ಮೂರು ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ – ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ಗೊತ್ತಾ?

ಮೂರು ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ – ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ಗೊತ್ತಾ?

ಹೊಸ ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಸೋಮವಾರದಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಕಂಡಿದೆ.

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 1.50 ರಿಂದ 4.50 ರೂಪಾಯಿ ಇಳಿಕೆ ಮಾಡಿವೆ. ಆದರೆ, ಬೆಲೆ ಇಳಿಕೆ ಪ್ರಮಾಣದಲ್ಲಿ ಪ್ರಮುಖ ನಗರಗಳಿಗೆ ವ್ಯತ್ಯಾಸವಿದೆ. ದೇಶದ ಯಾವ ನಗರದಲ್ಲಿ ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆಯಲು ಇಸ್ರೋ ಸಜ್ಜು! – ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,755.50 ರೂ. ಆಗಿದೆ. ಈ ಮೊದಲು ಈ ದರ 1,757 ರೂ. ಇತ್ತು. ಹೀಗಾಗಿ ದೆಹಲಿಯಲ್ಲಿ ಒಂದೂವರೆ ರೂಪಾಯಿಯಷ್ಟು ಬೆಲೆ ಇಳಿಕೆಯಾದಂತಾಗಿದೆ. ಚೆನ್ನೈನಲ್ಲಿ, ಎಲ್‌ಪಿಜಿ ಬೆಲೆಯನ್ನು 4.50 ರೂ ಕಡಿತಗೊಳಿಸಲಾಗಿದೆ ಮತ್ತು 19 ಕೆಜಿ ಸಿಲಿಂಡರ್ ಬೆಲೆ ಈಗ 1,924.50 ರೂ. ಆಗಿದೆ.

ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1.50 ರೂಪಾಯಿ ಇಳಿದು 1,708.50 ರೂಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಂದು 50 ಪೈಸೆ ಏರಿಕೆಯಾಗಿದ್ದು, 1,869 ರೂ.ಗೆ ಆಗಿದೆ.

ಭಾರತೀಯ ತೈಲ ಕಂಪನಿಗಳು ಈ ಹಿಂದೆ ಡಿಸೆಂಬರ್ 22 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದವು. ಅದಕ್ಕೂ ಮುನ್ನ ಡಿಸೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಅಗ್ಗವಾಗಿದ್ದವು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಎಲ್​ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ.

ಆದರೆ ಗೃಹ ಬಳಕೆಯ 14 ಕೆಜಿ ಗ್ಯಾಸ್ ಸಿಲಿಂಡರ್ ದರ ಸ್ಥಿರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಮುಂಬೈನಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 902.50 ರೂ., ದೆಹಲಿಯಲ್ಲಿ 903 ರೂ., ಚೆನ್ನೈನಲ್ಲಿ 918.50 ರೂ. ಕೋಲ್ಕತ್ತಾದಲ್ಲಿ 929 ರೂ. ಆಗಿದೆ.

Shwetha M