ಲ್ಯಾಂಡ್ ಡೀಲರ್ ವಿರುದ್ಧ ವರದಿ ಮಾಡಿದ್ದೇ ತಪ್ಪಾ..!? – ಪತ್ರಕರ್ತನ ಮೇಲೆ ಕಾರು ಹರಿಸಿ ಭೀಕರ ಕೊಲೆ..!

ಲ್ಯಾಂಡ್ ಡೀಲರ್ ವಿರುದ್ಧ ವರದಿ ಮಾಡಿದ್ದೇ ತಪ್ಪಾ..!? – ಪತ್ರಕರ್ತನ ಮೇಲೆ ಕಾರು ಹರಿಸಿ ಭೀಕರ ಕೊಲೆ..!

ಲ್ಯಾಂಡ್ ಡೀಲರ್ ವಿರುದ್ಧ ವರದಿ ಮಾಡಿದ್ದಕ್ಕೆ ಪತ್ರಕರ್ತನನ್ನ ಕೊಲೆ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರತ್ನಗಿರಿ ಜಿಲ್ಲೆಯಲ್ಲಿ ಪತ್ರಕರ್ತ ಶಶಿಕಾಂತ್ ವಾರಿಶೆ ಅವರ ಮೇಲೆ ಕಾರು ಹತ್ತಿಸಿ ಕೊಂದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತೈಲ ಸಂಸ್ಕರಣಾಗಾರದ ವಿವಾದದ ವಿಚಾರದಲ್ಲಿ ಆರೋಪಿ ವಿರುದ್ಧ ಶಶಿಕಾಂತ್ ವರದಿ ಬರೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಪತ್ನಿಯ ಶವ ಹೆಗಲ ಮೇಲೆ ಹೊತ್ತು ಸಾಗಿದ ಪತಿ – ಸಮಾಜವೇ ತಲೆತಗ್ಗಿಸುವಂತಾ ಘೋರ ದೃಶ್ಯ..!

ರತ್ನಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಿಫೈನರಿ ಯೋಜನೆಯನ್ನು ಸ್ಥಳೀಯ ಲ್ಯಾಂಡ್ ಡೀಲರ್  ಪಂಡರಿನಾಥ್ ಅಂಬೇರ್ಕರ್ ಬೆಂಬಲಿಸುತ್ತಿದ್ದ. ಇದೇ ಅಂಬೇರ್ಕರ್ ವಿರುದ್ಧ ವರದಿಗಳನ್ನು ಪ್ರಕಟಿಸಿದ್ದಕ್ಕೆ ಪತ್ರಕರ್ತ ಶಶಿಕಾಂತ್ ವಾರಿಶೆ ಅವರನ್ನು ಕೊಲೆ ಮಾಡಲಾಗಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಮಾಧ್ಯಮ ಸಂಸ್ಥೆಗಳು ಒತ್ತಾಯಿಸಿವೆ.

ರತ್ನಗಿರಿ ಜಿಲ್ಲೆಯ ಪೆಟ್ರೋಲ್ ಬಂಕ್​ವೊಂದರ ಬಳಿ ಸೋಮವಾರ ಶಶಿಕಾಂತ್ ಅವರ ಬೈಕ್ ಮೇಲೆ ಪಂಡರಿನಾಥ್ ಕಾರು ಹರಿಸಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಶಶಿಕಾಂತ್ ಅವರನ್ನ ಕೊಲ್ಹಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಶಶಿಕಾಂತ್ ಕೊನೆಯುಸಿರೆಳೆದಿದ್ದರು.

48 ವರ್ಷದ ಶಶಿಕಾಂತ್​ಗೆ ವೃದ್ಧ ತಾಯಿ, ಪತ್ನಿ ಹಾಗೂ 19 ವರ್ಷದ ಮಗ ಇದ್ದು, ಸ್ಥಳೀಯ ಮರಾಠಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಬರ್ಸು ಪ್ರದೇಶದಲ್ಲಿ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸ್ಥಾಪನೆಗೆ ಸ್ಥಳೀಯ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಕುರಿತಂತೆ ಶಶಿಕಾಂತ್ ವರದಿಗಳನ್ನು ಪ್ರಕಟಿಸುತ್ತಿದ್ದರು. ಮಹಾನಗರಿ ಟೈಮ್ಸ್ ಪತ್ರಿಕೆಯಲ್ಲಿ ಅಂಬೇರ್ಕರ್ ವಿರುದ್ಧ ಲೇಖನ ಬರೆದಿದ್ದರು. ಸ್ಥಳೀಯರನ್ನು ಬೆದರಿಸಿದ್ದಕ್ಕಾಗಿ ಅಂಬೇರ್ಕರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಶಶಿಕಾಂತ್ ಅವರು ತಮ್ಮ ವರದಿಯಲ್ಲಿ ಅಂಬೇರ್ಕರ್‌ನನ್ನು ಕ್ರಿಮಿನಲ್ ಎಂದು ಉಲ್ಲೇಖಿಸಿದ್ದರು. ಪ್ರಧಾನಿ, ಸಿಎಂ ಮತ್ತು ಡಿಸಿಎಂ ಅವರ ಚಿತ್ರಗಳಿರುವ ಬ್ಯಾನರ್‌ನಲ್ಲಿ ಆತ ತನ್ನ ಚಿತ್ರವನ್ನೂ ಹಾಕಿಕೊಂಡಿದ್ದಾನೆ ಎಂದು ಅವರು ಬರೆದಿದ್ದರು.

ರಾಜಾಪುರ ಹೆದ್ದಾರಿ ಸಮೀಪ ಸೋಮವಾರ ಶಶಿಕಾಂತ್ ಅವರ ಮೇಲೆ ಅಂಬೇರ್ಕರ್ ಎಸ್‌ಯುವಿ ಕಾರು ಹರಿಸಿದ್ದಾನೆ. ವಾಹನ ನಿಲ್ಲಿಸುವುದಕ್ಕೂ ಮುನ್ನ ಹಲವು ಮೀಟರ್‌ಗಳಷ್ಟು ದೂರ ಅವರನ್ನು ಎಳೆದೊಯ್ದಿದ್ದಾನೆ. ಸ್ಥಳೀಯರು ಶಶಿಕಾಂತ್ ಅವರ ಸಹಾಯಕ್ಕೆ ಧಾವಿಸಿದ್ದು, ಅಂಬೇರ್ಕರ್ ಸ್ಥಳದಿಂದ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಶಿಕಾಂತ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಘಟನೆ ನಡೆದ ಕೆಲವೇ ಸಮಯದಲ್ಲಿ ಆರೋಪಿ ಅಂಬೇರ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.  ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಫೆಬ್ರವರಿ 14ರವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

 

suddiyaana