20 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐವರು ಸಾವು! – ತನಿಖೆ ವೇಳೆ ಬಯಲಾಯ್ತು ಭಯಾನಕ ರಹಸ್ಯ!

20 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಐವರು ಸಾವು! – ತನಿಖೆ ವೇಳೆ ಬಯಲಾಯ್ತು ಭಯಾನಕ ರಹಸ್ಯ!

ಆ ಕುಟುಂಬದಲ್ಲಿ ಕಳೆದ 20 ದಿನಗಳ ಅಂತರದಲ್ಲಿ ಐವರು ಸಾವನ್ನಪ್ಪಿದ್ದರು. ಒಂದೇ ಕುಟುಂಬದ ಇಷ್ಟೊಂದು ಜನ ಹೇಗೆ ಕಡಿಮೆ ಅಂತರದಲ್ಲಿ ತೀರಿಕೊಂಡರು ಎಂಬುದು ಊರ ಜನರಿಗೆ ಆಘಾತವಾಗಿತ್ತು. ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲದೇ ನಾನಾ ಸಂದೇಹಕ್ಕೂ ಕಾರಣವಾಗಿತ್ತು. ಆದರೆ ಇದಕ್ಕಿಂತ ಬೆಚ್ಚಿಬೀಳಿಸುವ ವಿಷಯ ಈಗ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದು ಇಡೀ ಗ್ರಾಮಸ್ಥರೇ ಶಾಕ್‌ ಆಗಿದ್ದಾರೆ.

ಏನಿದು ಪ್ರಕರಣ?

ಈ ಘಟನೆ ಮಹಾರಾಷ್ಟ್ರದ ಗಡ್‌ಚಿರೋಲಿಯ ಮಹಾಗಾಂವ್‌ ಗ್ರಾಮದಲ್ಲಿ ಒಂದೇ ಕುಟುಂಬದ ಐವರು 20 ದಿನಗಳ ಅಂತರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಈ ಪ್ರಕರಣದ ತನಿಖೆ ನಡೆಸಿದ ವೇಳೆ ಕೊಲೆಯ ರಹಸ್ಯ ಬಯಲಾಗಿದೆ. ಅದೇ ಕುಟುಂಬದ ಇಬ್ಬರು ಮಹಿಳೆಯರು ತಮ್ಮವರನ್ನು ವಿಷವುಣಿಸಿ ಸಾಯಿಸಿದ್ದರು ಎಂದು ಗೊತ್ತಾಗಿದೆ. ಕೂಡಲೆ ಸಂಘಮಿತ್ರಾ ಹಾಗೂ ಆಕೆಯ ಬಂಧು ರೋಸಾ ರಾಮತೇಕೆ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಗಂಡನ ಮನೆಯಲ್ಲಿ ಕಿರುಕುಳಕ್ಕೊಳಗಾದ ಮಗಳು – ಪಟಾಕಿ ಸಿಡಿಸಿ, ವಾದ್ಯ, ಮೆರವಣಿಗೆಯಲ್ಲಿ ಪತಿ ಮನೆಯಿಂದ ಕರೆತಂದ ತಂದೆ!

ಕೊಲೆಗೆ ಕಾರಣವೇನು?

ಆರೋಪಿಗಳಲ್ಲಿ ಒಬ್ಬಳಾದ ಸಂಘಮಿತ್ರಾ ತಾನು ಪ್ರೇಮವಿವಾಹ ಆಗಿದ್ದ ಪತಿ ರೋಶನ್ ಕುಂಭಾರೆ ಮತ್ತು ಅತ್ತೆ ವಿಜಯಾ ಕುಂಭಾರೆ ಅವರ ಬೈಗುಳ ತಿಂದು ಅಸಮಾಧಾನಗೊಂಡಿದ್ದರೆ. ಇನ್ನೊಬ್ಬಳು ಆರೋಪಿ ರೋಸಾ ಆಸ್ತಿ ವಿವಾದದಿಂದ ಕುಂಭಾರೆ ಕುಟಂಬದ ಬಗ್ಗೆ ಅತೃಪ್ತಳಾಗಿದ್ದಳು. ಹೀಗಾಗಿ ‘ಸಮಾನ ದುಃಖಿ’ಗಳಾದ ಈ ಇಬ್ಬರೂ ಒಟ್ಟಾಗಿ ಕೊಲೆಯ ಸಂಚು ಹೆಣೆದ್ದಾರೆ. ಆ ಕುಟುಂಬಸ್ಥರು ಸೇವಿಸುವ ನೀರು, ಆಹಾರದಲ್ಲಿ ತಾವೇ ವಿಷ ಬೆರೆಸಿದರು. ಆದರೆ ಯಾರಿಗೂ ತಮ್ಮ ಮೇಲೆ ಸಂದೇಹ ಬರಬಾರದು ಎಂದು ದೋಷಪೂರಿತ ಆಹಾರದಿಂದ 5 ಬಂಧುಗಳು ಸಾವನ್ನಪ್ಪಿರಬಹುದು ಎಂದು ಕತೆ ಕಟ್ಟಿದ್ದರು. ಇದೀಗ ಈ ಪಾಪಿಗಳ ಕೃತ್ಯ ಪೊಲೀಸರ ಮುಂದೆ ಬಯಲಾಗಿದೆ.

20 ದಿನ ಅಂತರದಲ್ಲಿ ಐವರ ಕೊಲೆ!

ಮೊದಲು ಸೆ.20 ರಂದು ಮಹಾಗಾಂವ್ ಗ್ರಾಮದ ಶಂಕರ ಕುಂಭಾರೆ (ಸಂಘಮಿತ್ರಳ ಮಾವ) ಮತ್ತು ಅವರ ಪತ್ನಿ ವಿಜಯಾ ಕುಂಭಾರೆ (ಸಂಘಮಿತ್ರಳ ಅತ್ತೆ) ಅವರು ಅನಾರೋಗ್ಯಕ್ಕೆ ಒಳಗಾದರು. ಅವರ ಸ್ಥಿತಿ ವೇಗವಾಗಿ ವಿಷಮಿಸಿ ಸೆ.26 ಮತ್ತು ಮರುದಿನ ಇಬ್ಬರೂ ಧಾರುಣವಾಗಿ ಸಾವನ್ನಪ್ಪಿದ್ದರು. ಇಬ್ಬರನ್ನೂ ಕುಟುಂಬವು ಕಳೆದುಕೊಂಡು ಶೋಕದಲ್ಲಿ ಇರುವಾಗ ಶಂಕರ್ ಅವರ ಮಗ ರೋಷನ್ (ಸಂಘಮಿತ್ರಳ ಗಂಡ) ಮತ್ತು ಶಂಕರ್‌ರ ಪುತ್ರಿಯರಾದ ಕೋಮಲ್ ದಹಗೋಕರ್ ಮತ್ತು ಆನಂದಾ (ಸಂಘಮಿತ್ರಳ ನಾದಿನಿಯರು) ಇದೇ ರೀತಿಯ ರೋಗಲಕ್ಷಣ ಅನುಭವಿಸಿದ್ದಾರೆ. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಮೂವರೂ ಅ. 8 ಮತ್ತು ಅ.15 ರ ನಡುವೆ ಮರಣ ಹೊಂದಿದರು. ಕುಟುಂಬದ ಇನ್ನೂ ಕೆಲವರು ಇಂಥದ್ದೇ ಲಕ್ಷಣದಿಂದ ಅಸ್ವಸ್ಥರಾದರೂ ಸಕಾಲಿಕ ಚಿಕಿತ್ಸೆಯಿಂದ ಸುದೈವವಶಾತ್ ಬದುಕುಳಿದರು.

ಕೊಲೆಗಾರರು ಸಿಕ್ಕಿಬಿದ್ದಿದ್ದು ಹೇಗೆ?

ಸರಣಿ ಕೊಲೆಗಳು ಊರಿನಲ್ಲಿ ತಲ್ಲಣ ಮೂಡಿಸಿದವು. ಆಗ ವೈದ್ಯರು ವಿಷ ಪ್ರಾಶನದ ಬಗ್ಗೆ ಅನುಮಾನಿಸಿದರೂ, ಪ್ರಾಥಮಿಕ ಪರೀಕ್ಷೆಗಳು ಅದನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ‘ಸಂಘಮಿತ್ರಳು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರೋಶನ್‌ ಕುಂಭಾರೆಯನ್ನು ವರಿಸಿದ್ದಳು. ಆದರೆ ವಿವಾಹದ ನಂತರ ರೋಶನ್‌ ಹಾಗೂ ಅತ್ತೆ ತನ್ನನ್ನು ಹೊಡೆಯುತ್ತಿದ್ದರು ಎಂದು ಕೋಪಗೊಂಡಿದ್ದಳು. ಹೀಗೆಯೇ ಒಮ್ಮೆ ಆಕೆ ಹೊಡೆತ ತಿಂದು ಅಳುತ್ತ ಮನೆ ಹೊರಗೆ ಕೂತಾಗ ರಕ್ತಸಂಬಂಧಿ ರೋಸಾ, ಆಕೆಗೆ ಸಮಾಧಾನ ಮಾಡಿದಳು. ತಾನು ಕೂಡ ಕುಂಭಾರೆ ಕುಟುಂಬದ ಮೇಲೆ ದ್ವೇಷ ಹೊಂದಿದ್ದಾಗಿ ಹೇಳಿದಳು. ಆಗ ತಾವಿಬ್ಬರೂ ಸಮಾನ ದುಃಖಿಗಳು ಎಂದು ಹೇಳಿಕೊಂಡು, ಕೊಲೆ ಸಂಚು ರೂಪಿಸಿದರು’ ಎಂದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಬುಧವಾರ ಸಂಘಮಿತ್ರ ಹಾಗೂ ರೋಸಾಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಷದ ಬಗ್ಗೆ ಆನ್ಲೈನ್ನಲ್ಲಿ ಅಧ್ಯಯನ!

ಕುಟುಂಬ ಸದಸ್ಯರನ್ನು ಕೊಲ್ಲಲು ಬಳಸಬಹುದಾದ ವಿಷಗಳ ಬಗ್ಗೆ ಅವರು ಆರಂಭದಲ್ಲಿ ಇವರು ಆನ್‌ಲೈನ್‌ನಲ್ಲಿ ಸಂಶೋಧನೆ ನಡೆಸಿದರು. ಆಗ ಆರ್ಸೆನಿಕ್‌ ವಿಷದ ಮೂಲಕ ಯಾರಿಗೂ ಸಂದೇಹ ಬಾರದಂತೆ ಕೊಲ್ಲಬಹುದು ಎಂದು ಕಂಡುಕೊಂಡರು. ಸಂಚು ಸಾಕಾರಕ್ಕೆ ಮೊದಲು ರೋಸಾ ರಾಮತೇಕೆ ತೆಲಂಗಾಣಕ್ಕೆ ಪ್ರಯಾಣ ಬೆಳೆಸಿದಳು ಮತ್ತು ನೀರು ಅಥವಾ ಆಹಾರದೊಂದಿಗೆ ಬೆರೆಸಿದರೆ ಯಾರಿಗೂ ಗೊತ್ತಾಗದಂಥ ವಿಷವನ್ನು ಪಡೆದರು. ಶಂಕರ ಕುಂಭಾರೆ, ಪತ್ನಿ ಹಾಗೂ ಇತರರಿಗೆ ನೀರು ಹಾಗೂ ಇತರ ಆಹಾರದಲ್ಲಿ ವಿಷ ಬೆರೆಸಿ, ಬೆರೆಸಿದ್ದು ಗಿಡಮೂಲಿಕೆ ಎಂದು ನಂಬಿಸಿದ್ದರು ಎಂದು ಗೊತ್ತಾಗಿದೆ

Shwetha M