ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 17 ಕಾರ್ಮಿಕರು ಸಾವು

ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 17 ಕಾರ್ಮಿಕರು ಸಾವು

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂರನೇ ಹಂತದ ನಿರ್ಮಾಣದ ವೇಳೆ ಸೇತುವೆಯ ಚಪ್ಪಡಿ ಮೇಲೆ ಕ್ರೇನ್ ಬಿದ್ದು 17 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಸೋಮವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಸೇತುವೆ ನಿರ್ಮಾಣದಲ್ಲಿ ಮತ್ತು ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಪ್ರಿಕಾಸ್ಟ್ ಬಾಕ್ಸ್‌ಗಳನ್ನು ಸ್ಥಾಪಿಸಲು ಮೊಬೈಲ್ ಗ್ಯಾಂಟ್ರಿ ಕ್ರೇನ್ ಬಳಸಲಾಗುತ್ತಿತ್ತು. ಈ ಸ್ಥಳದಲ್ಲಿ ಹಲವು ಮಂದಿ ಕಾರ್ಮಿಕರ ಇದ್ದರು. ಈ ವೇಳೆ ಸೇತುವೆಯ ಚಪ್ಪಡಿ ಮೇಲೆ ಕ್ರೇನ್ ಬಿದ್ದಿದ್ದು 17 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಹೆಚ್‌ಪಿ ಮೆರವಣಿಗೆ ವೇಳೆ ಕೋಮು ಘರ್ಷಣೆ – ಮೂವರು ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಮುಂಬೈನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಶಹಪುರ್ ತೆಹಸಿಲ್ ಸರ್ಲಾಂಬೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಎಂಎಸ್‌ಆರ್‌ಡಿಸಿ ಸಚಿವ ದಾದಾ ಭೂಸೆ, ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ. ಅಧಿಕಾರಿಗಳ ಪ್ರಕಾರ ಕನಿಷ್ಟ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

suddiyaana