ಬಿಜೆಪಿ ಶಾಸಕನ ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರು ತನಿಖಾಧಿಕಾರಿಗಳ ಬದಲಾವಣೆ – ಅನುಮಾನ ಮೂಡಿದ್ದೇಕೆ..?
ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ 40 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾರೆ. ಆದ್ರೆ 6 ದಿನಗಳಿಂದ ಮಾಡಾಳ್ ವಿರೂಪಾಕ್ಷಪ್ಪ ಪತ್ತೆಯಿಲ್ಲ. ಈ ನಡುವೆ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
ಲಂಚ ಪ್ರಕರಣದಲ್ಲಿ A1 ಆಗಿರುವ KSDL ಮಾಜಿ ಅಧ್ಯಕ್ಷ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪ (Madal Virupakshappa) ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಈ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಕೇವಲ 4 ದಿನಕ್ಕೆ ಪ್ರಕರಣದ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ : ವಿರೂಪಾಕ್ಷಪ್ಪ ಪತ್ತೆಗೆ ಅಧಿಕಾರಿಗಳ ತಲಾಶ್ – ಇಂದು ಅಥವಾ ನಾಳೆ ಆಪ್ತನ ಬಂಧನವಾಗುತ್ತೆಂದ ಬಿಎಸ್ವೈ!
ಪ್ರಕರಣದ ತನಿಖಾಧಿಕಾರಿಗಳಾಗಿದ್ದ DySP ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ ಕುಮಾರಸ್ವಾಮಿಯವರನ್ನು ಬದಲಾವಣೆ ಮಾಡಲಾಗಿದೆ. ಇವರ ಬದಲಿಗೆ DySP ಆಂಥೋನಿ ಜಾನ್, ಇನ್ಸ್ಪೆಕ್ಟರ್ ಬಾಲಾಜಿ ಬಾಬು ಅವರನ್ನು ನೇಮಕ ಮಾಡಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿ ಬದಲಾವಣೆ ಸಾಕಷ್ಟು ಅನುಮಾನ ಮೂಡಿಸಿದೆ. ಮಾಡಾಳ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಎಲ್ಲಿದ್ದಾರೆ ಎನ್ನುವ ಸುಳಿವೇ ಸಿಗುತ್ತಿಲ್ಲ. ಶಾಸಕ ನಾಪತ್ತೆಯಾಗಿ 6 ದಿನ ಕಳೆದಿದೆ ಆದ್ರೂ ಪೊಲೀಸರ ಕೈಗೆ ಸಿಗುತ್ತಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ರು. ಆದ್ರೆ ಮಾಡಾಳ್ ಮಾತ್ರ ನೋಟಿಸ್‌ಗೆ ಕೇರ್ ಮಾಡುತ್ತಿಲ್ಲ. ವಿಚಾರಣೆಗೂ ಹಾಜರಾಗಿಲ್ಲ.