ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಮರಣಮೃದಂಗ – ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಮರಣಮೃದಂಗ – ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಮೃದಂಗ ಮುಂದುವರಿದಿದೆ. 24 ಗಂಟೆಗಳ ಅವಧಿಯಲ್ಲಿ 24 ರೋಗಿಗಳು ಮೃತಪಟ್ಟ ಬೆನ್ನಲ್ಲೇ ಮತ್ತೆ ಮಂಗಳವಾರ ನಾಲ್ಕು ಮಕ್ಕಳು ಸೇರಿದಂತೆ ಇನ್ನೂ ಏಳು ಮಂದಿ ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಇದೀಗ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

31 ರೋಗಿಗಳ ಸಾವಿಗೆ ಔಷಧಿ ಮತ್ತು ಸಿಬ್ಬಂದಿ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಈ ಆಸ್ಪತ್ರೆಗೆ ಹಾವು ಕಡಿತ ಸೇರಿದಂತೆ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಮೃತಪಟ್ಟ  31 ರೋಗಿಗಳಲ್ಲಿ 16 ಮಕ್ಕಳು ಸೇರಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಮೃದಂಗ! – 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು

31 ರೋಗಿಗಳ ಸಾವಿಗೆ ಔಷಧಿ ಮತ್ತು ಸಿಬ್ಬಂದಿ ಕೊರತೆಯೇ ಕಾರಣ ಎಂಬ ಅರೋಪ ಕೇಳಿಬಂದಿತ್ತು. ಇದೀಗ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ಆಸ್ಪತ್ರೆಯ ಡೀನ್ ಡಾ. ಶ್ಯಾಮರಾವ್ ವಾಕೋಡೆ ನಿರಾಕರಿಸಿದ್ದಾರೆ. ಔಷಧ ಅಥವಾ ವೈದ್ಯರ ಕೊರತೆ ಇರಲಿಲ್ಲ ಎಂದು ಪ್ರತಿಪಾದಿಸಿರುವ ಅವರು, ಸೂಕ್ತ ಆರೈಕೆ ನೀಡಿದರೂ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.

ಸರಣಿ ಸಾವಿನ ಪ್ರಕರಣದ ತನಿಖೆ ನಡೆಸಲು ಸಮಿತಿ ರಚನೆ

ಈ ದಿಢೀರ್ ಹಾಗೂ ಆಘಾತಕಾರಿ ಸರಣಿ ಸಾವುಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ತನಿಖೆ ಬಳಿಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ಪರಾಮರ್ಶ ನಡೆಸಲು ನಾನು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡುತ್ತೇನೆ” ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶಕ ಡಾ ದಿಲೀಪ್ ಮೈಸೇಕರ್ ಹೇಳಿದ್ದಾರೆ.

ಕಾರಣ ವಿವರಿಸಿದ ಆಸ್ಪತ್ರೆ

ಶಿಶು ವೈದ್ಯಕೀಯ ವಿಭಾಗದಲ್ಲಿ 142 ಮಕ್ಕಳನ್ನು ದಾಖಲಿಸಲಾಗಿತ್ತು. ಸೆ 30 ರಿಂದ ಅಕ್ಟೋಬರ್ 1ರ ನಡುವೆ 12 ನವಜಾತ ಶಿಶುಗಳು ಅಸುನೀಗಿವೆ. ಇವೆಲ್ಲವೂ 0- 3 ದಿನಗಳ ಶಿಶುಗಳಾಗಿದ್ದು, ಬಹಳ ಕಡಿಮೆ ತೂಕ ಹೊಂದಿದ್ದವು ಎಂದು ಆಸ್ಪತ್ರೆ ಡೀನ್ ಸೋಮವಾರ ತಿಳಿಸಿದ್ದರು.  ಇನ್ನು ಜೀವ ಕಳೆದುಕೊಂಡ 12 ವಯಸ್ಕರಲ್ಲಿ ಐವರು ಗಂಡು ಹಾಗೂ ಏಳು ಮಂದಿ ಮಹಿಳೆಯರಿದ್ದಾರೆ. ನಾಲ್ವರು ವಯಸ್ಕರು ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗಿದ್ದಾರೆ. ಒಬ್ಬರು ಅಪರಿಚಿತ ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ. ಒಬ್ಬರಲ್ಲಿ ಲಿವರ್ ಸಮಸ್ಯೆ, ಇಬ್ಬರು ಕಿಡ್ನಿ ಸಮಸ್ಯೆ ಹಾಗೂ ಒಬ್ಬರು ಗರ್ಭಾವಸ್ಥೆ ವೇಳೆ ಸಮಸ್ಯೆಗಳನ್ನು ಹೊಂದಿದ್ದರು. ಇನ್ನು ಮೂರು ಅಪಘಾತ ಪ್ರಕರಣಗಳು ಇದ್ದವು” ಎಂದು ಜಿಲ್ಲಾಡಳಿತ ಹೇಳಿಕೆ ನೀಡಿತ್ತು.

ವಿರೋಧ ಪಕ್ಷಗಳ ಟೀಕಾಪ್ರಹಾರ

ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳ ಮರಣ ಘಟನೆ ಕುರಿತಂತೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ವಿಸ್ತೃತ ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಘಟನೆ ಬಹಳ ದುಃಖಕರ, ಗಂಭೀರ ಮತ್ತು ಚಿಂತೆಗೀಡು ಮಾಡುವಂತಿದೆ ಎಂದು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಥಾಣೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಪ ಅವಧಿಯಲ್ಲಿ 18 ರೋಗಿಗಳು ಮೃತಪಟ್ಟಿದ್ದ ಇದೇ ರೀತಿಯ ಘಟನೆ ನಡೆದಿದ್ದನ್ನು ಖರ್ಗೆ ಸ್ಮರಿಸಿದರು.

ಮಹಾರಾಷ್ಟ್ರದಲ್ಲಿನ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. “ಬಿಜೆಪಿ ಸರ್ಕಾರವು ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯು ವ್ಯಯಿಸುತ್ತಿದೆ. ಆದರೆ ಮಕ್ಕಳಿಗೆ ಔಷಧ ಖರೀದಿಸಲು ಅವರ ಬಳಿ ಹಣ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

Shwetha M