ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ KSRTC ಬಸ್ ನಿಲ್ದಾಣ! – ಉಚಿತ ಓಡಾಟ ಉತ್ಸಾಹ ಕಳೆದುಕೊಂಡ್ರಾ ಮಹಿಳೆಯರು?

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್ಆರ್ಟಿಸಿ ಬಸ್‌ಗಳಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಏಕಾಏಕಿ ಏರಿಕೆಯಾಗಿತ್ತು. ಬಸ್ನಲ್ಲಿ ಕಾಲಿಡಲು ಸಾಧ್ಯವಾಗದಷ್ಟು ರಶ್ ಇರುತ್ತಿತ್ತು. ಇದರಿಂದಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನುಂಟು ಮಾಡಿತ್ತು. ಆದರೆ ಇದೀಗ ಮಹಿಳಾ ಪ್ರಯಾಣಿಕರಿಂದ ತುಂಬಿ ತಳುಕುತ್ತಿದ್ದ ಮೆಜೆಸ್ಟಿಕ್ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಇದನ್ನೂ ಓದಿ: ಸಾವಿನ ಎಕ್ಸ್‌ಪ್ರೆಸ್ ವೇ ಆಯ್ತಾ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ? – ದುರಂತಗಳ ಹಿಂದಿದೆ ಸಾಲು ಸಾಲು ಕಾರಣ
ಹೌದು, ಕಳೆದ ವಾರಾಂತ್ಯಕ್ಕೆ ಉಚಿತ ಪ್ರಯಾಣವೆಂದು ಲಾಂಗ್ ಟ್ರಿಪ್ ಹೊರಟ್ಟಿದ್ದ ಮಹಿಳೆಯರು ಈ ವಾರ ಮನೆಯಲ್ಲೇ ಬೆಚ್ಚಗೆ ಕುಳಿತಿದ್ದಾರೆ. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣದಲ್ಲಿ ಇಂದು ಮಹಿಳಾ ಪ್ರಯಾಣಿಕರು ಕಾಣಿಸುತ್ತಿಲ್ಲ. ಹೀಗಾಗಿ ಧರ್ಮಸ್ಥಳ, ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಯ ಬಸ್ಗಳಿಗೆ ಬರಲು ಪ್ರಯಾಣಿಕರೇ ಇಲ್ಲದಂತಾಗಿದೆ. ಹೀಗಾಗಿ ಬಸ್ ಡ್ರೈವರ್ ಮತ್ತು ಕಂಡಕ್ಟರ್‌ಗಳೇ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವಾರ ನಿಂತುಕೊಳ್ಳಲೂ ಜಾಗವಿರದಂತೆ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ ಅಧಿಕಾರಿಗಳು ಈ ವಾರವೂ ಅಂತಹದ್ದೇ ಸಮಸ್ಯೆ ಕಾಣಬಹುದೆಂಬ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಕೆಎಸ್ಆರ್ಟಿಸಿ, ರಾಜಹಂಸ, ಓಲ್ವೋ ಗಳನ್ನ ನಿಯೋಜಿಸಿದ್ದರು. ಆದರೆ ಈಗ ಕಂಡಕ್ಟರ್‌ಗಳೇ ನಿಂತು ಜನರನ್ನು ಕರೆಯುತ್ತಿದ್ದಾರೆ. ಹಬ್ಬ, ವಿಶೇಷ ದಿನಗಳನ್ನು ಹೊರತುಪಡಿಸಿ ಪ್ರಯಾಣಿಕರು ಬರುವುದು ಕಷ್ಟ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.