ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ – ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ಡಾಕ್ಟರ್

ದೇಶದಲ್ಲಿ ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಿದೆ. ಬಿಸಿ ಗಾಳಿಯಿಂದಾಗಿ ಜನರು ತತ್ತರಿಸಿಹೋಗಿದ್ದಾರೆ. ಮನೆಯಲ್ಲಿ ಬಿಡಿ ವಾಹನದಲ್ಲಿ ಎಸಿ ಹಾಕಿ ಕೂತರೂ ಶಾಖ ಮಾತ್ರ ಕಮ್ಮಿಯಾಗಲ್ಲ ಬಿಸಿಲ ಹೊಡೆತ ಹಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದ್ರೆ ಇಲ್ಲೊಬ್ರು ಬಿಸಿಲ ಶಾಖದಿಂದ ಪಾರಾಗಲು ಹೊಸ ಐಡಿಯಾವೊಂದನ್ನ ಕಂಡುಕೊಂಡಿದ್ದಾರೆ. ತಮ್ಮ ದುಬಾರಿ ಕಾರಿಗೆ ಸೆಗಣಿ ಬಳಿದಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಮ್ಯಾನ್ಮಾರ್ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿಕೆ – ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ
ಹೌದು ವಾಹನದಲ್ಲಿ ಓಡಾಡುವಾಗ ಎಸಿ ಇದ್ರೂ ಕೂಡಾ ಸೆಖೆ ಮಾತ್ರ ಕಮ್ಮಿಯಾಗಲ್ಲ. ಹೀಗಾಗೇ ಮಹಾರಾಷ್ಟ್ರದ ಪಂಢಪುರದ ಆಯುರ್ವೇದಿಕ್ ವೈದ್ಯ ಡಾ. ರಾಮ್ ಹರಿ ಕದಮ್ ಎಂಬವರು ಈ ಸುಡು ಬೇಸಿಗೆಯಲ್ಲಿ ಕಾರನ್ನು ಕೂಲಾಗಿಡಲು ಹೊಸ ಐಡಿಯಾ ಕಂಡು ಹಿಡಿದಿದ್ದಾರೆ. ತಮ್ಮ ಐಷಾರಾಮಿ ಮಹೀಂದ್ರಾ XUV 300 ಕಾರಿಗೆ ಸಗಣಿ ಲೇಪಿಸಿದ್ದಾರೆ. ಸಗಣಿಗೆ ಗೋಮೂತ್ರವನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಕಾರಿಗೆ ಹಚ್ಚಿದ್ದಾರೆ. ಇದರಿಂದ ಅರ್ಧದಷ್ಟು ತಾಪಮಾನ ಕಡಿಮೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಹಸುವಿನ ಸಗಣಿ ವಿಕಿರಣವನ್ನು ವಿರೋಧಿ ಗುಣವನ್ನು ಹೊಂದಿದೆ, ಇದರಿಂದಾಗಿ ಕಾರಿನ ಬಣ್ಣ ಕೂಡಾ ಮಸುಕಾಗುವುದಿಲ್ಲ ಹಾಗೆಯೇ ಶಾಖ-ಸಂಬಂಧಿತ ಸಮಸ್ಯೆಗಳಿಂದ ವಾಹನವನ್ನು ರಕ್ಷಿಸುತ್ತದೆ. ಮತ್ತು ಇತರ ವಾಹನಗಳಿಗೆ ಹೋಲಿಸಿದರೆ ಸಗಣಿ ಬಳಿದ ಕಾರಿನ ಒಳಗಿನ ತಾಪಮಾನವು 50% ನಷ್ಟು ತಂಪಾಗಿರುತ್ತದೆ. ಇದು ಕಾರನ್ನು ಸ್ವಾಭಾವಿಕವಾಗಿ ಕೂಲಾಗಿರಿಸುವುದು ಮಾತ್ರವಲ್ಲದೆ, ಇದರಿಂದ ವಾಹನಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಕಾರು ಮಾತ್ರವಲ್ಲದೆ ಡಾ. ಕದಮ್ ತಮ್ಮ ಮನೆಯ ಸಿಮೆಂಟ್ ಗೋಡೆಗಳಿಗೂ ಸಗಣಿ ಲೇಪಿಸಿದ್ದಾರೆ. ಇದು ಮನೆಯೊಳಗಿನ ಸುಡು ತಾಪಮಾನವನ್ನು 50% ರಷ್ಟು ಕಡಿಮೆ ಮಾಡುವುದಲ್ಲದೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಹಸುವಿನ ಸಗಣಿ ಲೇಪಿತ ಗೋಡೆಗಳನ್ನು ಹೊಂದಿರುವ ಕೋಣೆಗಳು ಶಾಂತಿಯುತವಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಸಹಕಾರಿ ಎಂದು ಡಾ. ಕದಮ್ ಅವರ ಪತ್ನಿ ತಿಳಿಸಿದ್ದಾರೆ.