ಮಧ್ಯ ಪ್ರದೇಶದ ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ – ಹಲವರು ಸಿಲಿಕಿರುವ ಶಂಕೆ

ಮಧ್ಯ ಪ್ರದೇಶದ ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ – ಹಲವರು ಸಿಲಿಕಿರುವ ಶಂಕೆ

ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌​ನಲ್ಲಿರುವ  ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶನಿವಾರ ಮುಂಜಾನೆ ಸಚಿವಾಲಯದಲ್ಲಿ ಬೆಂಕಿಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಶನಿವಾರ ಮುಂಜಾನೆ ಸಚಿವಾಲಯ ಕಟ್ಟಡ ವಲ್ಲಭ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ವೇಗವಾಗಿ ಹರಡಿದ್ದಲ್ಲದೆ, ದಟ್ಟವಾದ ಹೊಗೆ ಆವರಿಸಿದೆ. ಅದೃಷ್ಟವಶಾತ್ ಸಾವು-ನೋವು ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.  ಬೆಂಕಿ ಅವಘಡಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಾಯ್ತು ನೀರಿನ ಸಮಸ್ಯೆ –  ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ ಜನ!

ಬೆಂಕಿ ಅವಘಡದ ಕಾರಣ ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗುತ್ತಿದೆ. ಒಳಗೆ 5ಕ್ಕೂ ಹೆಚ್ಚು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಸದ್ಯ ಅಗ್ನಿ ಸುರಕ್ಷತಾ ತಜ್ಞ ಪಂಕಜ್ ಖರೆ ಕೂಡ ಸ್ಥಳದಲ್ಲಿದ್ದಾರೆ.

ಭೋಪಾಲ್‌ನ ವಲ್ಲಭ ಭವನದ ರಾಜ್ಯ ಸಚಿವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ ಕುರಿತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಪ್ರತಿಕ್ರಿಯಸಿದ್ದು, ಭವನದ ಹಳೆಯ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸದ್ಯದ ಮಾಹಿತಿಯಿಂದ ದೃಢಪಟ್ಟಿದೆ. ಜಿಲ್ಲಾಧಿಕಾರಿಯಿಂದ ಮಾಹಿತಿ ಸ್ವೀಕರಿಸಲಾಗಿದ್ದು, ಅದನ್ನು ಮೇಲ್ವಿಚಾರಣೆ ಮಾಡಲು ಸಿಎಸ್‌ಗೆ ಸೂಚಿಸಿದ್ದೇನೆ ಎಂದಿದ್ದಾರೆ.

Shwetha M