ಲಂಕಾ ಸರಣಿಯಲ್ಲಿ ಸೂರ್ಯನ ಮುಂದಿರೋ ಸವಾಲುಗಳೆಷ್ಟು?

ಬಲಿಷ್ಠ ತಂಡದೊಂದಿಗೆ ಶ್ರೀಲಂಕಾಗೆ ಹಾರಿರುವ ಟೀಂ ಇಂಡಿಯಾ ಟಿ-20 ಹಾಗೂ ಏಕದಿನ ಸರಣಿ ಗೆಲ್ಲೋ ಉತ್ಸಾಹದಲ್ಲಿದೆ. ಜಸ್ಟ್ ಇನ್ನೆರಡು ದಿನಗಳಲ್ಲೇ ಟಿ-20 ಕದನ ಶುರುವಾಗಲಿದೆ. ಈ ಸರಣಿ ಆಟಗಾರರ ಜೊತೆಗೆ ನೂತನ ಕೋಚ್ ಗೌತಮ್ ಗಂಭೀರ್ಗೂ ಕೂಡ ತುಂಬಾನೇ ಮಹತ್ವದ್ದಾಗಿದೆ. ಅದ್ರಲ್ಲೂ ಸೂರ್ಯಕುಮಾರ್ ಯಾದವ್ ಮೇಲೆ ತುಂಬಾನೇ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೊತೆ ಜೊತೆಗೆ ಸಾಲು ಸಾಲು ಸವಾಲುಗಳು ಸೂರ್ಯನ ಮುಂದಿವೆ. ಜುಲೈ 27 ರಿಂದ ಇಂಡೋ-ಲಂಕಾ ಚುಟುಕು ದಂಗಲ್ ಆರಂಭಗೊಳ್ಳಲಿದ್ದು, ಮೆನ್ ಇನ್ ಬ್ಲೂ ಪಡೆ ಈಗಾಗ್ಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಗಂಭೀರ್ ಉಸ್ತುವಾರಿಯಲ್ಲಿ ಈಗಾಗ್ಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇಲ್ಲಿಂದಲೇ ಸೂರ್ಯಕುಮಾರ್ ಯಾದವ್ ಫುಲ್ಟೈಮ್ ಟಿ20 ಕ್ಯಾಪ್ಟನ್ ಆಗಿ ಅಧಿಕೃತವಾಗಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಮೊದಲ ಟಾಸ್ಕ್ನಲ್ಲೇ ಸ್ಕೈಗೆ ಸಾಲು ಸಾಲು ಚಾಲೆಂಜಸ್ಗಳಿದ್ದು, ಹೇಗೆ ಫೇಸ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಪಾಕ್ ಗೆ ಬರುವಂತೆ ಭಾರತವನ್ನು ಒಪ್ಪಿಸಿ ಎಂದು ICC ಬೆನ್ನು ಬಿದ್ದ PCB
ಸೂರ್ಯನಿಗೆ ಸಾಲು ಸಾಲು ಸವಾಲು!
ಲಂಕಾ ಸರಣಿ ಮೂಲಕ ಟೀಂ ಇಂಡಿಯಾ ಟಿ-20 ಫಾರ್ಮೆಟ್ಗೆ ಫುಲ್ ಟೈಮ್ ಕ್ಯಾಪ್ಟನ್ ಆಗಿ ಆಯ್ಕೆಯಾದ ಸೂರ್ಯಕುಮಾರ್ ಯಾದವ್ಗೆ ಹೆಚ್ಚು ತಂಡ ಮುನ್ನಡೆಸಿದ ಅನುಭವವಿಲ್ಲ. ಹಂಗಾಮಿ ಕ್ಯಾಪ್ಟನ್ ಆಗಿ ಈವರೆಗೆ 7 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿರೋ ಸೂರ್ಯನ ಮುಂದೆ ಸಾಮರ್ಥ್ಯ ನಿರೂಪಿಸೋ ಚಾಲೆಂಜ್ ಇದೆ. ಹಾರ್ದಿಕ್ ಪಾಂಡ್ಯ ಬದಲಾಗಿ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರಿಂದ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ತಾನು ನಾಯಕತ್ವಕ್ಕೆ ಅರ್ಹ ಎಂಬ ಸಂದೇಶವನ್ನು ರವಾನಿಸಬೇಕಿದೆ. ಅದ್ರಲ್ಲೂ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾರ ಚಾರ್ಮ್ ಕಂಟಿನ್ಯೂ ಮಾಡಬೇಕಾದ ಒತ್ತಡ ಇದೆ. ರೋಹಿತ್ ಕಳೆದ 3 ವರ್ಷಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೇ ಪ್ಲೇಯರ್ಸ್ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಆ ಪರಂಪರೆಯನ್ನ ಉಳಿಸಿ, ಬೆಳೆಸುವ ಸವಾಲು ಸ್ಕೈ ಮುಂದಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ಸಿ ಜೊತೆ ಫಾರ್ಮ್ ಕೂಡ ಬ್ಯಾಲೆನ್ಸ್ ಮಾಡಿಕೊಳ್ಳಬೇಕಿದೆ. ಬ್ಯಾಟಿಂಗ್ನಲ್ಲಿ ಸೂರ್ಯನ ಸ್ಥಿರ ಪ್ರದರ್ಶನ ಭಾರತಕ್ಕೆ ಅತಿ ಅವಶ್ಯಕ. ಕ್ಯಾಪ್ಟನ್ಸಿಯಿಂದ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗದಂತೆ ನೋಡಿಕೊಳ್ಳಬೇಕಿದೆ. ಹೇಳಿ ಕೇಳಿ ಟೀಂ ಇಂಡಿಯಾ ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿದೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ರಂತ ಸೀನಿಯರ್ ಪ್ಲೇಯರ್ಸ್ ಜತೆ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ರಂತ ಹಲವು ಯುವ ಆಟಗಾರರ ದಂಡಿದೆ. ಇವರ ನಡುವೆ ಸಮನ್ವಯತೆ ಸಾಧಿಸೋದು ಸ್ಕೈಗೆ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ. ಇನ್ನು ಈ ಎಲ್ಲಾ ಚಾಲೆಂಜ್ಗಳಿಗಿಂತ ದೊಡ್ಡ ಚಾಲೆಂಜ್ ಅಂದ್ರೆ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತ ದಿಗ್ಗಜ ಆಟಗಾರರು ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಇಬ್ಬರೂ ತಂಡಕ್ಕೆ ಆಧಾರ ಸ್ತಂಭವಾಗಿದ್ರು. ಇವರಿಲ್ಲದೇ ಭಾರತ ತಂಡ ಮೊದಲ ಸರಣಿ ಆಡುತ್ತಿದೆ. ಆನ್ಫೀಲ್ಡ್ ಇರಬಹುದು, ಆಫ್ ದ ಫೀಲ್ಡ್ ಇರಬಹುದು. ಡ್ರೆಸ್ಸಿಂಗ್ ರೂಮ್ನಲ್ಲಿ ಜೋಡೆತ್ತುಗಳ ಕೊರತೆ ಕಾಡೇ ಕಾಡುತ್ತೆ. ಆಟದ ಜೊತೆ ಅವರ ಅನುಭವವನ್ನ ತಂಡ ಕಳೆದುಕೊಳ್ಳಲಿದ್ದು, ನ್ಯೂ ಕ್ಯಾಪ್ಟನ್ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಇಂಡೋ-ಲಂಕಾ ಟಿ20 ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಸೂಪರ್ ಶನಿವಾರ ಚುಟುಕು ದಂಗಲ್ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಈಗಾಗಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿರೋ ಟೀಮ್ ಇಂಡಿಯಾ ಅಭ್ಯಾಸದ ಕಣಕ್ಕೂ ಇಳಿದಿದೆ. ಹೊಸ ಕೋಚ್ ಗೌತಮ್ ಗಂಭೀರ್, ಹೊಸ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಮಾರ್ಗದರ್ಶನದಲ್ಲಿ ನೆಟ್ಸ್ನಲ್ಲಿ ಬೆವರಿಳಿಸಿದೆ. ಸರ್ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕೇರಿದ ಸೂರ್ಯಕುಮಾರ್ ಮುಂದಿರೋ ಹಾದಿಯಂತೂ ಸುಲಭ ಇಲ್ಲ. ಆದ್ರೆ ಈ ಹಿಂದೆ ನಡೆದಿದ್ದ ಶ್ರೀಲಂಕಾ ವಿರುದ್ಧ ಟಿ-20 ಪಂದ್ಯಗಳಲ್ಲಿ ಸೂರ್ಯಕುಮಾರ್ ಬೆಂಕಿ ಚೆಂಡಿನಂತೆ ಅಬ್ಬರಿಸಿದ್ದಾರೆ. ಶ್ರೀಲಂಕಾ ಎದುರು 5 T20 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸೂರ್ಯ, 254 ರನ್ ಕಲೆ ಹಾಕಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿ ಮಿಂಚಿರುವ ಮಿಸ್ಟರ್ 360 ಡಿಗ್ರಿ ಬ್ಯಾಟರ್, 17 ಬೌಂಡರಿ, 15 ಸಿಕ್ಸರ್ ಚಚ್ಚಿದ್ದು, 158.75ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಆದ್ರೆ ಈ ಬಾರಿ ಶ್ರೀಲಂಕಾ ತಂಡ ಅಷ್ಟು ಸುಲಭಕ್ಕೆ ಶರಣಾಗಲು ಸಿದ್ಧವಿಲ್ಲ. ಸೂರ್ಯನನ್ನ ಕಟ್ಟಿ ಹಾಕಲು ಬಲಿಷ್ಟ ಬೌಲಿಂಗ್ ಪಡೆಯನ್ನೇ ಫೀಲ್ಡ್ಗಿಳಿಸಿದೆ. ಸೋ ಇದನ್ನೆಲ್ಲಾ ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದನ್ನ ಕಾದು ನೋಡ್ಬೇಕು.