2 ಇನ್ನಿಂಗ್.. 11 ವಿಕೆಟ್.. SUPER MAN ವಾಷಿಂಗ್ಟನ್ – ಕಿವೀಸ್ ಕಿವಿ ಹಿಂಡಿದ್ದೇ ಸುಂದರ್
ಪುಣೆಯಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಮ್ಯಾಚ್ನ ಫಸ್ಟ್ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದ ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಕಮ್ ಬ್ಯಾಕ್ ಮಾಡೋ ಲಕ್ಷಣ ಕಾಣ್ತಿದೆ. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 255 ರನ್ ಗಳಿಗೆ ಆಲೌಟ್ ಆಗಿದೆ. ಶನಿವಾರ 198 ರನ್, 5 ವಿಕೆಟ್ಗಳಿಂದ ದಿನದಾಟ ಆರಂಭಿಸಿದ ಕಿವೀಸ್ ಓವರ್ ನೈಟ್ ಸ್ಕೋರ್ ಗೆ 57 ರನ್ ಸೇರಿಸಿ ಉಳಿದ ಐದು ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಮೊದಲ ಇನ್ನಿಂಗ್ಸ್ನ ಲೀಡ್ ಸೇರಿಸಿ ಟೀಂ ಇಂಡಿಯಾ ಗೆಲುವಿಗೆ 359 ರನ್ ಬೃಹತ್ ಮೊತ್ತ ಗಳಿಸಬೇಕಿದೆ. ಬಟ್ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಹೆಸ್ರು ವಾಷಿಂಗ್ಟನ್ ಸುಂದರ್. ಸುಂದರ್ ಬೌಲಿಂಗ್ಗೆ ಇಳ್ದಾಗಲೆಲ್ಲಾ ಈ ಸಲ ವಿಕೆಟ್ ಪಕ್ಕಾ ಎನ್ನುವಂತೆಯೇ ಬೌಲ್ ಮಾಡಿದ್ದಾರೆ. ಇಡೀ ತಂಡವೇ ಫೇಲ್ಯೂರ್ ಆದ್ರೂ ತಮ್ಮ ಭುಜದ ಮೇಲೆ ಹೊತ್ತು ಸಾಗಿಸಿದಂತೆ ಪರ್ಫಾಮೆನ್ಸ್ ನೀಡಿದ್ದಾರೆ. ಮೂರು ವರ್ಷಗಳ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರೂ ಕೂಡ ಬೌಲಿಂಗ್‌ನಲ್ಲಿ ಜಾದೂವನ್ನೇ ಮಾಡಿದ್ದಾರೆ. ಅಷ್ಟಕ್ಕೂ ವಾಷಿಂಗ್ಟನ್ ಸುಂದರ್ ಸೂಪರ್ ಮ್ಯಾನ್ ಪರ್ಫಾಮೆನ್ಸ್ ಹಿಂದಿನ ಸೀಕ್ರೆಟ್ ಏನು? ಇಂಥಾ ಮಾಂತ್ರಿಕನನ್ನ ಟೀಂ ಇಂಡಿಯಾದಿಂದ ದೂರ ಇಟ್ಟಿದ್ದೇಕೆ? ಇನ್ಮುಂದೆ ಐಪಿಎಲ್ನಲ್ಲಿ ಸುಂದರ್ ಲೆವೆಲ್ಲೇ ಚೇಂಜ್ ಆಗುತ್ತಾ? ಈ ಬಗೆಗಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾನಸ ಅತಿರೇಕದ ವರ್ತನೆ.. ಬಿಗ್ ಬಾಸ್ ನಿಂದ OUT? – ತುಕಾಲಿ ಪತ್ನಿ ದೃಷ್ಟಿ ಗೊಂಬೆ
ಪುಣೆ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ತಂಡ ಉತ್ತಮ ಓಪನಿಂಗ್ ಪಡ್ಕೊಂಡಿತ್ತು. ಬೆಂಗಳೂರು ಪಂದ್ಯದಲ್ಲಿ ಭಾರತದ ಬೌಲರ್ಗಳನ್ನ ಬೆಂಡೆತ್ತಿದ್ದ ಕಿವೀಸ್ ಬ್ಯಾಟರ್ಸ್ ಪುಣೆಯಲ್ಲೂ ಕೂಡ ಅದೇ ಮ್ಯಾಜಿಕ್ನ ಎದುರು ನೋಡ್ತಿದ್ರು. ಬಟ್ ಕಿವೀಸ್ ಲೆಕ್ಕಾಚಾರವನ್ನ ಉಲ್ಟಾ ಮಾಡಿದ್ದೇ ವಾಷಿಂಗ್ಟನ್ ಸುಂದರ್ ಮತ್ತು ಆರ್.ಅಶ್ವಿನ್. ಚೆನ್ನೈ ಮೂಲದ ಈ ಇಬ್ಬರು ಸ್ಪಿನ್-ಆಲ್ ರೌಂಡರ್ಸ್ ಭಾರತೀಯ ಕ್ರಿಕೆಟ್‌ನಲ್ಲಿ ದಾಖಲೆಯನ್ನು ನಿರ್ಮಿಸಿದ್ರು.
3.5 ವರ್ಷಗಳ ಬಳಿಕ ಟೆಸ್ಟ್ ಮ್ಯಾಚ್ ಗೆ ಮರಳಿದ್ದ ಸುಂದರ್!
ಹೌದು. ಟೀಂ ಇಂಡಿಯಾದಲ್ಲಿ ವಾಷಿಂಗ್ಟನ್ ಸುಂದರ್ ಟೆಸ್ಟ್ ಮ್ಯಾಚ್ ಆಡಿ ಬರೋಬ್ಬರಿ 3.5 ವರ್ಷಗಳೇ ಕಳೆದಿತ್ತು. ಲಾಂಗ್ ಗ್ಯಾಪ್ ಬಳಿಕ ತಂಡಕ್ಕೆ ಮರಳಿದ್ರೂ ಕೂಡ ಫಸ್ಟ್ ಇನ್ನಿಂಗ್ಸ್‌ನಲ್ಲಿ ಕೇವಲ 59 ರನ್ ನೀಡಿ 7 ವಿಕೆಟ್ಗಳನ್ನ ಬೇಟೆಯಾಡಿದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಸುಂದರ್ ಪಾತ್ರರಾದರು. ಇದಕ್ಕೂ ಮುನ್ನ ಆಡಿದ್ದ 4 ಟೆಸ್ಟ್‌ಗಳ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್ ಪಡೆದಿದ್ದ ಸುಂದರ್ ಈಗ ಒಂದೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ರು. ಈ ಮೂಲಕ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಸ್ಪೆಲ್ ಮಾಡಿದ ಭಾರತದ ಜಂಟಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಅದೇ ಇನ್ನಿಂಗ್ಸ್‌ನಲ್ಲಿ ಆರ್.ಅಶ್ವಿನ್ 3 ವಿಕೆಟ್ಗಳನ್ನ ಉರುಳಿಸಿದ್ರು. ಈ ಮೂಲಕ ಇಬ್ಬರೇ ಬೌಲರ್ಸ್ ಕಿವೀಸ್ ಪಡೆಯನ್ನ ಆಲೌಟ್ ಮಾಡಿದ್ರು. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಆಫ್‌ಸ್ಪಿನ್ ಜೋಡಿ ಎಂಬ ದಾಖಲೆಯನ್ನು ಸುಂದರ್ ಹಾಗೂ ಅಶ್ವಿನ್ ಬರೆದಿದ್ದಾರೆ.
ಒಂದೇ ಪಂದ್ಯದಲ್ಲಿ ಸುಂದರ್ & ಅಶ್ವಿನ್ ಜೋಡಿ ದಾಖಲೆ!
ಮೊದಲ ಇನ್ನಿಂಗ್ಸ್‌ನಲ್ಲಿ ಸುಂದರ್ ಉರುಳಿಸಿದ 7 ವಿಕೆಟ್‌ಗಳಲ್ಲಿ ಐವರು ಬ್ಯಾಟ್ಸ್‌ಮನ್‌ಗಳನ್ನು ಬೌಲ್ಡ್ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 5 ನೇ ಬೌಲರ್ ಆದರು. ಇದಕ್ಕೂ ಮುನ್ನ ಜಸುಭಾಯ್ ಪಟೇಲ್, ಬಾಪು ನಾಡಕರ್ಣಿ, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಕೂಡ ಈ ಸಾಧನೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ನಾಥನ್ ಲಿಯಾನ್ ಅವರನ್ನು ಹಿಂದಿಕಿದ್ದಾರೆ. ಅಶ್ವಿನ್ ಇದುವರೆಗೆ 189 ವಿಕೆಟ್‌ಗಳನ್ನು ಪಡೆದಿದ್ದರೆ, ಆಸ್ಟ್ರೇಲಿಯಾದ ನಾಥನ್ ಲಿಯಾನ್ 187 ವಿಕೆಟ್ ಪಡೆದಿದ್ದಾರೆ.
ಸುಂದರ್ ಆಯ್ಕೆ ಮಾಡಿದ್ದೇ ಬಿಸಿಸಿಐಗೆ ಪ್ಲಸ್!
ಯೆಸ್. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್ ಭರ್ಜರಿ ವಾಪಸಾತಿ ಮಾಡಿದ್ದಾರೆ. 3.5 ವರ್ಷಗಳ ಹಿಂದೆ ವಾಷಿಂಗ್ಟನ್ ಸುಂದರ್ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಗಾಯದ ಸಮಸ್ಯೆ ಮತ್ತು ಅಸ್ಥಿರ ಪ್ರದರ್ಶನದಿಂದ ಅವರು ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದರು. ಆದರೆ 3.5 ವರ್ಷಗಳ ಬಳಿಕ ವಾಪಸಾತಿ ಮಾಡಿದ ಅವರು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಕುಲದೀಪ್ ಯಾದವ್ ಬದಲಾಗಿ ವಾಷಿಂಗ್ಟನ್ ಸುಂದರ್ ಅವಕಾಶ ಪಡೆದಿದ್ರು. ಬ್ಯಾಟಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವ ಕಾರಣ ಎರಡನೇ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಗಿತ್ತು. ಬಿಸಿಸಿಐ ಈ ನಂಬಿಕೆಯನ್ನ ಸುಂದರ್ ಉಳಿಸಿಕೊಂಡಿದ್ದಾರೆ. ಹಾಗೇ ಸೆಕೆಂಡ್ ಇನ್ನಿಂಗ್ಸ್ನಲ್ಲೂ ನಾಲ್ಕು ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. ಈ ಮೂಲಕ ಎರಡು ಇನ್ನಿಂಗ್ಸ್‌ನಲ್ಲಿ ಭರ್ಜರಿ 11 ವಿಕೆಟ್ಗಳನ್ನ ಕಿತ್ತಿದ್ದಾರೆ. ಅಚ್ಚರಿ ಅಂದ್ರೆ ಜಗತ್ತನ್ನೇ ಅಚ್ಚರಿಗೊಳಿಸಿರೋ ಜಸ್ಪ್ರೀತ್ ಬುಮ್ರಾಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ. ಹಾಗೇ ಆಕಾಶ್ ದೀಪ್ ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗೆ ಸುಂದರ್ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡ್ತಿದ್ದು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಫಿಕ್ಸ್ ಆಗಲಿದೆ. ಹಾಗೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಗೂ ಆಯ್ಕೆಯಾಗಬಹುದು.
ಸದ್ಯ ಪುಣೆಯಲ್ಲಿ ವಾಷಿಂಗ್ಟನ್ ಪ್ರದರ್ಶನ ನೋಡ್ತಿದ್ದಂತೆ ಐಪಿಎಲ್ ಫ್ರಾಂಚೈಸಿಗಳೂ ಕೂಡ ಅಲರ್ಟ್ ಆಗಿವೆ. ಚೆನ್ನೈ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳೋಕೆ ತುದಿಗಾಲಲ್ಲಿ ನಿಂತಿವೆ. ಸದ್ಯ ವಾಷಿಂಗ್ಟನ್ ಸುಂದರ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿದ್ದಾರೆ. 2024ರ ಐಪಿಎಲ್ನಲ್ಲಿ ಸುಂದರ್ ಆಡಿದ್ದು ಎರಡೇ ಪಂದ್ಯಗಳನ್ನ. ಇದೀಗ ಫ್ರಾಂಚೈಸಿ ಹರಾಜುಗೆ ಬಿಡೋ ಸಾಧ್ಯತೆ ಇದೆ. ಹಾಗೇನಾದ್ರೂ ಸುಂದರ್ ಆಕ್ಷನ್ಗೆ ಬಂದ್ರೆ ಫ್ರಾಂಚೈಸಿಗಳು ಹೆಚ್ಚೆಚ್ಚು ಬಿಡ್ ಮಾಡೋದಂತೂ ಪಕ್ಕಾ.