ಮಹಾ ಕುಂಭ ಮೃತ್ಯು ಕುಂಭ – ಯೋಗಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಪ್ಲ್ಯಾನ್ ಮಾಡದೇ ಕುಂಭಮೇಳ ಆಯೋಜನೆ ಮಾಡಿದ್ರಾ?

ಮಹಾ ಕುಂಭ ಮೃತ್ಯು ಕುಂಭ –  ಯೋಗಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿಪ್ಲ್ಯಾನ್ ಮಾಡದೇ ಕುಂಭಮೇಳ ಆಯೋಜನೆ ಮಾಡಿದ್ರಾ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾಕುಂಭದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಸಾವುಗಳಿಗೆ ಸಂಬಂಧಿಸಿದಂತೆ ಮತ್ತು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನಸಂದಣಿಯ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾಕುಂಭವನ್ನು “ಮೃತ್ಯು ಕುಂಭ” ಎಂದು ಕರೆದಿರುವ ಮಮತಾ ಬ್ಯಾನರ್ಜಿ ವಿಐಪಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದ್ದರೂ, ಬಡವರಿಗೆ ಅಗತ್ಯ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು,  ರಾಷ್ಟ್ರವನ್ನು ವಿಭಜಿಸಲು ಧರ್ಮವನ್ನು ಮಾರಾಟ ಮಾಡಲಾಗುತ್ತಿದೆ  ಎಂದು ಆರೋಪಿಸಿದ್ದಾರೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಕಾರ್ಯಕ್ರಮಕ್ಕೆ ಸರಿಯಾದ ಯೋಜನೆಯ ಕೊರತೆಯಿದೆ ಎಂದು ಅವರು ಆರೋಪಿಸಿದ್ದಾರೆ.

ಇದು ‘ಮೃತ್ಯು ಕುಂಭ’. ನಾನು ಮಹಾ ಕುಂಭವನ್ನು ಮತ್ತು ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ ಯಾವುದೇ ಸರಿಯಾದ ಪ್ಲಾನ್ ಮಾಡದೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಂತರು ಮತ್ತು ವಿಐಪಿಗಳಿಗೆ 1 ಲಕ್ಷ ರೂ.ಗಳವರೆಗೆ ಟೆಂಟ್‌ಗಳು  ಪಡೆಯಲು ವ್ಯವಸ್ಥೆಗಳಿವೆ. ಆದರೆ ಬಡವರಿಗೆ, ಕುಂಭದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ತಕ್ಷಣವೇ ತಿರುಗೇಟು ನೀಡಿತು. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಮಹಾಕುಂಭವನ್ನು ಮೃತ್ಯು ಕುಂಭ ಎಂದು ಹೇಳಿರುವುದನ್ನು ಹಿಂದೂಗಳ ಮೇಲಿನ ದಾಳಿ ಎಂದು ಕರೆದಿದ್ದಾರೆ. ಈ ಬಗ್ಗೆ ಜನರು ತೀವ್ರ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ. ಜನವರಿ 29ರಂದು ಮಹಾ ಕುಂಭಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನಕ್ಕಾಗಿ ಸೇರಿದ್ದರಿಂದ ಅವ್ಯವಸ್ಥೆ ಉಂಟಾಗಿ ನೂಕುನುಗ್ಗಲಿನಿಂದ 30 ಜನರು ಸಾವನ್ನಪ್ಪಿದರು. ಅದಾದ ನಂತರ ಎರಡನೇ ಕಾಲ್ತುಳಿತ ಸಂಭವಿಸಿತ್ತು. ಆದರೆ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಬಳಿಕ ಮಹಾ ಕುಂಭಮೇಳಕ್ಕೆ ರೈಲು ಹತ್ತುವ ಧಾವಿಸಿ ಉಂಟಾದ ಕಾಲ್ತುಳಿತದಲ್ಲಿ ನವದೆಹಲಿ ರೈಲು ನಿಲ್ದಾಣದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದರು.

Kishor KV

Leave a Reply

Your email address will not be published. Required fields are marked *