ಕುಲದೇವತೆ ಅಂತಾ ರೈತರು ಪೂಜಿಸಿದ್ದು ಕಲ್ಲಲ್ಲ.. ಡೈನೋಸಾರ್ ಮೊಟ್ಟೆ!

ಕುಲದೇವತೆ ಅಂತಾ ರೈತರು ಪೂಜಿಸಿದ್ದು ಕಲ್ಲಲ್ಲ.. ಡೈನೋಸಾರ್ ಮೊಟ್ಟೆ!

66 ಮಿಲಿಯನ್ ವರ್ಷಗಳ ಹಿಂದೆ ಡೈನೋಸಾರ್‌ಗಳ ಭೂಮಿ ಮೇಲೆ ಇತ್ತು ಅಂತಾ ವಿಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ. ಡೈನೋಸಾರ್‌ಗಳು ಭೂಮಿ ಮೇಲೆ ಬದುಕಿದ್ದವು ಅಂತಾ ಹೇಳುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಡೈನೋಸಾರ್‌ ಪಳೆಯುಳೆಕೆಗಳು, ಮೊಟ್ಟೆಗಳು ಆಗಾಗ ಪತ್ತೆಯಾಗುತ್ತಲೇ ಇರುತ್ತವೆ. ಆದ್ರೆ ಭಾರತದಲ್ಲಿ ಈ ಸುದ್ದಿ ಕೇಳಿ ಬರುವುದು ಬಲು ಅಪರೂಪ. ಇದೀಗ ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕುಲದೇವರು ಅಂತಾ ಕಲ್ಲೊಂದನ್ನು ಪೂಜೆ ಮಾಡುತ್ತಿದ್ದ ಕುಟುಂಬಕ್ಕೆ ಶಾಕ್‌ ಎದುರಾಗಿದೆ. ಅವರು ಪೂಜೆ ಮಾಡಿರುವುದು ಕಲ್ಲಿಗಲ್ಲ, ಡೈನೋಸಾರ್‌ ಮೊಟ್ಟೆಗೆ!

ಹೌದು, ಅಚ್ಚರಿಯಾದ್ರೂ ಸತ್ಯ. ಮಧ್ಯಪ್ರದೇಶದ ಸಣ್ಣ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲೊಂದು ಮನೆಯವರು ಅಂಗೈ ಅಗಲದಷ್ಟು ದೊಡ್ಡ ಸಣ್ಣ ಕಲ್ಲುಗಳನ್ನು ದೇವರ ಮೂರ್ತಿ ಅಂತಾ ಹಲವು ವರ್ಷಗಳಿಂದ ಪೂಜೆ ಮಾಡುತ್ತಾ ಬಂದಿದ್ದಾರೆ. ಆದ್ರೆ ಆ ಕಲ್ಲುಗಳೀಗ ಡೈನೋಸಾರ್ ಮೊಟ್ಟೆಗಳೆಂದು ತಿಳಿದು ಕುಟುಂಬಸ್ಥರು ದಂಗಾಗಿದ್ದಾರೆ. ಲಕ್ನೋದ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ಸೇವನೆ – ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಬಾಲಕಿ ಸಾವು

ಆ ಕುಟುಂಬ ಈ ಮೊಟ್ಟೆಗಳನ್ನು ‘ಕಾಕರ್ ಭೈರವ್’ ಎಂದು ಕರೆಯುತ್ತಿದ್ದರು. ಕಾಕರ್ ಎಂದರೆ ಭೂಮಿ ಮತ್ತು ಭೈರವ್ ಎಂದರೆ ಭಗವಂತ ಎಂಬರ್ಥ ಕೊಡುತ್ತಿತ್ತು. ಹೀಗಾಗಿ ಆ ಕುಟುಂಬ ಹಲವು ವರ್ಷಗಳಿಂದ ಈ ಕಲ್ಲುಗಳಿಗೆ ನಿತ್ಯ ಪೂಜೆ ಮಾಡಿ ‘ಕಾಕರ್ ಭೈರವ್’ ಜಾನುವಾರುಗಳು ಮತ್ತು ಕೃಷಿ ಭೂಮಿಯನ್ನು ಕಾಯುತ್ತಿದೆ ಎಂದು ನಂಬಿಕೆ ಹೊಂದಿದ್ದರು. ಆದರೆ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಂಡ ಈ ಕಲ್ಲುಗಳ ಪರೀಕ್ಷೆಗೊಳಪಡಿಸಿದ್ದಾಗ ಇದು ಡೈನೋಸಾರ್‌ನ ಮೊಟ್ಟೆಗಳು ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದ ಕುಟುಂಬ ಹಾಗೂ ಇಡೀ ಗ್ರಾಮ ನಿಬ್ಬೆರಗಾಗಿದೆ.

ತಜ್ಞರು, ತಮ್ಮ ಸಂಶೋಧನೆಯ ನಂತರ, ಪಳೆಯುಳಿಕೆಗೊಂಡ ಮೊಟ್ಟೆಗಳು ಟೈಟಾನೊಸಾರಸ್ ಜಾತಿಗೆ ಸೇರಿದ ಡೈನೋಸಾರ್‌ಗಳದ್ದು ಎಂದು ತೀರ್ಮಾನಿಸಿದರು. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಡ್ಲ್ಯಾ ಗ್ರಾಮದಲ್ಲಿ ಭೂಮಿ ಅಗೆಯುವಾಗ ಈ ‘ಕಲ್ಲಿನ ಚೆಂಡುಗಳು’ ಕಣ್ಣಿಗೆ ಬಿದ್ದಿದ್ದವು. ವೆಸ್ಟಾ ಮಂಡಲೋಯ್ ಎಂಬುವರು ವರ್ಷಗಳ ಹಿಂದೆ ಅವುಗಳನ್ನು ‘ಕುಲ ದೇವರು’ ಎಂದು ಪೂಜಿಸುತ್ತಾ ಬಂದಿದ್ದರಂತೆ.  ಮಣ್ಣಿನೊಳಗೆ ಮೊಟ್ಟೆಗಳು ವರ್ಷಗಳಿದ್ದ ಕಾರಣ ಕಲ್ಲುಗಳಂತೆ ರೂಪ ತಳೆದಿದ್ದವು. ಜೊತೆಗೆ ಅಷ್ಟೇ ಗಟ್ಟಿಯಾಗಿದ್ದವು. ಈ ಕುಟುಂಬ ದೇವರು ಎಂದು ಸಂಗ್ರಹಿಸಿ ಜೋಪಾನ ಮಾಡಿದ್ದರಿಂದ ಮೊಟ್ಟೆಗಳಿಗೆ ಹಾನಿಯಾಗದ ಉಳಿದುಕೊಂಡಿದ್ದವು.

ಏನಿದು ಟೈಟಾನೋಸಾರ್ಮೊಟ್ಟೆ?

ಟೈಟಾನೋಸಾರ್ ಮೊದಲ ಭಾರತೀಯ ಡೈನೋಸಾರ್ ಆಗಿದೆ. ಈ ಡೈನೋಸಾರ್ ಅನ್ನು 1877 ರಲ್ಲಿ ಮೊದಲ ಬಾರಿಗೆ ದಾಖಲಿಸಲಾಯಿತು ಮತ್ತು ಅದರ ಹೆಸರು ‘ಟೈಟಾನಿಕ್ ಲಿಜರ್ಡ್‌’ ಎಂಬ ಜಾತಿಗೆ ಸೇರಿಸಲಾಗಿತ್ತು. ಟೈಟಾನೋಸಾರ್ ಭೂಮಿಯಲ್ಲಿದ್ದ ಅತೀದೊಡ್ಡ ಡೈನೋಸಾರ್‌ಗಳಲ್ಲಿ ಒಂದಾಗಿದೆ. ಅಂದಾಜಿನ ಪ್ರಕಾರ, ಕ್ರಿಟೇಶಿಯಸ್ ಅವಧಿಯಲ್ಲಿ, ಸುಮಾರು 70 ಮಿಲಿಯನ್ ವರ್ಷಗಳ ಹಿಂದೆ ಈ ಪ್ರಭೇದಗಳು ಜೀವಿಸಿದ್ದವು ಎನ್ನಲಾಗಿದೆ.

ಲಿಜರ್ಡ್‌ನ 250 ಕ್ಕೂ ಹೆಚ್ಚು ಮೊಟ್ಟೆಗಳು ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಜನವರಿಯಲ್ಲಿ, ದೆಹಲಿ ವಿಶ್ವವಿದ್ಯಾನಿಲಯ (DU) ಮತ್ತು ಭೋಪಾಲ್‌ನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER) ಯ ಸಂಶೋಧಕರ ತಂಡವು ನಡೆಸಿದ ಅಧ್ಯಯನವನ್ನು ಪೀರ್-ರಿವ್ಯೂಡ್ ವೈಜ್ಞಾನಿಕ ಜರ್ನಲ್ PLOS One ನಲ್ಲಿ ಪ್ರಕಟಿಸಲಾಗಿದೆ. ಅವರು ಟೈಟಾನೋಸಾರ್‌ಗಳಿಗೆ ಸೇರಿದ 256 ಪಳೆಯುಳಿಕೆ ಮೊಟ್ಟೆಗಳನ್ನು ಹೊಂದಿರುವ 92 ಗೂಡುಗಳ ಸ್ಥಳವನ್ನು ಬಹಿರಂಗಪಡಿಸಿದ್ದಾರೆ.

Shwetha M