ಚಿಲ್ಲಿ ಪನೀರ್ ಬದಲು ಚಿಲ್ಲಿ ಚಿಕನ್ ಡೆಲಿವರಿ.. – ಆಹಾರ ಸೇವಿಸಿದ ಕೆಲವೇ ಹೊತ್ತಲ್ಲಿ ಕುಟುಂಬಸ್ಥರು ಅಸ್ವಸ್ಥ!

ಚಿಲ್ಲಿ ಪನೀರ್ ಬದಲು ಚಿಲ್ಲಿ ಚಿಕನ್ ಡೆಲಿವರಿ.. – ಆಹಾರ ಸೇವಿಸಿದ ಕೆಲವೇ ಹೊತ್ತಲ್ಲಿ ಕುಟುಂಬಸ್ಥರು ಅಸ್ವಸ್ಥ!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್‌ ಮಾಡೋದು ಕಾಮನ್.‌ ಮನೆ ಬಳಿ ರೆಸ್ಟೋರೆಂಟ್‌ ಇದ್ರೂ ಕೂಡ ಆನ್‌ ಲೈನ್‌ ನಲ್ಲಿಯೇ ತರಿಸಿಕೊಳ್ಳುತ್ತಾರೆ. ಈ ವೇಳೆ ಕೆಲವೊಂದು ಬಾರಿ ಯಡವಟ್ಟು ಆಗುತ್ತವೆ. ಆಹಾರಗಳು ಸರಿಯಾಗಿ ಬೆಂದಿರುವುದಿಲ್ಲ. ಗುಣಮಟ್ಟ ಉತ್ತಮವಾಗಿರುವುದಿಲ್ಲ. ಪ್ಯಾಕಿಂಗ್‌ ಸರಿಯಾಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ವೆಜ್‌ ಆರ್ಡರ್‌ ಮಾಡಿದ್ರೆ ನಾನ್‌ವೆಜ್‌ ಆಹಾರ ಬಂದ ಸಾಕಷ್ಟು ಉದಾಹರಣೆಗಳಿವೆ. ಇಲ್ಲೂ ಕೂಡ ವ್ಯಕ್ತಿಯೊಬ್ಬರು ಚಿಲ್ಲಿ ಪನೀರ್ ಆರ್ಡರ್‌ ಮಾಡಿದ್ದಾರೆ. ಆದರೆ ಚಿಲ್ಲಿ ಪನೀರ್ ಬದಲಿಗೆ ಚಿಲ್ಲಿ ಚಿಕನ್ ಡೆಲಿವರಿ ಮಾಡಿದ ನಂತರ ಸಸ್ಯಾಹಾರಿ ಬ್ರಾಹ್ಮಣ ಕುಟುಂಬ ಅಸ್ವಸ್ಥಗೊಂಡು, ಪೊಲೀಸ್​​ ಠಾಣೆ ಮೆಟ್ಟಿಲೇರಿದೆ.

ಅಷ್ಟಕ್ಕೂ ನಡೆದಿದ್ದೇನು?

ಉತ್ತರಪ್ರದೇಶದ ಲಕ್ನೋದ ಆಶಿಯಾನಾ ಕೊತ್ವಾಲಿಯ ವ್ಯಕ್ತಿಯೊಬ್ಬರು ಸ್ವಿಗ್ಗಿಯಲ್ಲಿ ಚಿಲ್ಲಿ ಪನೀರ್ ಆರ್ಡರ್ ಮಾಡಿದ್ದಾರೆ. ಬ್ರಾಹ್ಮಣರಾಗಿದ್ದ ಅವರು ಆಲಂಬಾಗ್‌ನಲ್ಲಿರುವ ಚೈನೀಸ್ ಫ್ಯೂಷನ್ ರೆಸ್ಟೋರೆಂಟ್‌ಗೆ ಚಿಲ್ಲಿ ಪನೀರ್ ಅನ್ನು ಮಾತ್ರ ತರುವಂತೆ ಹೇಳಿದ್ದರು. ಆದರೆ ರೆಸ್ಟೋರೆಂಟ್ ಆಹಾರವನ್ನು ತಯಾರಿಸಿ ಸ್ವಿಗ್ಗಿಯಲ್ಲಿ ಗ್ರಾಹಕರಿಗೆ ಕಳುಹಿಸಿದೆ. ಸ್ವಿಗ್ಗಿ ಬಾಯ್ ಚಿಲ್ಲಿ ಪನೀರ್ ಬದಲಾಗಿ ಚಿಲ್ಲಿ ಚಿಕನ್ (ನಾನ್ ವೆಜ್) ಡೆಲಿವರಿ ಮಾಡಿದ್ದಾನೆ. ಅದು ತಿಳಿಯದೆ ಬ್ರಾಹ್ಮಣ ಕುಟುಂಬ ಚಿಲ್ಲಿ ಚಿಕನ್​​ ಸೇವಿಸಿದ್ದಾರೆ. ಬಳಿಕ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದೀಗ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಇದನ್ನೂ ಓದಿ: ನಿನ್ನ ಬಳಿ ಸಾಲ ತಗೊಳಲ್ಲ ಎಂದ ಮಹಿಳೆ.. – ಚೂರಿಯಿಂದ ತಿವಿದು ತಾನೂ ವಿಷ ಕುಡಿದ ಪಾಪಿ!

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ!

ಆಹಾರ ಪದಾರ್ಥ ಸೇವಿಸಿ ಅಸ್ವಸ್ಥರಾದ ಕುಟುಂಬ, ರೆಸ್ಟೋರೆಂಟ್ ಹಾಗೂ ಆಹಾರ ಪದಾರ್ಥ ವಿತರಿಸಿದ ಸ್ವಿಗ್ಗಿ ಡೆಲಿವರಿ ಬಾಯ್ ವಿರುದ್ಧ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

ನಾನು ಸಸ್ಯಾಹಾರಿ, ಚಿಲ್ಲಿ ಚಿಕನ್ ಡೆಲಿವರಿ ಮಾಡಿದ್ದಾರೆ ಎಂದು ಸಂತ್ರಸ್ತ ರೆಸ್ಟೋರೆಂಟ್ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಆಶಿಯಾನಾ ಕೊಟ್ವಾಲಿ ಪೊಲೀಸರು ಚೈನೀಸ್ ಫ್ಯೂಷನ್ ಮತ್ತು ಸ್ವಿಗ್ಗಿ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಕೆಲ ತಿಂಗಳ ಹಿಂದೆ ಆಗ್ರಾದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ಆಗ್ರಾ-ಫತೇಹಾಬಾದ್ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಅರ್ಪಿತ್ ಗುಪ್ತಾ ಎಂಬ ವ್ಯಕ್ತಿಗೆ ವೆಜ್ ಬದಲಿಗೆ ನಾನ್ ವೆಜ್ ವಿತರಿಸಲಾಯಿತು. ಸಸ್ಯಾಹಾರಿ ಊಟ ಎಂದು ಭಾವಿಸಿದ ಅರ್ಪಿತ್ ಮತ್ತು ಆತನ ಸ್ನೇಹಿತ ಆಹಾರದ ರುಚಿ ವಿಭಿನ್ನವಾಗಿರುವುದನ್ನು ಕಂಡು ಅದು ಚಿಕನ್ ರೋಲ್ ಆಗಿತ್ತು. ಬಳಿಕ ಅರ್ಪಿತ್ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಬಗ್ಗೆ ಕಾನೂನು ಹೋರಾಟ ಆರಂಭಿಸಿದ ಅರ್ಪಿತ್, ಕೋರ್ಟಿನ ಮೊರೆ ಹೋಗಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇಂತಹ ಘಟನೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದು ಕಂಡುಬಂದರೆ, ಆಹಾರ ಸುರಕ್ಷತೆಯ ದುರ್ಬಳಕೆಯಿಂದ ಗ್ರಾಹಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಉದ್ದೇಶಪೂರ್ವಕವಾಗಿ ತಪ್ಪು ಆಹಾರ ನೀಡಿರುವುದು ಕಂಡುಬಂದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ.

Shwetha M