500 ರೂಪಾಯಿಗೆ ಸಿಗುತ್ತಾ ಗ್ಯಾಸ್ ಸಿಲಿಂಡರ್? – ಇ-ಕೆವೈಸಿ ಮಾಡಿಸದಿದ್ರೆ ಏನಾಗುತ್ತೆ?

500 ರೂಪಾಯಿಗೆ ಸಿಗುತ್ತಾ ಗ್ಯಾಸ್ ಸಿಲಿಂಡರ್? – ಇ-ಕೆವೈಸಿ ಮಾಡಿಸದಿದ್ರೆ ಏನಾಗುತ್ತೆ?

ಈಗಂತೂ ಯಾವ ಗ್ಯಾಸ್ ಏಜೆನ್ಸಿ ಮುಂದೆ ನೋಡಿದ್ರೂ ಜನವೋ ಜನ. ಮಹಿಳೆಯರು, ಪುರುಷರು ಸೇರಿದಂತೆ ವೃದ್ಧರವರೆಗೂ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಒಂದು ದಿನಕ್ಕೆ ಆಗ್ಲಿಲ್ಲ ಅಂದ್ರೆ ಮತ್ತೆ ನಾಳೆ, ನಾಡಿದ್ದು ಬರ್ತಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಯಾವುದೇ ಮೂಲೆಗೆ ಹೋದ್ರೂ ಇಂಥದ್ದೇ ಚಿತ್ರಣ ಕಾಣ್ತಿದೆ. ನೂಕು ನುಗ್ಗಲು ಉಂಟಾಗ್ತಿದೆ. ಕೆಲವು ಕಡೆ ಜಗಳ ಕೂಡ ನಡೀತಿದೆ. ಅಷ್ಟಕ್ಕೂ ಜನ ಹೀಗೆ ಗಾಬರಿಯಾಗೋಕೆ, ಗ್ಯಾಸ್ ಏಜೆನ್ಸಿಗಳಿಗೆ ನುಗ್ಗೋಕೆ ಕಾರಣವೂ ಇದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮೆಸೇಜ್ ವೊಂದು ಜನ್ರ ನಿದ್ದೆಗೆಡಿಸಿದೆ.

ಜಸ್ಟ್ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಬೇಕಾ..? ಹಾಗಾದ್ರೆ ಹೀಗೆ ಮಾಡಿ! ಅನ್ನೋ ಮೆಸೇಜ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಗ್ಯಾಸ್‌ ಸಂಪರ್ಕವುಳ್ಳವರು ಇ-ಕೆವೈಸಿ ಮಾಡಿಸಿದರೆ  ಸರ್ಕಾರದಿಂದ ಜನವರಿ 1 ರಿಂದ ಸಹಾಯಧನ ಸಿಗಲಿದೆ. ಇ-ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂಪಾಯಿಗಳಿಗೆ ಮನೆಬಳಕೆಯ ಸಿಲಿಂಡರ್‌ ಪಡೆದುಕೊಳ್ಳಬೇಕಾಗುತ್ತದೆ. ಇದೇ ತಿಂಗಳು ಡೆಡ್​ಲೈನ್ ನೀಡಲಾಗಿದೆ. ಹಾಗೇನಾದ್ರೂ ಅಪ್​ಡೇಟ್ ಮಾಡಿಸದೇ ಇದ್ರೆ 500 ರೂಪಾಯಿಗೆ ಸಿಲಿಂಡರ್ ಸಿಗೋದಿಲ್ಲ. ಈ ಮೆಸೇಜ್ ನೋಡಿದ ಜನ ಇದು ನಿಜವೆಂದು ನಂಬಿ ಗ್ಯಾಸ್ ಏಜೆನ್ಸಿಗಳತ್ತ ಜಮಾಯಿಸುತ್ತಿದ್ದಾರೆ. ಅಸಲಿಗೆ  -ಇ-ಕೆವೈಸಿ ಮಾಡಿಸಿದರೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಡುವ ಯಾವುದೇ ಘೋಷಣೆಯನ್ನು ಸಹ ಸರ್ಕಾರ ಮಾಡಿಲ್ಲ. ಇದು ಸುಳ್ಳು ಸುದ್ದಿ ಅನ್ನೋದು ಗೊತ್ತಿಲ್ಲದೆ ಜನ ಅಪ್​ಡೇಟ್ ಮಾಡಿಸೋಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ –  ಹೊಸ ವರ್ಷಾಚರಣೆಗೆ ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲಾ ತೈಲ ಕಂಪನಿಗಳು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಆದ್ಯತೆಯೊಂದಿಗೆ ಆಧಾರ್ ಒದಗಿಸದ ಫಲಾನುಭವಿಗಳಿಂದ ಬಯೋಮೆಟ್ರಿಕ್‌ ಪಡೆದುಕೊಳ್ಳುವಂತೆ ಸೂಚಿಸಿದೆ. ಆದರೆ ಇದಕ್ಕೆ  ಯಾವುದೇ ಅಂತಿಮ ದಿನಾಂಕವಾಗಲಿ, ಸಹಾಯಧನವಾಗಲಿ, ಇ-ಕೆವೈಸಿ ಮಾಡಿಸದಿದ್ದರೇನು ಎನ್ನುವ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಡಿಸೆಂಬರ್ 31ರ ಅಂತಿಮ ದಿನ, ಸಹಾಯಧನ ಇಷ್ಟಿದೆ, ಇ-ಕೆವೈಸಿ ಮಾಡದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್‌ ಪಡೆಯಬೇಕಾಗುತ್ತೆ ಅನ್ನೋ ತಪ್ಪು ಮಾಹಿತಿಯನ್ನು ಯಾರೋ ದುಷ್ಕರ್ಮಿಗಳು ಹಬ್ಬಿಸಿದ್ದಾರೆ. ಅಸಲಿಗೆ ಇ-ಕೆವೈಸಿ ಮಾಡಿಸುವುದು ಅನಿವಾರ್ಯವೂ ಆಗಿದೆ.

ಇ-ಕೆವೈಸಿ ಯಾಕೆ ಅಗತ್ಯ?

ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಸಹ ಇ-ಕೆವೈಸಿ ಮಾಡಿಸಬೇಕಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಗ್ಯಾಸ್ ಏಜೆನ್ಸಿಗಳು ಇ-ಕೆವೈಸಿ ಮಾಡಿಸಬೇಕು ಎಂದು ಹೇಳಿವೆ. ಗೃಹ ಬಳಕೆ ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ಇದು ನೆರವಾಗುತ್ತದೆ. ವಾಣಿಜ್ಯ ಸಿಲಿಂಡರ್‌ಗಿಂತ ಗೃಹ ಬಳಕೆ ಸಿಲಿಂಡರ್‌ಗಳ ಬೆಲೆಗಳು ಕಡಿಮೆ. ಸಾಕಷ್ಟು ಜನರು ಒಂದಕ್ಕಿಂತ ಹೆಚ್ಚು ಸಂಪರ್ಕವನ್ನು ಪಡೆದುಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಆರೋಪವಾಗಿದೆ. ಇದರಿಂದಾಗಿ ನಷ್ಟ ಅನುಭವಿಸುತ್ತಿರುವ ತೈಲ ಕಂಪನಿಗಳು, ನಿಜವಾದ ಗ್ರಾಹಕರನ್ನು ಪತ್ತೆ ಹಚ್ಚಲು ಇ-ಕೆವೈಸಿ ಮಾಡಿಸುತ್ತಿವೆ. ಹೀಗೆ ಮಾಡಿದರೆ ಅರ್ಹರಿಗೆ ಸಬ್ಸಿಡಿ ದರದಲ್ಲಿ ಸರಿಯಾಗಿ ಸಿಲಿಂಡರ್ ವಿತರಣೆಯಾಗಲಿದೆ. ಅಲ್ಲದೇ ತೈಲ ಕಂಪನಿಗಳ ಮೇಲಿನ ಹೊರೆ ಸಹ ಕಡಿಮೆಯಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ. ಆದರೆ ಇದಕ್ಕೆ ಅಂತಿಮ ದಿನಾಂಕ ನಿಗದಿಗೊಳಿಸಿಲ್ಲ. ಅಂತಿಮ ದಿನಾಂಕ ನಿಗದಿ ಮಾಡಲಾಗಿದೆ ಎಂಬ ವದಂತಿ ಹಾಗೂ ಸಬ್ಸಿಡಿ ಸಿಗುತ್ತದೆ ಎಂಬ ವದಂತಿ ನಂಬಿ ಗ್ರಾಹಕರು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಒಂದು ವೇಳೆ ಒಟಿಪಿ ಮೂಲಕ ಇ-ಕೆವೈಸಿ ಮಾಡಿದರೆ ನಿಜವಾದ ಗ್ರಾಹಕರು ಯಾರಿದ್ದಾರೆ? ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. ಆದ್ದರಿಂದ ಆಧಾರ್ ಮೂಲಕ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ. ಗ್ರಾಹಕರ ಬೆರಳಿನ ಗುರುತು, ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇ-ಕೆವೈಸಿ ಮಾಡಿಸಬೇಕು ಎಂದು ತೈಲ ಕಂಪನಿಗಳು ಏಜೆನ್ಸಿಗಳಿಗೆ ಸೂಚನೆ ನೀಡಿವೆ. ಎರಡು ವಾರದ ಹಿಂದೆ ಈ ಆದೇಶ ಹೊರಡಿಸಲಾಗಿದೆ.

ಪ್ರಸ್ತುತ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರಿಗೆ 300 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಉಳಿದಂತೆ ಯಾರಿಗೂ ಸಹಾಯಧನ ಕೊಡುತ್ತಿಲ್ಲ. ಆದ್ರೀಗ ಇ-ಕೆವೈಸಿ ಮಾಡಿಸಿದ್ರೆ 500 ರೂಪಾಯಿಗೆ ಎಲ್ರಿಗೂ ಗ್ಯಾಸ್ ಸಿಲಿಂಡರ್ ಸಿಗುತ್ತೆ ಅನ್ನೋ ವದಂತಿ ಜನರ ಗೊಂದಲಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಗೃಹಣಿಯರು ಬಯೋಮೆಟ್ರಿಕ್‌ ಮಾಡಿಸಲು ಗ್ಯಾಸ್‌ ಏಜೆನ್ಸಿಗಳ ಮುಂದೆ ಮುಗಿಬೀಲ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ನೂಕು ನುಗ್ಗಲು ಉಂಟಾಗುತ್ತಿದೆ. ಬಹುತೇಕ ಮಹಿಳೆಯರು ಬೆಳಗಾಗುತ್ತಲೇ ಗ್ಯಾಸ್‌ ಏಜೆನ್ಸಿಗಳ ಮುಂದೆ ಪಾಳಿ ಹಚ್ಚುತ್ತಿದ್ದಾರೆ. ದಿನವಿಡಿ ಬಿಸಿಲಲ್ಲಿ ನಿಂತು ನೋಂದಣಿಗಾಗಿ ಮುಗಿ ಬೀಳುತ್ತಿದ್ದಾರೆ. ಇ-ಕೆವೈಸಿ ಮತ್ತು ಬಯೋಮೆಟ್ರಿಕ್‌ ಮಾಡದಿದ್ದರೆ ಸಿಲಿಂಡರ್‌ ಬಂದ್‌ ಮಾಡಲಾಗುತ್ತದೆ ಎಂಬ ಸುದ್ದಿಯೇ ಇಷ್ಟೊಂದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಗ್ರಾಹಕರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

Shwetha M