ಮನೆ ಅಗೆಯುವಾಗ ಸಿಕ್ಕಿತ್ತು ಸಂಪತ್ತು.. ರಾತ್ರಿಯಿಡೀ ನಿದ್ದೆ ಇಲ್ಲ – ನೆಮ್ಮದಿ ಕಳೆದುಕೊಂಡ ಕಾರ್ಮಿಕ ಮಾಡಿದ್ದೇನು?
ಭೂಮಿಗೆ ನಮ್ಮಲ್ಲಿ ದೇವರ ಸ್ಥಾನಮಾನವಿದೆ. ದೇವತೆ ಎಂದು ಪೂಜಿಸಲಾಗುತ್ತದೆ. ಭೂ ತಾಯಿಯ ತಾಳ್ಮೆ ಮತ್ತು ಸಹನಾ ಶಕ್ತಿಯಿಂದಾಗಿ ಇಡೀ ಜಗತ್ತು ತಲೆ ಎತ್ತಿ ನಿಂತಿದೆ. ಗಾತ್ರದಲ್ಲಿ ಸೌರಮಂಡಲದ 5ನೇ ಅತ್ಯಂತ ದೊಡ್ಡ ಗ್ರಹ ಈ ಧರೆ. ಲಕ್ಷ ಕೋಟಿ ಜೀವ ಸಂಕುಲವನ್ನು ಸಲಹುತ್ತಿದ್ದಾಳೆ. ನೀರು, ಗಿಡ- ಮರ ಹೀಗೆ ಜೀವ ಸಂಕುಲ ಬದುಕಲುಬೇಕಾದ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕಾರಣ ಇತರ ಗ್ರಹಗಳಿಗಿಂತ ಭೂಮಿ ಭಿನ್ನವಾಗಿ ಗುರುತಿಸಿಕೊಂಡಿದೆ. ಭೂಮಿಯ ಸಂರಚನೆಯೂ ಅಷ್ಟೇ ರೋಚಕವಾಗಿದೆ. ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಜೀವಿಗಳು ವಾಸಿಸಲು ಯೋಗ್ಯವಾದ ಏಕೈಕ ಸ್ಥಳವಾಗಿದೆ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗುತ್ತಿದೆ.
ಹೀಗೆ ಜೀವಸಂಕುಲವನ್ನ ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ವಸುಂಧರೆಯ ಒಡಲಲ್ಲಿ ಇಂದಿಗೂ ಅದೆಷ್ಟೋ ಅಚ್ಚರಿಗಳು ಅಡಗಿವೆ. ಇಂದಿಗೂ ನಮಗೆ ಜಗತ್ತಿನ ಕೆಲ ಮೂಲೆಗಳಲ್ಲಿ ಏನಾದರೊಂದು ಭೂಮಿಯಿಂದ ಸಿಗುವ ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಭಾರತ ದೇಶವೂ ಸಹ ಐತಿಹಾಸಿಕವಾಗಿ ಸಾಕಷ್ಟು ಸಿರಿವಂತವಾದ ದೇಶವಾಗಿದೆ. ಗತ ವೈಭವದ ಅದೆಷ್ಟೋ ನಗ ನಾಣ್ಯಗಳು, ಚಿನ್ನ, ಮುತ್ತು ರತ್ನಗಳಂತಹ ಸಂಪತ್ತು ಈ ಹಿಂದೆ ಹಲವು ಬಾರಿ ಭೂಮಿಯಿಂದ ದೊರಕಿವೆ ಎಂಬುದು ಸತ್ಯವೇ ಆಗಿದೆ. ಈಗಲೂ ನಮಗೆ ಅಲ್ಲಲ್ಲಿ ಇಂತಹ ಸಂಪತ್ತು ದೊರಕಿದ ಉದಾಹರಣೆಗಳು ಸಿಗುತ್ತಿರುತ್ತವೆ. ಇತ್ತೀಚಿಗಷ್ಟೇ ಮಧ್ಯ ಪ್ರದೇಶದಲ್ಲೂ ಸಹ ಅಂತಹ ಒಂದು ಘಟನೆ ನಡೆದಿದೆ. ಅಷ್ಟಕ್ಕೂ ಈ ಸಂಪತ್ತು ದೊರಕಿರುವುದು ಒಬ್ಬ ದಿನಗೂಲಿ ಕಾರ್ಮಿಕನಿಗೆ.
ಇದನ್ನೂ ಓದಿ : ಕಳುವಾಗಿದ್ದ ಕ್ರಿಕೆಟ್ ಕಿಟ್‌ಗಳು ಕೊನೆಗೂ ಪತ್ತೆ – ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರಾಳ..!
ಹೌದು, ಮಧ್ಯಪ್ರದೇಶದ ದಾಮೋ ಎಂಬ ಗ್ರಾಮದಲ್ಲಿ ವಾಸಿಸುವ ಹಲ್ಲೆ ಅಹಿರ್ವಾರ್ ಎಂಬ ಯುವ ದಿನಗೂಲಿ ಕಾರ್ಮಿಕ. ಹಳೆಯ ಮನೆಯೊಂದರ ಕಂಬದ ಬಳಿ ಭೂಮಿ ಅಗೆಯುತ್ತಿದ್ದ. ಈ ಸಂದರ್ಭದಲ್ಲಿ ಅವನಿಗೆ 136 ವರ್ಷಗಳಷ್ಟು ಪುರಾತನವೆನ್ನಲಾದ 240 ಬೆಳ್ಳಿ ನಾಣ್ಯಗಳು ಅಹಿರ್ವಾರನಿಗೆ ದೊರಕಿದೆ. ಈ ಅನಿರೀಕ್ಷಿತ ಸಂಪತ್ತು ಕಂಡ ಅಹಿರ್ವಾರನಿಗೆ ಆಸೆ ತಡೆಯಲಾರದೆ ಇದನ್ನು ಪಡೆಯಬೇಕೆಂಬ ಆಸೆ ಉಂಟಾಗಿ ಅವನು ಅದನ್ನು ತನ್ನ ಮನೆಗೆ ಒಯ್ದಿದ್ದಾನೆ. ಹೀಗೆ ಸಂಪತ್ತನ್ನು ಮನೆಗೆ ತಂದ ಅಹಿರ್ವಾರನಿಗೆ ಮಾತ್ರ ನೆಮ್ಮದಿ ಹೊರಟು ಹೋಗಿದೆ.
ಅವನ ಮನದಲ್ಲಿ ಇದು ನನ್ನ ಸ್ವತ್ತಲ್ಲ, ಸರ್ಕಾರಕ್ಕೆ ಸೇರಬೇಕಾದುದು ಎಂಬ ಪ್ರಜ್ಞೆ ಎಷ್ಟು ತೀವ್ರವಾಗಿದೆ ಎಂದರೆ ಅವನನ್ನು ಆ ರಾತ್ರಿ ನಿದ್ರೆ ಮಾಡಲು ಸಾಧ್ಯವೇ ಆಗಿಲ್ಲ. ಕೊನೆಗೆ ಇದು ತನ್ನದಲ್ಲ ಎಂದು ನಿರ್ಧರಿಸಿ ಮರುದಿನ ಬೆಳಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಷಯ ಹೇಳಿ ಸಂಪತ್ತನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ.
ಸದ್ಯ ಸಂಪತ್ತು ಸಿಕ್ಕ ಭೂಮಿಯಲ್ಲಿ ಅಗೆಯುವ ಕೆಲಸವನ್ನು ಸ್ಥಗಿತಗೊಳಿಸಲಾಗಿದ್ದು ಪೊಲೀಸರು ಪುರಾತತ್ವಶಾಸ್ತ್ರ ಇಲಾಖೆ ಹಾಗೂ ಖನಿಜ ಇಲಾಖೆಗಳನ್ನು ಸಂಪರ್ಕಿಸಿದ್ದು ಈ ಜಾಗದಲ್ಲಿ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. ಸದ್ಯ ದೊರಕಿರುವ ನಾಣ್ಯಗಳ ಮೇಲೆ ಇಸವಿ 1887 ಎಂದು ಕೆತ್ತಲಾಗಿದ್ದು ಪ್ರಸ್ತುತ 240 ಬೆಳ್ಳಿ ನಾಣ್ಯಗಳ ಮಾರುಕಟ್ಟೆ ಮೌಲ್ಯ 1.96 ಲಕ್ಷ ರೂಪಾಯಿಗಳಾಗಿವೆ. ಇನ್ನು ಈ ನಾಣ್ಯಗಳು ದೊರಕಿರುವ ಮನೆಯು ಸಾಕಷ್ಟು ಪುರಾತನವಾಗಿದ್ದು, ಈ ಸ್ಥಳವನ್ನು ಸಂಪೂರ್ಣವಾಗಿ ಅಗೆದರೆ ಇನ್ನಷ್ಟು ಏನಾದರೂ ಸಿಗಬಹುದೆಂಬ ಅನುಮಾನ ಮನೆಯ ಸುತ್ತಮುತ್ತಲಿನ ಜನರಲ್ಲಿ ಮೂಡಿದೆ.