4 ಅಂತಸ್ತಿನ ಕಟ್ಟಡ ಕುಸಿತ – ಬಾಲಕನನ್ನು ರಕ್ಷಿಸಿದ್ದೇ ಕಾರ್ಟೂನ್!
ಲಕ್ನೋ: ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕಾರ್ಟೂನ್ ಅನ್ನು ಇಷ್ಟಪಟ್ಟು ನೋಡುತ್ತಾರೆ. ಕೆಲವರಂತೂ ದಿನಪೂರ್ತಿ ಕಾರ್ಟೂನ್ ನೋಡುತ್ತಾ ಕಾಲ ಕಳೆಯುತ್ತಾರೆ. ದಿನವಿಡೀ ಕಾರ್ಟೂನ್ ನೋಡುತ್ತಿರುವುದನ್ನು ಕಂಡ ಹೆತ್ತವರು ಅದೇನು ದಿನ ಪೂರ್ತಿ ಕಾರ್ಟೂನ್ ನೋಡ್ತಾ ಇರ್ತೀಯ? ಮಾಡೋಕೇನು ಕೆಲ್ಸಾ ಇಲ್ವಾ? ಅದರಿಂದ ಏನು ಸಿಗುತ್ತೆ ಅಂತ ಬೈಯ್ಯುತ್ತಾರೆ. ಆದ್ರೆ ಅದೇ ಕಾರ್ಟೂನ್ ಇಲ್ಲೊಬ್ಬ ಬಾಲಕನ ಜೀವ ಉಳಿಸಿದೆ.
ಹೌದು, ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದರು. ಅಲ್ಲದೇ ಹಲವು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ 6 ವರ್ಷದ ಬಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಅದೂ ಟಿವಿಯಲ್ಲಿ ಪ್ರಸಾರವಾಗುವ ಡೋರೆಮಾನ್ ಕಾರ್ಟೂನ್ ಶೋನಲ್ಲಿ ಬರುವ ಉಪಾಯವನ್ನು ಬಳಸಿಕೊಂಡು!
ಇದನ್ನೂ ಓದಿ:ಲಿಕ್ಕರ್ ಮಾಫಿಯಾ ಕಿಂಗ್ ಪಿನ್ ಎಸ್ಕೇಪ್ – ಪೊಲೀಸರಿಗೆ ಸುಳಿವು ನೀಡಿತಾ ಗಿಳಿ?
ಸ್ಥಳೀಯ ರಾಜಕಾರಣಿಯೊಬ್ಬರ ಆರು ವರ್ಷದ ಮಗ ಮುಸ್ತಫಾ ಎಂಬಾತ ಪವಾಡ ಸದೃಶವಾಗಿ ಜೀವ ಉಳಿಸಿಕೊಂಡಿದ್ದಾನೆ. ಅದೂ ತಾನು ಟಿವಿಯಲ್ಲಿಇಷ್ಟಪಟ್ಟು ನೋಡುತ್ತಿದ್ದ ಡೋರೆಮಾನ್ ಕಾರ್ಟೂನ್ ಶೋನಲ್ಲಿ ಕಲಿತ ಟ್ರಿಕ್ಸ್ನಿಂದ ಎಂದರೆ ನಂಬಲೇಬೇಕು ಮತ್ತು ಆಶ್ಚರ್ಯ ಕೂಡ. ಮುಸ್ತಾಫ ಡೋರೆಮಾನ್ ಶೋನಲ್ಲಿ ಭೂಕಂಪದ ಸಂದರ್ಭದಲ್ಲಿ ಬಳಸಿದ್ದ ಟ್ರಿಕ್ಸ್ ಅನ್ನು ದುರಂತದ ವೇಳೆ ಅನುಕರಿಸಿದ್ದಾನೆ. ಇದರಿಂದಾಗಿ ಆತ ಪವಾಡ ಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ತಾನು ಹೇಗೆ ಜೀವ ಉಳಿಸಿಕೊಂಡೆ ಎಂಬುದರ ಕುರಿತು ಮಾಧ್ಯಮವೊಂದರಲ್ಲಿ ಮುಸ್ತಫಾ ಮಾತನಾಡಿದ್ದಾನೆ. ‘ಭೂಕಂಪನ ಸಂಭವಿಸಿದಾಗ ಏನು ಮಾಡಬೇಕೆಂಬುದು ನೆನಪಿನಲ್ಲಿತ್ತು. ಕಟ್ಟಡವು ನಡುಗಿದಂತಾದಾಗ ನಾನು ಟಿವಿ ನೋಡುತ್ತಿದ್ದೆ. ಹಿಂದಿನ ದಿನ, ನಗರದಲ್ಲಿ ಲಘು ಕಂಪನದ ಅನುಭವವಾಗಿತ್ತು. ಆ ಸಂದರ್ಭದಲ್ಲಿ ಭೂಕಂಪ ಸಂಭವಿಸಿದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಡೋರೆಮನ್ ಶೋನಲ್ಲಿ ಪ್ರಸಾರವಾಗಿತ್ತು. ಕಟ್ಟಡ ನಡುಗಿದಂತಾದಾಗ ಆರಂಭದಲ್ಲಿ ತಾನು ಭಯಭೀತನಾಗಿದ್ದೆ. ಬಳಿಕ ನಾನು ಕಾರ್ಟೂನ್ ಶೋ ‘ಡೋರೆಮಾನ್’ ನ ಹಿಂದಿನ ದಿನದ ಸಂಚಿಕೆಯೊಂದನ್ನು ನೆನಪಿಸಿಕೊಂಡೆ. ಇದರಲ್ಲಿ ನೋಬಿತಾ ( ವೆಬ್ ಸಿರೀಸ್ನ ಕೇಂದ್ರ ಪಾತ್ರದಾರಿ) ಭೂಕಂಪದ ಸಮಯದಲ್ಲಿ ಮನೆಯ ಮೂಲೆಗಳಲ್ಲಿ ಅಥವಾ ಹಾಸಿಗೆಯ ಕೆಳಗೆ ಆಶ್ರಯ ಪಡೆದು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ನೋಡಿದ್ದೆ. ನಾನೂ ಕೂಡ ಒಂದು ಸೆಕೆಂಡ್ ವ್ಯರ್ಥ ಮಾಡದೆ, ಹಾಸಿಗೆಯ ಕೆಳಗೆ ಮಲಗಿಕೊಂಡೆ” ಎಂದು ಮುಸ್ತಫಾ ತನ್ನ ಕಥೆಯನ್ನು ವಿವರಿಸಿದ್ದಾನೆ.
‘ಈ ಕ್ಷಣದಲ್ಲಿ ಇಡೀ ಕಟ್ಟಡ ಕುಸಿಯುವ ಜೋರು ಶಬ್ಧ ಬಂದಾಗ ಅಮ್ಮ ಕಿರುಚುತ್ತಾ ಓಡಿ ಬರುತ್ತಿರುವುದನ್ನ ನಾನು ನೋಡಿದೆ. ಆದರೆ ಕ್ಷಣಮಾತ್ರದಲ್ಲಿ ಇಡೀ ಕಟ್ಟಡ ಕುಸಿಯಿತು ಮತ್ತು ಸುತ್ತಲೂ ಕತ್ತಲು ಕವಿಯಿತು. ಘಟನೆ ನಡೆದ ನಂತರ ನಾನು ಪ್ರಜ್ಞಾಹೀನನಾಗಿರಲಿಲ್ಲ. ಸುತ್ತಮುತ್ತಲಿನ ಜನರು ನನ್ನ ತಂದೆ ಮತ್ತು ತಾಯಿಗಾಗಿ ಕಿರುಚುತ್ತಿದ್ದರು. ಅವರು ಅಳುವುದು ನನಗೆ ಕೇಳಿಸುತ್ತಿತ್ತು. ನಂತರ ಕೆಲವು ಜನರು ನನ್ನನ್ನು ಎಲ್ಲೋ ಕರೆದುಕೊಂಡು ಹೋದದ್ದು ನನಗೆ ನೆನಪಿದೆ’ ಎಂದು ತಿಳಿಸಿದ್ದಾನೆ.
ವರದಿಯ ಪ್ರಕಾರ ಘಟನೆ ನಡೆದಾಗ ಮುಸ್ತಾಫ ತಂದೆ ಅಬ್ಬಾಸ್ ಹೈದರ್ ಮನೆಯಲ್ಲಿರಲಿಲ್ಲ. ದುರಾದೃಷ್ಟವಶಾತ್ ಬಾಲಕನ ತಾಯಿ ಉಝ್ಮಾ ಹೈದರ್(30) ಹಾಗೂ ಅಜ್ಜಿ ಬೇಗಂ ಹೈದರ್(87) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.