ಬೈಕ್ ಸ್ಟಂಟ್ ಮಾಡಿ ಯೂಟ್ಯೂಬ್ ಗೆ ವಿಡಿಯೋ ಅಪ್ ಲೋಡ್ – ಬೈಕ್ ಸುಟ್ಟು ಹಾಕಿ ಚಾನಲ್ ಡಿಲೀಟ್ ಮಾಡುವಂತೆ ಹೈಕೋರ್ಟ್ ಚಾಟಿ  

ಬೈಕ್ ಸ್ಟಂಟ್ ಮಾಡಿ ಯೂಟ್ಯೂಬ್ ಗೆ ವಿಡಿಯೋ ಅಪ್ ಲೋಡ್ – ಬೈಕ್ ಸುಟ್ಟು ಹಾಕಿ ಚಾನಲ್ ಡಿಲೀಟ್ ಮಾಡುವಂತೆ ಹೈಕೋರ್ಟ್ ಚಾಟಿ  

ಈಗಂತೂ ಸ್ಮಾರ್ಟ್ ಫೋನ್ ಜಮಾನ. ಅದ್ರಲ್ಲೂ ಟಿವಿ ಚಾನಲ್ ಗಳಿಗಿಂತ ಮೊಬೈಲ್ ನಲ್ಲಿ ಬರೋ ವಿಡಿಯೋಗಳೇ ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿ ಇರುತ್ತವೆ. ಎಲ್ಲರೂ ಒಂದೊಂದು ತಮ್ಮದೇ ಚಾನಲ್ ಮಾಡಿಕೊಂಡು ವಿಡಿಯೋ ಅಪ್ ಲೋಡ್ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರೆ. ಹೀಗೆಯೇ ಇಲ್ಲೊಬ್ಬ ಬೈಕರ್ ಕೂಡ ವಿಡಿಯೋ ಅಪ್ ಲೋಡ್ ಮಾಡುತ್ತಾ ಸಿಕ್ಕಾಪಟ್ಟೆ ವ್ಯೂಸ್ ಪಡೀತಿದ್ದ. ಆದರೀಗ ಹೈಕೋರ್ಟ್ ಆತನ ಬೈಕ್ ಸುಟ್ಟು ಹಾಕಬೇಕು, ಚಾನೆಲ್ ನ ಕಿತ್ತು ಹಾಕುವಂತೆ ಬಿಸಿ ಮುಟ್ಟಿಸಿದೆ.

ಇದನ್ನೂ ಓದಿ : ಈಕೆ ಸ್ನಾನ ಮಾಡಂಗಿಲ್ಲ.. ನೀರು ಕುಡಿಯಂಗಿಲ್ಲ..! – ಯುವತಿಗೆ ಜೀವಜಲವೇ ಕಂಟಕವಾಗಿದ್ದು ಯಾಕೆ?

ಕೈಗೆ ಬೈಕ್ ಸಿಕ್ಕರೆ ಕೆಲವರ ತಲೆಯೇ ನೆಟ್ಟಗಿರಲ್ಲ. ಬೈಕ್ ವ್ಹೀಲಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೆ ತೊಂದರೆ ಕೊಡುತ್ತಾರೆ. ಇದೇ ಕಾರಣಕ್ಕೆ ರಸ್ತೆಗಳಲ್ಲಿ ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡುವವರ ಬೈಕ್‌ಗಳನ್ನು (Bike) ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ (Madras High Court) ಖಾರವಾಗಿ ಅಭಿಪ್ರಾಯಪಟ್ಟಿದೆ. ವೀಲಿಂಗ್ ಮಾಡಿ ಬಂಧಿತನಾಗಿರುವ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಜಾ ಮಾಡಿದ ಕೋರ್ಟ್‌ ಬಂಧಿತ ವ್ಯಕ್ತಿಯ ಚಾನೆಲನ್ನು ಯೂಟ್ಯೂಬ್‌ನಿಂದಲೇ ತೆಗೆದು ಹಾಕಬೇಕು ಎಂದು ಚಾಟಿ ಬೀಸಿದೆ. ಬೈಕಿಂಗ್‌ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಯೂಟ್ಯೂಬರ್ ಟಿಟಿಎಫ್ ವಾಸನ್ (TTF Vasan) ಚೆನ್ನೈ-ವೆಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ (Bike Wheeling) ಮಾಡುತ್ತಾ ಚಿತ್ರೀಕರಣ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ವಾಸನ್ ಅವರನ್ನು ಬಂಧಿಸಿದ್ದರು. ಬಳಿಕ ವಾಸನ್ ಜಾಮೀನು ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ವಾಸನ್‌ 20 ಲಕ್ಷ ರೂ. ಮೌಲ್ಯದ ಬೈಕನ್ನು ಹೊಂದಿದ್ದಾರೆ. ಅಪಾಯಕಾರಿ ಸ್ಟಂಟ್‌ ಮಾಡುವ ವೇಳೆ 3 ಲಕ್ಷ ರೂ. ಮೌಲ್ಯದ ಜಾಕೆಟ್‌ ಧರಿಸಿದ್ದರಿಂದ ಅವರು ಪಾರಾಗಿದ್ದಾರೆ. ಅವರ Twin Throttlers ಚಾನೆಲನ್ನು 45 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಈ ವಿಡಿಯೋದಿಂದ ಯುವಕರು ಪ್ರಭಾವಿತರಾಗಿ ಮಿತಿಮೀರಿದ ವೇಗದಲ್ಲಿ ಸಂಚರಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೆ ಜಾಮೀನು ಮಂಜೂರು ಮಾಡಬೇಡಿ ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು.   ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಸಿವಿ ಕಾರ್ತಿಕೇಯನ್‌ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ವಾಸನ್‌ಗೆ ಇದೊಂದು ಪಾಠವಾಗಬೇಕು. ಕಸ್ಟಡಿಯಲ್ಲಿ ಇರಲಿ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೇ ವಾಸನ್‌ ಸ್ಟಂಟ್‌ ಮಾಡಿದ ಬೈಕನ್ನು ಸುಟ್ಟು ಹಾಕಬೇಕು. ಯೂಟ್ಯೂಬ್‌ ಚಾನೆಲನ್ನು ಡಿಲೀಟ್‌ ಮಾಡಬೇಕು ಎಂದು ಖಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ವಾಸನ್ ಅವರ ಕೋರಿಕೆಯಂತೆ ವೈದ್ಯಕೀಯ ಸಹಾಯವನ್ನು ಒದಗಿಸುವಂತೆ ನ್ಯಾಯಾಲಯವು ಆದೇಶಿಸಿತು. ಕೋರ್ಟ್‌ ಈ ಹಿಂದೆ ಎರಡು ಬಾರಿ ವಾಸನ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಟಿಟಿಎಫ್ ವಾಸನ್ ಅವರು ತಮ್ಮ ಟ್ವಿನ್ ಥ್ರಾಟ್ಲರ್‌ ಚಾನೆಲ್‌ನಲ್ಲಿ ಬೈಕಿಂಗ್ ವೀಡಿಯೊಗಳಿಗೆ ಪ್ರಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಅವರು ಕಾಲಿವುಡ್‌ಗೆ ಎಂಟ್ರಿಯಾಗಬೇಕಿತ್ತು. ಸೆಲ್ ಆಮ್ ನಿರ್ದೇಶನದ ‘ಮಂಜಲ್ ವೀರನ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಕಳೆದ ತಿಂಗಳು ವಾಸನ್ ಅವರು ತಮ್ಮ ಐಷಾರಾಮಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಲು ಪ್ರಯತ್ನಿಸಿದಾಗ ರಸ್ತೆ ಅಪಘಾತಕ್ಕೀಡಾಗಿದ್ದರು.

 

Shantha Kumari