತೀಯರೇ ಆಗಿದ್ದಾರೆ. ಪ್ರತಿವರ್ಷ ಭಾರತದಿಂದ 2-3 ಲಕ್ಷ ಮಂದಿ ಮಾಲ್ಡೀವ್ ಪ್ರವಾಸ ಕೈಗೊಳ್ತಾರೆ. ಅಂದ್ರೆ ಅಲ್ಲಿನ ಟೂರಿಸಂ ಬ್ಯುಸಿನೆಸ್ ನಡೆಯೋದೆ ನಮ್ಮಿಂದಾಗಿ. ಭಾರತೀಯರು ಹೋದ್ರಷ್ಟೇ ಅಲ್ಲಿನ ಜನರಿಗೆ ಹೆಚ್ಚಿನ ವ್ಯಾಪಾರ-ವಹಿವಾಟು ಆಗುತ್ತೆ. ನಮ್ಮವರು ಅಲ್ಲಿಗೆ ಟೂರ್ ಹೋದ್ರೆ, ಅದೇ ಮಾಲ್ಡೀವ್ಸ್​ನಿಂದ ಪ್ರತಿ ವರ್ಷ ಸಾವಿರಾರು ಮಂದಿ ಚಿಕಿತ್ಸೆ ಪಡೆಯೋಕೆ ಅಂತಾ ಭಾರತದ ಆಸ್ಪತ್ರೆಗಳಿಗೆ ಬರ್ತಾರೆ. 2018-2022ರವರೆಗೆ ಮಾಲ್ಡೀವ್ಸ್​ನಿಂದ ಭಾರತಕ್ಕೆ ಸುಮಾರು 1 ಲಕ್ಷ ಮಂದಿ ಆಗಿಮಿಸಿದ್ರು. ಈ ಪೈಕಿ 30 ಪರ್ಸೆಂಟ್​​ನಷ್ಟು ಮಂದಿ ಚಿಕಿತ್ಸೆ ಪಡೆಯೋಕೆ ಅಂತಾನೆ ನಮ್ಮಲ್ಲಿಗೆ ಬಂದಿದ್ರು. ಇದು ಒಂದು ವಿಚಾರ ಆಯ್ತು..ಇನ್ನು ಮಾಲ್ಡೀವ್ಸ್​​ನ ಆಸ್ಪತ್ರೆಗಳಲ್ಲಿರೋ ವೈದ್ಯರ ಪೈಕಿ ಶೇಕಡಾ 30ರಷ್ಟು ಭಾರತೀಯರೇ ಇದ್ದಾರೆ. ಭಾರತದಿಂದ ಮಾಲ್ಡೀವ್ಸ್​ಗೆ ಹೋಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ. ಅಷ್ಟೇ ಅಲ್ಲ, ಮಾಲ್ಡೀವ್ಸ್​ನಲ್ಲಿ ಶಾಲೆಗಳಲ್ಲಿ ಶೇಕಡಾ 25ರಷ್ಟು ಟೀಚರ್ಸ್​ಗಳು ಕೂಡ ಭಾರತೀಯರೇ. ಇನ್ನು ಪ್ರತಿ ವರ್ಷ ಭಾರತ ಸರ್ಕಾರ ಮಾಲ್ಡೀವ್ಸ್​ಗೆ ಅಗತ್ಯ ಅಹಾರ ಪದಾರ್ಥಗಳನ್ನ, ಔಷಧಗಳನ್ನ ರವಾನಿಸುತ್ತೆ. 2023-24ರ ಬಜೆಟ್​​ನಲ್ಲಿ ಮಾಲ್ಡೀವ್ಸ್​​ನಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತ ಸರ್ಕಾರ 400 ಕೋಟಿ ರೂಪಾಯಿ ನೆರವು ನೀಡ್ತಾ ಇರೋದಾಗಿ ಘೋಷಿಸಿತ್ತು. 2018ರಲ್ಲಿ ಮಾಲ್ಡೀವ್ಸ್​​ಗೆ ಸುಮಾರು 11 ಸಾವಿರ ಕೋಟಿ ಮೊತ್ತದ ನೆರವು ನೀಡಲಾಗಿತ್ತು. ಹಲವು ವರ್ಷಗಳಿಂದ ಮಾಲ್ಡೀವ್ಸ್​​ಗೆ ಆರ್ಥಿಕವೂ ಭಾರತ ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ, ಕಡಿಮೆ ಬಡ್ಡಿಗೆ ಮಾಲ್ಡೀವ್ಸ್​ಗೆ ಸಾಲ ಕೂಡ ಕೊಟ್ಟಿದ್ದೀವಿ. ಕೊರೊನಾ ಸಂದರ್ಭದಲ್ಲಿ ಉಚಿತವಾಗಿ 1 ಲಕ್ಷ ಡೋಸ್ ವ್ಯಾಕ್ಸಿನ್ ಸಪ್ಲೈ ಮಾಡಲಾಗಿತ್ತು. 2020ರಲ್ಲಿ ಮಾಲ್ಡೀವ್ಸ್​ನಲ್ಲಿ ಸಾಂಕ್ರಾಮಿಕ ರೋಗ ಬಂದಾಗ ಆಗಲೂ ಭಾರತದಿಂದಲೇ ವ್ಯಾಕ್ಸಿನ್ ನೀಡಲಾಗಿತ್ತು.

ಮಾಲ್ಡೀವ್ಸ್​ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡೋ ಅಲ್ಲಿನ ಬಹುತೇಕ ಜನರಿಗೆ ಭಾರತದಲ್ಲೇ ಟ್ರೈನಿಂಗ್ ನೀಡಲಾಗುತ್ತೆ. 2019ರಲ್ಲಿ ಮಾಲ್ಡೀವ್ಸ್​ನ 2000 ಸಿವಿಲ್ ಸರ್ವೆಂಟ್ ಆಫೀಸರ್ಸ್​ಗೆ, ಪೊಲೀಸ್ ಅಧಿಕಾರಿಗಳಿಗೆ, ನ್ಯಾಯಾಧೀಶರುಗಳಿಗೆ, ಪಬ್ಲಿಕ್ ಬ್ರಾಡ್​​ಕಾಸ್ಟರ್ಸ್​​ಗಳಿಗೆ ಭಾರತದಲ್ಲೇ ತರಬೇತಿ ನೀಡಲಾಗಿತ್ತು. ಸಾಲದ್ದಕ್ಕೆ ಮಾಲ್ಡೀವ್ಸ್​ ಸೇನೆಗೆ ಕೂಡ ಭಾರತದಲ್ಲಿ ಟ್ರೈನಿಂಗ್ ನೀಡಲಾಗುತ್ತೆ. ವ್ಯಾಪಾರ ಕ್ಷೇತ್ರದಲ್ಲೂ ಮಾಲ್ಡೀವ್ಸ್ನ  ಟಾಪ್-5 ಟ್ರೇಡ್ ಪಾಟ್ನರ್​ಗಳ ಲಿಸ್ಟ್​ನಲ್ಲಿ ಭಾರತ ಕೂಡ ಇದೆ. 2022ರಲ್ಲಿ ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ 4185 ಕೋಟಿ ಮೊತ್ತದ ವಹಿವಾಟು ನಡೆದಿದೆ. ಈ ಪೈಕಿ 4,131 ಕೋಟಿ ಮೊತ್ತದ ಸಾಮಗ್ರಿಯನ್ನ ಮಾಲ್ಡೀವ್ಸ್​ಗೆ ಭಾರತ ರವಾನಿಸಿದೆ. ಇದ್ರಲ್ಲೇ ಗೊತ್ತಾಗುತ್ತಲ್ವಾ, ನಮ್ಮ ಜೊತೆ ವಹಿವಾಟು ಇಲ್ಲದೆ ಮಾಲ್ಡೀವ್ಸ್​ ಜನರಿಗೆ ಬದುಕೋಕೆ ಸಾಧ್ಯವಿಲ್ಲ ಅನ್ನೋದು. ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ಸಂಗತಿ ಕೂಡ ಇದೆ. 1988ರಲ್ಲಿ ಮಾಲ್ಡೀವ್ಸ್​ ಸೇನೆ ಅಲ್ಲಿನ ಸರ್ಕಾರವನ್ನ ತನ್ನ ಕಂಟ್ರೋಲ್​ಗೆ ತೆಗೆದುಕೊಂಡು, ಸೇನಾಡಳಿತ ಹೇರೋಕೆ ಮುಂದಾಗಿತ್ತು. ಅಂದ್ರೆ ಪಾಕಿಸ್ತಾನದಲ್ಲಿ ಆಗಿವೆಯಲ್ಲಾ, ಅದೇ ರೀತಿ. ಈ ಸಂದರ್ಭದಲ್ಲಿ ಆಗಿನ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ ಗಯೂಮ್​​ ಭಾರತದ ನೆರವನ್ನ ಕೇಳಿದ್ರು. ಭಾರತೀಯ ಸೇನೆ ಕೌಂಟರ್​ ಆಪರೇಷನ್ ನಡೆಸಿ ಅಲ್ಲಿನ ಸೇನೆಯ ಬಂಡಾವಯನ್ನ ಶಮನ ಮಾಡಿತ್ತು. ಆಗ ಅಲ್ಲಿನ ಅಧ್ಯಕ್ಷ ಅಬ್ದುಲ್ ಗಯೂಮ್ ಒಂದು ಮಾತು ಹೇಳ್ತಾರೆ. ಭಾರತದಂಥಾ ನೆರೆಯ ದೇಶ ಅದೃಷ್ಟವಂತರಿಗಷ್ಟೇ ಸಿಗುತ್ತೆ ಎಂದಿದ್ರು. ಆ ಬಳಿಕ ಎರಡೂ ದೇಶಗಳ ಸಂಬಂಧ ಎಷ್ಟರ ಮಟ್ಟಿಗೆ ಬೆಳೆಯಿತು ಅಂದ್ರೆ, ನಮ್ಮಲ್ಲಿ ಸಾರ್ವತ್ರಿಕ ಚುನಾವಣೆಯಾಗಿ ಯಾರೇ ಪ್ರಧಾನಿಯಾಗಲಿ ಅವರು ಮೊದಲಿಗೆ ಮಾಲ್ಡೀವ್ಸ್​​ಗೆ ವಿದೇಶ ಪ್ರವಾಸ ಕೈಗೊಳ್ತಿದ್ರು. ಅಲ್ಲಿಯೂ ಅಷ್ಟೇ ಯಾರೇ ಅಧ್ಯಕ್ಷರಾಗಲಿ ಮೊದಲಿಗೆ ಭಾರತಕ್ಕೆ ಬರ್ತಿದ್ರು. 2019ರಲ್ಲಿ ಪ್ರಧಾನಿ ಮೋದಿ ಕೂಡ ಮಾಲ್ಡೀವ್ಸ್​ಗೆ ಹೋಗಿದ್ರು. ಆದ್ರೆ ಈ ಬಾರಿ ಅಲ್ಲಿನ ಹೊಸ ಅಧ್ಯಕ್ಷ ಮೊಹಮ್ಮದ್ ಮೊಯಿಜು ಮಾತ್ರ ಭಾರತ ಬಿಟ್ಟು ಚೀನಾಗೆ ಹಾರಿದ್ದಾರೆ. ಕಳೆದ ಹಲವು ದಶಕಗಳಿಂದ ಭಾರತ ಅಣ್ಣನಂತೆ ಮಾಲ್ಡೀವ್ಸ್  ಬೆನ್ನಿಗೆ ನಿಂತಿದ್ರೂ ಈಗ ಅಲ್ಲಿನ ಅಧ್ಯಕ್ಷ ನಮಗೇ ಚಾಕು ಇರಿಯೋಕೆ ಮುಂದಾಗಿದ್ದಾರೆ. ಸಹಾಯ ಮಾಡಿದ ಭಾರತೀಯರನ್ನೇ ಗೇಲಿ ಮಾಡಿದ್ದಾರೆ. ಕೋಟಿ ಕೋಟಿ ನೆರವು ನೀಡಿದ ನಮ್ಮ ಪ್ರಧಾನಿಯನ್ನೇ ಅವಹೇಳನ ಮಾಡಿದ್ದಾರೆ. ಈಗ ನಾವು ಬಿಡ್ತೀವಾ. ಬಾಯ್ಕಾಟ್ ಮಾಲ್ಡೀವ್ಸ್.. ಲೆಟ್ಸ್​ ಗೋ ಟು ಲಕ್ಷದ್ವೀಪ್.. ಇಷ್ಟೇ ಸಾಕು..ಅವರಿಗೆ ಬುದ್ಧಿ ಕಲಿಸೋಕೆ ಇದಕ್ಕಿಂತ ಹೆಚ್ಚೇನೂ ಮಾಡ್ಬೇಕಾಗಿಲ್ಲ. ಭಾರತೀಯರ ಈ ಒಂದು ನಡೆ ಇದ್ಯಲ್ಲಾ, ಈಗ ಮಾಲ್ಡೀವ್ಸ್ ಸರ್ಕಾರವನ್ನೇ ಮಂಡಿಯೂರಿಸ್ತಾ ಇದೆ. ಚೀನಾದಿಂದ ಬಂದ್ಮೇಲೆ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮೊಯಿಜು ಭಾರತದ ದಾರಿಗೆ ಬರ್ಲೇಬೇಕು. ಇಲ್ಲದಿದ್ರೆ ಅವರ ಸರ್ಕಾರವೇ ಪತನವಾದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ, ಈಗಾಗ್ಲೇ ಮಾಲ್ಡೀವ್ಸ್ ಸರ್ಕಾರದ ಹಲವು ಸಚಿವರುಗಳು, ಅಧಿಕಾರಿಗಳೇ ರೊಚ್ಚಿಗೆದ್ದಿದ್ದಾರೆ. ಸರ್ಕಾರವನ್ನೇ ವಿಸರ್ಜಿಸುವ ಮಟ್ಟಕ್ಕೆ ಬೆಳವಣಿಗೆಯಾಗ್ತಾ ಇದೆ. ಮೊಯಿಜು ಮಂಡಿಯೂರಿಲ್ಲ ಅಂದ್ರೆ ಖೇಲ್ ಖತಂ ನಾಟಕ್ ಬಂದ್ ಆದ್ರೂ ಆಶ್ಚರ್ಯ ಇಲ್ಲ. ಆ ಮೂವರು ಮಂತ್ರಿಗಳಿಗೆ, ಅಧ್ಯಕ್ಷರಿಗೆ ಭಾರತವನ್ನ ಕೆಣಕೋ ಕೆಲಸ ಬೇಡವಿತ್ತು. ಚೀನಾ ಏನೇ ನೆರವು ಕೊಟ್ರೂ ಮಾಲ್ಡೀವ್ಸ್​ಗೆ ಒಂದಲ್ಲಾ ಒಂದು ರೀತಿಯಲ್ಲಿ ಭಾರತ ಬೇಕೇ ಬೇಕು. ಅಂತೂ ಭಾರತೀಯರು ಒಟ್ಟಾದ್ರೆ ಏನಾಗುತ್ತೆ ಅನ್ನೋದು ಈಗ ಇಡೀ ಜಗತ್ತಿಗೇ ಅರ್ಥವಾಗಿದೆ.

Sulekha