ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಸಂಚಲನ –  ಶಿಂಧೆ ಹಾಗೂ ಫಡ್ನವೀಸ್‌ ಸರ್ಕಾರದ ಜತೆ ಕೈ ಜೋಡಿಸಿದ ಅಜಿತ್‌ ಪವಾರ್‌

ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಸಂಚಲನ –  ಶಿಂಧೆ ಹಾಗೂ ಫಡ್ನವೀಸ್‌ ಸರ್ಕಾರದ ಜತೆ ಕೈ ಜೋಡಿಸಿದ ಅಜಿತ್‌ ಪವಾರ್‌

ಮುಂಬೈ: ಮಹಾರಾಷ್ಟ್ರದ ರಾಜಕೀಯ ಭಾನುವಾರ ಮತ್ತೊಮ್ಮೆ ದಿಢೀರ್‌ ತಿರುವು ಪಡೆದುಕೊಂಡಿದೆ. ಹಲವು ಸಮಯದಿಂದ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಭಾನುವಾರ ತಮ್ಮ 8 ಬೆಂಬಲಿಗ ಶಾಸಕರ ಜತೆಗೂಡಿ ಶಿಂಧೆ ಶಿವಸೇನೆ-ಬಿಜೆಪಿ ನೇತೃತ್ವದ ಸಂಪುಟ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೇ ಅಜಿತ್‌ ಡಿಸಿಎಂ ಸ್ಥಾನವನ್ನು ಅಲಂಕರಿಸಿದ್ದಾರೆ.

ಈ ವಿದ್ಯಮಾನ ಎನ್‌ಸಿಪಿ ನೇತಾರ ಶರದ್‌ ಪವಾರ್‌ಗೆ ಭಾರಿ ಆಘಾತ ತಂದಿದ್ದು, 24 ವರ್ಷಗಳಿಂದ ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಬೀಳುವ ಭೀತಿ ಸೃಷ್ಟಿ ಆಗಿದೆ. ಆದರೆ ಇದು ರಾಜ್ಯದಲ್ಲಿ ಬಿಜೆಪಿ ಬಲ ಹೆಚ್ಚಿಸಲಿದ್ದರೆ, ವಿಪಕ್ಷಗಳನ್ನು ಒಟ್ಟು ಮಾಡಿ ಬಿಜೆಪಿ ಹಣಿಯುವ ವಿಪಕ್ಷಗಳ ಯತ್ನಕ್ಕೆ ಹಿನ್ನಡೆ ಉಂಟುಮಾಡಿದೆ. ಈ ನಡುವೆ ಅಜಿತ್‌ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಶರದ್‌ ಪವಾರ್‌ ಘೋಷಿಸಿದ್ದು, ಜುಲೈ 5ರಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ಆದರೆ, ‘ನಾವು ಪಕ್ಷ ಬಿಟ್ಟಿಲ್ಲ. ಸರ್ಕಾರವನ್ನು ಇಡೀ ಎನ್‌ಸಿಪಿ ಬೆಂಬಲಿಸುತ್ತಿದೆ’ ಎಂದು ಅಜಿತ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇನ್ನೂ ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು – ರಾಜ್ಯಕ್ಕೆ ಇಬ್ಬರು ವೀಕ್ಷಕರ ಆಗಮನ

ಈ ಬೆನ್ನಲ್ಲೇ ಸಿಎಂ ಏಕನಾಥ್ ಶಿಂಧೆ ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿರುವ ಅಜಿತ್ ಪವಾರ್ ಸೇರಿ ಎಂಟು ಮಂದಿ ವಿರುದ್ಧ ಸ್ಪೀಕರ್ ರಾಹುಲ್ ನಾರ್ವೇಕರ್ ಗೆ  ಅನರ್ಹತೆ ಅರ್ಜಿ ಸಲ್ಲಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಯಂತ್ ಪಾಟೀಲ್, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ನಡೆ ಕಾನೂನುಬಾಹಿರವಾಗಿದ್ದು ಅವರು ಶರದ್ ಪವಾರ್ ಮತ್ತು ಪಕ್ಷವನ್ನು ಕತ್ತಲೆಯಲ್ಲಿಟ್ಟಿದ್ದರಿಂದ ಜಯಪ್ರಕಾಶ್ ದಂಡೆಗಾಂವ್ಕರ್ ನೇತೃತ್ವದ ಪಕ್ಷದ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಶಿಸ್ತು ಸಮಿತಿಯ ಶಿಫಾರಸಿನ ನಂತರ, ಎನ್‌ಸಿಪಿ ಅಜಿತ್​ ಪವಾರ್​ ಸೇರಿದಂತೆ ಒಂಬತ್ತು ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ರಾಜ್ಯ ಶಾಸಕಾಂಗಕ್ಕೆ ಮೇಲ್ ಮೂಲಕ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಭೌತಿಕ ಪ್ರತಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ನಾವು ಸ್ಪೀಕರ್ ರಾಹುಲ್ ನಾರ್ವೇಕರ್​ರಲ್ಲಿ ಶೀಘ್ರವಾಗಿ ವಿಚಾರಣೆಗೆ ಮಾಡುವಂತೆ ಮನವಿ ಮಾಡಿದ್ದೇವೆ. ಇದೇ ವಿಚಾರವಾಗಿ ಪಕ್ಷವು ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ. ಪಕ್ಷದ ನೀತಿಗೆ ವಿರುದ್ಧವಾಗಿ ಹೋದ ಕ್ಷಣ, ತಾಂತ್ರಿಕವಾಗಿ ಅವರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಪಕ್ಷವು ನೇಮಿಸಿದ ವಿಪ್​ಅನ್ನು ಅಧಿಕೃತವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಸ್ಪಷ್ಟವಾಗಿ ಹೇಳಿದೆ. ಶಾಸಕರ ಸಂಖ್ಯೆ ಮುಖ್ಯವಲ್ಲ. ಹೀಗಾಗಿ, ಜಿತೇಂದ್ರ ಅವದ್ ಅವರನ್ನು ಪಕ್ಷದ ಅಧಿಕೃತ ವಿಪ್ ಎಂದು ಪರಿಗಣಿಸಲಾಗುವುದು ಮತ್ತು ಇದು ಎಲ್ಲಾ ಶಾಸಕರಿಗೂ ಅನ್ವಯಿಸುತ್ತದೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥರು ತಿಳಿಸಿದ್ದಾರೆ.

suddiyaana