ತಂದೆಯ ಕನಸನ್ನು ನನಸು ಮಾಡಿದ LSG ಹೀರೋ ಮುಕುಲ್– ತನ್ನ ಮೊದಲ ಯಶಸ್ಸನ್ನು ಧೋನಿಗೆ ಅರ್ಪಿಸಿದ ಚೌಧರಿ

ಕೆಕೆಆರ್ ಪಂದ್ಯ ಗೆಲ್ಲಲೇಬೇಕು ಎಂಬ ಹಠದಲ್ಲಿತ್ತು. ಲಕ್ನೋ ತಂಡ ಪಂದ್ಯವನ್ನು ಕೈ ಚೆಲ್ಲಿ ಕುಳಿತಿತ್ತು. ಆಗಲೇ ನೋಡಿ ಅದ್ಭುತ ನಡೆದಿರುವುದು. ಮುಕುಲ್ ಎಂಬ ಯಂಗ್ ಗನ್ ಕೋಲ್ಕತ್ತಾ ತಂಡದ ಬೌಲರ್ಗಳ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಯಲ್ಲೂ ಸಿಕ್ಸರ್, ಫೋರ್ಗಳನ್ನು ಹೊಡೆದರು. ಕೆಕೆಆರ್ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿದರು. ಹಾಗಾದರೆ ಈ ಮುಕುಲ್ ಚೌಧರಿ ಯಾರು?, ಕ್ರಿಕೆಟ್ ಕನಸು ಹುಟ್ಟಿದ್ದು ಯಾವಾಗ?, ಮುಕುಲ್ ತನ್ನ ಕ್ರಿಕೆಟ್ ಜರ್ನಿ ಬಗ್ಗೆ ಏನು ಹೇಳಿದ್ದಾರೆ ಎಂಬ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ:ಕೊನೆ ಕ್ಷಣದಲ್ಲಿ ಮುಕುಲ್ ಕಮಾಲ್! – ರೋಚಕ ಪಂದ್ಯದಲ್ಲಿ ಲಕ್ನೋಗೆ 3 ವಿಕೆಟ್ ಜಯ!
ರಾಜಸ್ಥಾನದ ಜುಂಜುನು ಮೂಲದವರು ಈ ಮುಕುಲ್ ಚೌಧರಿ. ಇವರ ತಂದೆಗೆ ಮದುವೆಯಾಗುವ ಮೊದಲೇ ತನಗೆ ಹುಟ್ಟುವ ಮಗ ಕ್ರಿಕೆಟ್ ಆಡಬೇಕು ಎಂಬ ಕನಸಿತ್ತಂತೆ. ಆದರೆ, ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಹೀಗಾಗಿ ಮುಕುಲ್ 12-13 ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಜುಂಜುನುವಿನಲ್ಲಿ ಹೆಚ್ಚು ಅಕಾಡೆಮಿಗಳು ಇರಲಿಲ್ಲ. ಹೀಗಾಗಿ ಮುಕುಲ್ ಜೈಪುರಕ್ಕೆ ಶಿಫ್ಟ್ ಆದರು. ಮುಕುಲ್ ಹೇಳುವ ಪ್ರಕಾರ, ‘ಟಿ20 ಕ್ರಿಕೆಟ್ ಎಷ್ಟು ಬೆಳೆಯುತ್ತಿದೆ ಎಂಬುದನ್ನು ನಾನು ನೋಡಿದೆ, ಆದ್ದರಿಂದ ನಾನು ಗುರಗಾಂವ್ಗೆ (ಈಗ ಗುರುಗ್ರಾಮ) ಸ್ಥಳಾಂತರಗೊಂಡು ಮೂರರಿಂದ ನಾಲ್ಕು ತಿಂಗಳು ಅಲ್ಲಿಯೇ ಇದ್ದೆ. ನನ್ನ ತಂದೆ ಉತ್ತರ ಪ್ರದೇಶ ವಿರುದ್ಧ 19 ವರ್ಷದೊಳಗಿನವರ ಪಂದ್ಯ ಇತ್ತು ಎಂದು ಹೇಳಿದ್ದರು. ಅದು ಕಡಿಮೆ ಸ್ಕೋರಿಂಗ್ ಪಂದ್ಯವಾಗಿತ್ತು. ಆದರೆ, ನಾನು ರನ್ ಗಳಿಸಿದೆ ಮತ್ತು ಆಗಲೇ ನಾನು ದೊಡ್ಡ ಸಾಧನೆ ಮಾಡುತ್ತೇನೆ ಎಂದು ನನ್ನ ತಂದೆಗೆಅವರಿಗೆ ತಿಳಿದಿತ್ತು’ ಎಂದು ಮುಕುಲ್ ಹೇಳಿಕೊಂಡಿದ್ದಾರೆ.
ಒತ್ತಡವನ್ನು ನಿಭಾಯಿಸುವ ಬಗ್ಗೆ ಮಾತನಾಡುತ್ತಾ, ‘ಒತ್ತಡ ಯಾವಾಗಲೂ ಇರುತ್ತದೆ, ಆದರೆ ದೇವರು ನಮಗೆ ಈ ಅವಕಾಶವನ್ನು ನೀಡಿದ್ದಾನೆ ಮತ್ತು ನಾನು ನನ್ನಿಂದ ಸಾಧ್ಯವಾದಷ್ಟು ಮಾಡಲು ಪ್ರಯತ್ನಿಸುತ್ತೇನೆ. ಒತ್ತಡವನ್ನು ತೆಗೆದುಕೊಳ್ಳುವ ಬದಲು ನಾನು ಇದನ್ನು ಒಂದು ಅವಕಾಶವಾಗಿ ನೋಡುತ್ತೇನೆ. ನನ್ನ ಯೋಜನೆ ಕೊನೆಯವರೆಗೂ ಆಡುವುದಾಗಿತ್ತು ಮತ್ತು ನಾನು ಕೊನೆಯವರೆಗೂ ಉಳಿದರೆ, ತಂಡ ಗೆಲ್ಲಲು ಸಹಾಯ ಮಾಡಬಹುದು ಎಂದು ನಾನು ನಂಬಿದ್ದೆ’ ಎಂದರು. ಚೇಸಿಂಗ್ನ ಕೊನೆಯ ಕ್ಷಣಗಳಲ್ಲಿ ಚೌಧರಿ ತಮ್ಮ ವಿಧಾನವನ್ನು ಬಹಿರಂಗಪಡಿಸಿದರು. ‘ಒಂದು ಚೆಂಡು ನನ್ನ ಪ್ರದೇಶದಲ್ಲಿ ಬರುತ್ತದೆ ಎಂದು ನನಗೆ ತಿಳಿದಿತ್ತು ಮತ್ತು ನಾನು ಕೇವಲ ಒಂದು ಸಿಕ್ಸ್ ಹೊಡೆಯಬೇಕಾಗಿತ್ತು. ಪಂದ್ಯದ ತನ್ನ ಮೊದಲ ಸಿಕ್ಸ್ ಅತ್ಯಂತ ವಿಶೇಷವಾಗಿತ್ತು. ನಾನು ಚಿಕ್ಕವನಿದ್ದಾಗಿನಿಂದ ಯಾವಾಗಲೂ ಹೊಡೆಯುತ್ತಿದ್ದೇನೆ. ಅದು ನನ್ನ ಪ್ರದೇಶದಲ್ಲಿದ್ದರೆ, ನಾನು ಅದನ್ನು ಹೊಡೆಯುತ್ತೇನೆ’ ಎಂದು ಹೇಳಿದರು.
ಇನ್ನು ಮುಕುಲ್ ಚೌಧರಿ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿಯ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದಾರೆ. ಜೊತೆಗೆ ಧೋನಿಗೆ ತನ್ನ ಯಶಸ್ಸಿನ ಗೆಲುವನ್ನು ಅರ್ಪಿಸಿದ್ದಾರೆ. ಮುಕುಲ್ ಚೌಧರಿ 27 ಎಸೆತಗಳಲ್ಲಿ 54 ರನ್ ಸಿಡಿಸಿ ಲಖನೌ ಸೂಪರ್ ಜಯಂಟ್ಸ್ಗೆ ರೋಚಕ ಗೆಲುವು ತಂದುಕೊಟ್ಟರು. ಎಂ.ಎಸ್. ಧೋನಿ ಅವರ ಆಟದಿಂದ ಸ್ಫೂರ್ತಿ ಪಡೆದ ಮುಕುಲ್, ತಮ್ಮ ವಿಜಯವನ್ನು ಧೋನಿಗೆ ಅರ್ಪಿಸಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಎಂಎಸ್ ಧೋನಿ ಪಂದ್ಯಗಳನ್ನು ಹೇಗೆ ಫಿನಿಶ್ ಮಾಡುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾನು ಅದೇ ರೀತಿಯಲ್ಲಿ ಬ್ಯಾಟ್ ಮಾಡಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅವರು ನನಗೆ ಸ್ಫೂರ್ತಿ ನೀಡಿದರು. ನಾನು ಗೆಲ್ಲಿಸಿಕೊಟ್ಟೆ, ಮತ್ತು ಆ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ’ ಎಂದರು. ‘ನನ್ನ ದೇಹ ಹೆಚ್ಚು ಶಕ್ತಿಯನ್ನು ಹೊಂದಿದೆ. ಆದರೆ ನಾನು ದಿನವೂ ಅಭ್ಯಾಸ ಮಾಡುತ್ತೇನೆ. ಪ್ರತಿದಿನ 100ರಿಂದ 150 ಸಿಕ್ಸರ್ಗಳನ್ನು ಹೊಡೆಯುವುದನ್ನು ಅಭ್ಯಾಸ ಮಾಡಿದರೆ ಆ ಕಲೆ ಬೆಳೆಯುತ್ತದೆ. ಕಳೆದ 5-6 ತಿಂಗಳುಗಳಿಂದ ನಾನು ಅದರ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ. ಮುಕುಲ್ ಅವರನ್ನು ತಂಡಕ್ಕೆ ಹೇಗೆ ಆಯ್ಕೆ ಮಾಡಲಾಯಿತು ಎಂಬ ವಿಷಯವನ್ನು ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ರಿವೀಲ್ ಮಾಡಿದ್ದಾರೆ. ‘ಮುಕುಲ್ ಅವರನ್ನು ಕೆಲವು ತಿಂಗಳ ಹಿಂದೆ ತರಬೇತಿ ಶಿಬಿರದಲ್ಲಿ ನೋಡಿದ್ದೆವು. ಈ ದೇಶದಲ್ಲಿ ತುಂಬಾ ಪ್ರತಿಭೆಗಳಿವೆ. ನಮ್ಮ ಡೇಟಾ ವಿಶ್ಲೇಷಕ ಶ್ರೀನಿವಾಸ್ ಅವರೇ ಮುಕುಲ್ನ ಆಯ್ಕೆ ಮಾಡಿದ್ದು’ ಎಂದು ಜಸ್ಟಿನ್ ವಿವರಿಸಿದರು. ಎಲ್ಎಸ್ಜಿ ಮುಕುಲ್ಗೆ 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.

ನೋಡಿರಿ

