ಅಂದು ಜಡ್ಡು.. ಇಂದು ರಿತು.. CSK ಕ್ಯಾಪ್ಟನ್ಸಿ ಬದಲಿಸಿದ್ದೇಕೆ? – ನಿವೃತ್ತಿಗೆ ಸಿದ್ಧರಾದ್ರಾ ಧೋನಿ?

ಅಂದು ಜಡ್ಡು.. ಇಂದು ರಿತು.. CSK ಕ್ಯಾಪ್ಟನ್ಸಿ ಬದಲಿಸಿದ್ದೇಕೆ? – ನಿವೃತ್ತಿಗೆ ಸಿದ್ಧರಾದ್ರಾ ಧೋನಿ?

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಕಿಕ್​ಸ್ಟಾರ್ಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಮಾರ್ಚ್ 22ರ ಶುಕ್ರವಾರ ಉದ್ಘಾಟನಾ ಪಂದ್ಯ ನಡೆಯಲಿದೆ. ಫಸ್ಟ್ ಮ್ಯಾಚ್​ನಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಹೈವೋಲ್ಟೇಜ್ ಮ್ಯಾಚ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವಾಗ್ಲೇ ಚೆನ್ನೈ ಟೀಮ್​ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಸ್ಥಾನದಿಂದ ಎಂ.ಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಋತುರಾಜ್‌ ಗಾಯಕ್ವಾಡ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಅಷ್ಟಕ್ಕೂ ಧೋನಿಯೇ ಕ್ಯಾಪ್ಟನ್ಸಿಯಿಂದ ಕೆಳಗಿಳಿದ್ರಾ..? ಅಥವಾ ಇಳಿಸಿದ್ರಾ..? ಋತುರಾಜ್ ಆಯ್ಕೆ ಹಿಂದಿನ ಕಾರಣಗಳೇನು..? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅರೆಸ್ಟ್‌ – ಜೈಲಿನಿಂದಲೇ ಅಧಿಕಾರ ನಡೆಸಲು ನಿರ್ಧಾರ!

ಐಪಿಎಲ್ ಸೀಸನ್ 17 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ್ಲೇ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ.  ರುತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಾಗಿ ಆಡ್ತಿದ್ದಾರೆ. ಹಾಗೇ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಋತುವಿನಲ್ಲಿ ಇವರ ನಾಯಕತ್ವದಲ್ಲಿ ಆಡುವುದನ್ನು ತಂಡ ಎದುರು ನೋಡುತ್ತಿದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟಕ್ಕೂ ಧೋನಿ ಚೆನ್ನೈ ಟೀಂ ಕ್ಯಾಪ್ಸನ್ಸಿಯಿಂದ ಕೆಳಗೆ ಇಳಿಯುತ್ತಿರೋದು ಇದೇ ಮೊದಲೇನಲ್ಲ.

2ನೇ ಸಲ ಕ್ಯಾಪ್ಟನ್ಸಿ ಹಸ್ತಾಂತರ!  

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಎಂಎಸ್‌ ಧೋನಿ ಕೆಳಗಿಳಿಯುತ್ತಿರುವುದು ಇದು 2ನೇ ಬಾರಿ. 2022ರಲ್ಲಿ ರವೀಂದ್ರ ಜಡೇಜಾಗೆ ಚೆನ್ನೈ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಬ್ಯಾಕ್​ ಟು ಬ್ಯಾಕ್​ ಸೋಲನ್ನಪ್ಪಿತ್ತು. ಸೋಲಿನ ನಂತರ ಪಂದ್ಯಾವಳಿಯ ಮಧ್ಯದಲ್ಲೇ ಜಡ್ಡು ನಾಯಕತ್ವದಿಂದ ಕೆಳಗಿಳಿದರು. ಬಳಿಕ ಮತ್ತೆ ಧೋನಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಎಂಎಸ್‌ ಧೋನಿ ಮತ್ತೊಮ್ಮೆ ತಂಡದ ನಾಯಕತ್ವವನ್ನು ಹಸ್ತಾಂತರ ಮಾಡಿದ್ದಾರೆ. ನೂತನ ನಾಯಕನಾಗಿ ಬಲಗೈ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಆಯ್ಕೆಯಾಗಿದ್ದಾರೆ. 2019ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರು ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಆಗಮಿಸಿದ್ದರು. ತಾವು ಆಡಿದ ಮೊದಲ ಆವೃತ್ತಿಯಲ್ಲಿಯೇ ಗಾಯಕ್ವಾಡ್‌ ಎಲ್ಲರ ಗಮನ ಸೆಳೆದಿದ್ದರು. ಅಂದಿನಿಂದ ಅವರು ಇಲ್ಲಿಯವರೆಗೂ ಅವರು ಸಿಎಸ್‌ಕೆ ತಂಡದ ಕೀ ಬ್ಯಾಟ್ಸ್‌ಮನ್‌ ಆಗಿದ್ದಾರೆ. 2023ರ ಐಪಿಎಲ್‌ ಟೂರ್ನಿಯಲ್ಲಿ ಗಾಯಕ್ವಾಡ್‌ ಆಡಿದ್ದ 16 ಪಂದ್ಯಗಳಿಂದ 590 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಸಿಎಸ್‌ಕೆ ಐದನೇ ಬಾರಿ ಚಾಂಪಿಯನ್‌ ಆಗಿತ್ತು.

ಚೆನ್ನೈ ತನ್ನ ಟೀಂನ ಕ್ಯಾಪ್ಟನ್ಸಿ ಬದಲಾವಣೆ ಹಿಂಟ್​ನ್ನು ಮೊದ್ಲೇ ಕೊಟ್ಟಿತ್ತು. ಪ್ರತಿ ಸೀಸನ್‌ನಂತೆ, ಐಪಿಎಲ್ ಪ್ರಾರಂಭವಾಗುವ ಮೊದಲು, ಎಲ್ಲಾ ತಂಡಗಳ ನಾಯಕರು ಟ್ರೋಫಿಯೊಂದಿಗೆ ಫೋಟೋಶೂಟ್ ಮಾಡುತ್ತಾರೆ. ಈ ಸೀಸನ್​ನಲ್ಲಿಯೂ ಫೋಟೋ ಶೂಟ್ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲಾ 10 ತಂಡಗಳ ನಾಯಕರು ಫೋಟೋಶೂಟ್‌ಗೆ ಬಂದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ಬದಲಿಗೆ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಆವೃತ್ತಿಯಿಂದ ಗಾಯಕ್ವಾಡ್ ತಂಡದ ನಾಯಕರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಅಲ್ಲದೆ ಈ ವಿಚಾರವನ್ನು ಸಿಎಸ್​ಕೆ ಫ್ರಾಂಚೈಸಿ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮಾಹಿತಿ ನೀಡಿದೆ. ಆದ್ರಿಲ್ಲಿ ಧೋನಿಯವ್ರನ್ನ ಕ್ಯಾಪ್ಟನ್ಸಿಯಿಂದ ಕೆಳಗೆ ಇಳಿಸಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದಕ್ಕೆ ಕಾರಣವೂ ಇದೆ.

ಚೆನ್ನೈ ಆಸ್ತಿ ಧೋನಿ

ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಹುದೊಡ್ಡ ಆಸ್ತಿ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರಂತೆಯೇ ಎಂಎಸ್‌ ಧೋನಿ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಧೋನಿ ನೇತೃತ್ವದ ಸಿಎಸ್‌ಕೆ ಕಳೆದ ವರ್ಷ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಮುಂಬೈ ಇಂ

ಡಿಯನ್ಸ್‌ನೊಂದಿಗೆ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಪಟ್ಟಿಯಲ್ಲಿ ಸಮಬಲ ಸಾಧಿಸಿದೆ. ಹಿಂದಿನ ಸೀಸನ್​ಗಳಲ್ಲೆಲ್ಲಾ ಧೋನಿ ಕ್ಯಾಪ್ಟನ್ಸಿಯಲ್ಲಿ ಚೆನ್ನೈ ತಂಡ ಗೆಲುವಿನ ಫೇವರೆಟ್ ಟೀಂ ಎನ್ನಿಸಿಕೊಂಡಿದೆ. ಆದ್ರೆ ಕಳೆದ ಎರಡ್ಮೂರು ವರ್ಷಗಳಿಂದ ಐಪಿಎಲ್ ಶುರುವಾದಾಗಲೆಲ್ಲಾ ಧೋನಿ ವಿದಾಯ ಪದೇ ಪದೆ ಸುದ್ದಿ ಮಾಡುತ್ತಲೇ ಇರುತ್ತದೆ. 2023ರ ಐಪಿಎಲ್‌ ಬಳಿಕ ಎಂಎಸ್‌ ಧೋನಿ ವಿದಾಯ ಹೇಳಬಹುದೆಂದು ನಿರೀಕ್ಷಿಸಲಾಗಿತ್ತು. ಮೊಣಕಾಲು ಶಸ್ತ್ರ ಚಿಕಿತ್ಸೆಯ ಬಳಿಕ ಎಂಎಸ್‌ ಧೋನಿ ಸಂಪೂರ್ಣ ಫಿಟ್‌ ಆಗಿದ್ದು, ಇದೀಗ ಮತ್ತೊಂದು ಆವೃತ್ತಿಯಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. 2024ರ ಐಪಿಎಲ್ ಬಳಿಕ ಎಂಎಸ್‌ ಧೋನಿ ವಿದಾಯ ಹೇಳುವ ಸಾಧ್ಯತೆ ಜಾಸ್ತಿ ಇದೆ. ಹಾಗಾಗಿ ಎಂಎಸ್‌ ಧೋನಿ ಬಳಿಕ ಸಿಎಸ್‌ಕೆ ತಂಡಕ್ಕೆ ಮುಂದಿನ ನಾಯಕನನ್ನ ಈಗಿನಿಂದಲೇ ರೆಡಿ ಮಾಡಲು ಸಿಎಸ್​ಕೆ ಋತುರಾಜ್​ಗೆ ನಾಯಕನ ಪಟ್ಟ ಕಟ್ಟಿದೆ ಎನ್ನಲಾಗಿದೆ.

2008ರಿಂದ ಚೆನ್ನೈ ತಂಡದ ನಾಯಕನಾಗಿದ್ದ ಧೋನಿ ಐಪಿಎಲ್​ನಲ್ಲಿ 210ಕ್ಕೈ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 125ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದರೆ, 80ಕ್ಕೂ ಹೆಚ್ಚು ಪಂದ್ಯಗಳನ್ನು ಸೋತಿದ್ದಾರೆ. ಇನ್ನು ಚೆನ್ನೈ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಹೆಗ್ಗಳಿಕೆ ಧೋನಿ ಹೆಸರಿನಲ್ಲಿದೆ. ಒಟ್ನಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿರುವ ಹೊತ್ತಲ್ಲೇ ಸಿಎಸ್​ಕೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಆದ್ರೆ ಧೋನಿಯನ್ನ ಕ್ಯಾಪ್ಸನ್ಸಿಯಿಂದ ಇಳಿಸಿದ್ದು ಬಹುತೇಕ ಅಭಿಮಾನಿಗಳಿಗೆ ಸಿರಾಸೆ ಮೂಡಿಸಿದೆ. ಧೋನಿಗೆ ತಮಿಳುನಾಡಿನ ಹೊರತಾಗಿಯೂ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಧೋನಿಗಾಗಿಯೇ ಸಿಎಸ್​ಕೆಯನ್ನ ಬೆಂಬಲಿಸೋ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಇಂಥವ್ರಿಗೆಲ್ಲಾ ಈಗ ನಾಯಕತ್ವ ಬದಲಾವಣೆ ಬೇಸರ ಮೂಡಿಸಿದೆ. ಅದೆಲ್ಲಾ ಏನೇ ಇದ್ರೂ ನೂತನ ಕ್ಯಾಪ್ಟನ್ ಆಗಿರೋ ಋತುರಾಜ್ ಹೇಗೆ ಟೀಂ ಲೀಡ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

Shwetha M