ಚಿನ್ನಸ್ವಾಮಿ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ – ಬೆಂಗಳೂರಿನ ಮೈದಾನದಲ್ಲಿ ಅದೆಷ್ಟು ದಾಖಲೆಗಳು?

ಚಿನ್ನಸ್ವಾಮಿ ಕ್ರೀಡಾಂಗಣ. ನೂರಾರು ಯುವಮನಸುಗಳ ಕನಸುಗಳಿಗೆಳಿಗೆ ನೀರೆರೆದು ಪೋಷಿಸುತ್ತಿರೋ ಪವಿತ್ರನೆಲ. ಕ್ರಿಕೆಟ್ನಲ್ಲಿ ಬೆಳೀಬೇಕು, ಮೈದಾನದಲ್ಲಿ ಮೈಲುಗಲ್ಲುಗಳನ್ನ ಸ್ಥಾಪಿಸಬೇಕು, ವಿಶ್ವಕ್ರಿಕೆಟ್ನಲ್ಲಿ ವಿಜೃಂಭಿಸಬೇಕು ಎನ್ನುವಂಥ ಪ್ರತಿಭೆಗಳಿಗೆ ವೇದಿಕೆಯಾಗಿ ನಿಂತಿದೆ. ಈ ಮೈದಾನದಲ್ಲಿ ಆಡಿ ಬೆಳೆದ ಅದೆಷ್ಟೋ ಪ್ರತಿಭೆಗಳು ಟೀಂ ಇಂಡಿಯಾ ಪರ ಚರಿತ್ರೆಗಳನ್ನ ಸೃಷ್ಟಿಸಿದ್ದಾರೆ. ವಿಶ್ವದಲ್ಲೇ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಳ ಹಲವು ಅವಿಸ್ಮರಣೀಯ ಕ್ಷಣಗಳಿಗೂ ಸಾಕ್ಷಿಯಾಗಿದೆ. ಅಷ್ಟಕ್ಕೂ ಈ ಸ್ಟೇಡಿಯಂ ಸ್ಥಾಪನೆಯಾಗಿದ್ದು ಯಾವಾಗ? ಚಿನ್ನಸ್ವಾಮಿ ಅನ್ನೋ ಹೆಸ್ರು ಹೇಗೆ ಬಂತು ಅನ್ನೋದೇ ವಿಶೇಷವಾಗಿದೆ.
ಇದನ್ನೂ ಓದಿ : RCBಗೆ ಬ್ಯಾಕ್ ಟು ಬ್ಯಾಕ್ ಮ್ಯಾಚ್ – 3 ದಿನ.. 2 ಪಂದ್ಯ.. ಏನಿದು ಲೆಕ್ಕಾಚಾರ?
ಈ ಮೈದಾನಕ್ಕೆ ಚಿನ್ನಸ್ವಾಮಿ ಎಂದು ಹೆಸರು ಬಂದಿದ್ದೇ ವಿಶೇಷವಾಗಿದೆ. ಚಿನ್ನಸ್ವಾಮಿಯವರ ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ ಮುದಳಿಯಾರ್. 1900ರಲ್ಲಿ ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲ. ವೃತ್ತಿಪರ ಕ್ರಿಕೆಟಿಗನಲ್ಲದಿದ್ದರೂ ಕರ್ನಾಟಕದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರಮುಖ ಶಕ್ತಿಯೇ ಚಿನ್ನಸ್ವಾಮಿ. ರಾಜ್ಯ ಕ್ರಿಕೆಟ್ ಸಂಸ್ಥೆಗೆ 1953ರಿಂದ 1978ರ ವರೆಗೆ ಕಾರ್ಯದರ್ಶಿ, 1978ರಿಂದ 1990ರ ವರೆಗೆ ಅಧ್ಯಕ್ಷರಾಗಿದ್ದ ಅವರು, ಬಿಸಿಸಿಐಗೆ 1960ರಿಂದ 1965ರ ವರೆಗೆ ಕಾರ್ಯದರ್ಶಿ, 1977ರಿಂದ 1980ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದಿಂದ ಐಸಿಸಿಗೆ 3 ಬಾರಿ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದಿಂದ ಕ್ರೀಡಾಂಗಣಕ್ಕೆ ಜಾಗ ಮೀಸಲಿಡುವಂತೆ ಮಾಡಿ, ನಿರ್ಮಾಣಕ್ಕೂ ಶ್ರಮ ವಹಿಸಿದ ಚಿನ್ನಸ್ವಾಮಿ ಹೆಸರನ್ನೇ ಬಳಿಕ ಕ್ರೀಡಾಂಗಣಕ್ಕೆ ಇಡಲಾಯಿತು. ಚಿನ್ನಸ್ವಾಮಿ ಅವರು 1991ರಲ್ಲಿ ನಿಧನರಾದರು.
ಬೆಂಗಳೂರಿನಲ್ಲಿ ಕ್ರಿಕೆಟ್ ಮೈದಾನ ಸ್ಥಾಪನೆಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 2 ದಶಕಗಳ ಕಾಲ ಶ್ರಮ ಪಟ್ಟಿದೆ. 1953ರಲ್ಲಿ ಕೆಎಸ್‌ಸಿಎ ಅಧ್ಯಕ್ಷರಾಗಿ ಶ್ರೀನಿವಾಸನ್, ಕಾರ್ಯದರ್ಶಿಯಾಗಿ ಚಿನ್ನಸ್ವಾಮಿ ನೇಮಕಗೊಂಡ ಬಳಿಕ ಇಬ್ಬರೂ ಕ್ರೀಡಾಂಗಣಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆದಾಡಿದ್ರು. ಮೊದಲು ಶೇಷಾದ್ರಿಪುರಂ, ಬಳಿಕ ಶುಭಾಷ್‌ನಗರದಲ್ಲಿ ಕ್ರೀಡಾಂಗಣಕ್ಕೆ ಸರ್ಕಾರ ಜಾಗ ನೀಡಿತ್ತು. ಆದ್ರೆ ಚಿನ್ನಸ್ವಾಮಿ ಅವರು ಅದನ್ನ ತಿರಸ್ಕರಿಸಿ, ಎಂಜಿ ರೋಡ್ ಹಾಗೂ ಕಬ್ಬನ್ ಪಾರ್ಕ್ ಬಳಿಯೇ ಜಾಗ ಬೇಕೆಂದು ಪಟ್ಟು ಹಿಡಿದಿದ್ರು. ಆದರೆ ಬೆಂಗಳೂರು ಸಿಟಿ ಕಾರ್ಪೊರೇಶನ್‌ಗೆ ಒಳಪಟ್ಟಿದ್ದ ಆ ಜಾಗದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು ಕ್ಯಾನ್ಸರ್ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದ್ದರು. ಪಟ್ಟುಬಿಡದ ಚಿನ್ನಸ್ವಾಮಿ, ಶ್ರೀನಿವಾಸನ್ ಅವರು ದೆಹಲಿಗೂ ತೆರಳಿ, ಜಾಗವನ್ನು ಕ್ರೀಡಾಂಗಣಕ್ಕೆಂದು 99 ವರ್ಷಕ್ಕೆ ಲೀಸ್‌ಗೆ ಪಡೆಯಲು ಯಶಸ್ವಿಯಾಗಿದ್ದರು. ಇನ್ನು, ಕ್ರೀಡಾಂಗಣ, ಪಿಚ್ ನಿರ್ಮಾಣ ಹೊಣೆಯನ್ನ ಕೃಷಿ ತಜ್ಞ, ಕ್ರಿಕೆಟಿಗರೂ ಆಗಿದ್ದ ಜಿ.ಕಸ್ತೂರಿ ರಂಗನ್ ಅವರಿಗೆ ನೀಡಲಾಗಿತ್ತು. ಗುಡ್ಡವಾಗಿದ್ದ ಜಾಗ ಸಮತಟ್ಟು ಮಾಡಿ ಕ್ರೀಡಾಂಗಣ ನಿರ್ಮಿಸಲು 100ಕ್ಕೂ ಹೆಚ್ಚು ಕಾರ್ಮಿಕರು ಸತತ 6 ತಿಂಗಳಗಳು ಕಾಲ ಕೆಲಸ ಮಾಡಿದ್ದರು. ಕಾರ್ಮಿಕರಿಗೆ ವೇತನ ನೀಡಲು ಕಷ್ಟವಾದಾಗ, ಕಸ್ತೂರಿ ರಂಗನ್ ಅವರೇ ತಮ್ಮ ಉಳಿತಾಯದ ಹಣದಲ್ಲಿ ವೇತನ ನೀಡಿದ್ದರು.
ಚಿನ್ನಸ್ವಾಮಿಯ ಅವಿಸ್ಮರಣೀಯ ಕ್ಷಣಗಳು!
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ಸ್
2021ರಲ್ಲಿ ವಿವಿಎಸ್ ಲಕ್ಷ್ಮಣ್ 281 ರನ್ ಗಳ ಇನ್ನಿಂಗ್ಸ್
1999ರಲ್ಲಿ ಪಾಕ್ ವಿರುದ್ಧ 10 ವಿಕೆಟ್ ಕಿತ್ತಿದ್ದ ಅನಿಲ್ ಕುಂಬ್ಳೆ
2013ರಲ್ಲಿ ಸಚಿನ್ ರ ಟೆಸ್ಟ್ ನಿವೃತ್ತಿಗೆ ಸಾಕ್ಷಿಯಾದ ಮೈದಾನ
2016ರಲ್ಲಿ ಪಂಜಾಬ್ ವಿರುದ್ಧ 113 ರನ್ ಗಳಿಸಿದ್ದ ಕೊಹ್ಲಿ
2013ರಲ್ಲಿ ಚಿನ್ನಸ್ವಾಮಿಯಲ್ಲಿ 175 ರನ್ ಸಿಡಿಸಿದ್ದ ಗೇಲ್
ಕೆಕೆಆರ್ ವಿರುದ್ಧ 49 ರನ್ ಗಳಿಗೆ ಆಲೌಟ್ ಆಗಿದ್ದ ಆರ್ ಸಿಬಿ
ಇನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣವು ದೇಶೀಯ ಪಂದ್ಯಗಳಿಗೆ ಕರ್ನಾಟಕ ಕ್ರಿಕೆಟ್ ತಂಡದ ಹೋಂ ಗ್ರೌಂಡ್. ಚಿನ್ನಸ್ವಾಮಿ ಸ್ಟೇಡಿಯಂನ ವಿಶೇಷತೆಗಳೆಂದರೆ, ಬೆಂಗಳೂರು ನಗರದ ಮಧ್ಯದಲ್ಲಿ ಸ್ಥಾಪಿತವಾಗಿರುವುದು. ಇಲ್ಲಿನ ಪಿಚ್ ಕೂಡ ಚಿಕ್ಕ ಬೌಂಡರಿಗಳೊಂದಿಗೆ ಬ್ಯಾಟ್ಸ್‌ಮನ್ ಫ್ರೆಂಡ್ಲಿಯಾಗಿದೆ. ಹಾಗೇ ಸ್ಪಿನ್ ಬೌಲರ್ಗಳಿಗೆ ನೆರವು ನೀಡುತ್ತೆ. ಇನ್ನು ಕ್ರಿಕೆಟ್ ಮ್ಯಾಚಸ್ ಅಷ್ಟೇ ಅಲ್ದೇ ಇತರೆ ಕ್ರೀಡಾಕೂಟಗಳು, ಸಂಗೀತ ಕಛೇರಿಗಳು ಮತ್ತು ಕಲ್ಚರಲ್ ಪ್ರೋಗ್ರಾಮ್ಸ್, ಇವೆಂಟ್ಸ್ಗಳನ್ನೂ ಇಲ್ಲಿ ಆಯೋಜನೆ ಮಾಡ್ಲಾಗುತ್ತೆ. ಮೀಡಿಯಾ ಬಾಕ್ಸ್, ವಿಐಪಿ ಆವರಣ, ಹಾಸ್ಪಿಟಾಲಿಟಿ ಸೂಟ್‌ಗಳು, ಪ್ರಾಕ್ಟೀಸ್ ನೆಟ್‌ಗಳು ಮತ್ತು ಆಟಗಾರರು ಮತ್ತು ಅಧಿಕಾರಿಗಳಿಗೆ ಆಧುನಿಕ ಸೌಕರ್ಯಗಳನ್ನು ಒಳಗೊಂಡಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.ಸೋಲಾರ್ ವ್ಯವಸ್ಥೆ, ಮಳೆ ಬಂದ ನಂತರ ನೀರು ಹೊರಹಾಕಲು ಮತ್ತು ವೇಗವಾಗಿ ಮೈದಾನ ಒಣಗಿಸಲು ಸಬ್-ಏರ್ ಸಿಸ್ಟಮ್, ಒಳಚರಂಡಿ ವ್ಯವಸ್ಥೆ, ಸ್ವಂತ ನೀರಿನ ವ್ಯವಸ್ಥೆ ಸೇರಿದಂತೆ ಸಾಕಷ್ಟು ಫೆಸಿಲಿಟೀಸ್ ಇಲ್ಲಿದೆ. ಸಬ್-ಏರ್ ವ್ಯವಸ್ಥೆಯಿಂದಾಗಿ ಮಳೆ ನಿಂತ 20 ನಿಮಿಷದಲ್ಲಿ ಆಟ ಆರಂಭಿಸಬಹುದು ಸುಮಾರು 40,000 ಕ್ರಿಕೆಟ್ ಪ್ರೇಕ್ಷಕರಿಗೆ ಆಸನ ಸಾಮರ್ಥ್ಯದ ಬೃಹತ್ ಕ್ರೀಡಾಂಗಣವಾಗಿದೆ.