ತಿಂಗಳ ಮೊದಲ ದಿನವೇ ಜನರಿಗೆ ಬಿಗ್‌ಶಾಕ್! – ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ 25 ರೂ. ಹೆಚ್ಚಳ

ತಿಂಗಳ ಮೊದಲ ದಿನವೇ ಜನರಿಗೆ ಬಿಗ್‌ಶಾಕ್! – ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ 25 ರೂ. ಹೆಚ್ಚಳ

ಮಾರ್ಚ್‌ ತಿಂಗಳ ಮೊದಲ ದಿನವೇ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್‌ ನೀಡಿವೆ. ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಭಾರಿ ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರ್ಚ್‌ 1 ರಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿವೆ. ಇದರೊಂದಿಗೆ, ಸತತ ಎರಡನೇ ತಿಂಗಳು ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾದಂತಾಗಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ತೀವ್ರವಾಗಿ ಹರಡ್ತಿದೆ ಹೊಟ್ಟೆ ಜ್ವರ! – ಇದರ ಲಕ್ಷಣಗಳೇನು?

ಬೆಲೆ ಪರಿಷ್ಕರಣೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಚಿಲ್ಲರೆ ಬೆಲೆ 1,795 ರೂ. ಆಗಿದೆ. ಮುಂಬೈನಲ್ಲಿ ಇಂದಿನಿಂದ 19 ಕೆಜಿ ಸಿಲಿಂಡರ್ 1,749 ರೂ.ಗೆ ಮಾರಾಟವಾಗಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 1,960 ರೂ, ಮತ್ತು 1,911 ರೂ.ಗೆ ಏರಿಕೆಯಾಗಿದೆ. ಫೆಬ್ರವರಿ 1 ರಂದು 19 ಕೆಜಿ ಗ್ಯಾಸ್ ಸಿಲಿಂಡರ್ ದರ 14 ರೂ. ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 23.50 ರೂ. ಹೆಚ್ಚಾಗಿ 1,875 ರೂ. ಆಗಿದೆ.

ಕಳೆದ ಎರಡು ತಿಂಗಳ ದರ ಪರಿಷ್ಕರಣೆ ಬಗ್ಗೆ ಗಮನಿಸುವುದಾದರೆ, ಕೋಲ್ಕತ್ತಾದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ಎರಡು ತಿಂಗಳ ಅವಧಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 42 ರೂಪಾಯಿ ಏರಿಕೆಯಾಗಿದೆ. ಆ ನಂತರ ಮುಂಬೈನಲ್ಲಿ 40.5 ರೂ. ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಈ ಏರಿಕೆ 39.5 ರೂ. ಆಗಿದೆ. ದಕ್ಷಿಣ ಭಾರತದ ಅತಿದೊಡ್ಡ ಮಹಾನಗರವಾದ ಚೆನ್ನೈಯಲ್ಲಿ ಎರಡು ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕನಿಷ್ಠ 36 ರೂ. ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆಯನ್ನು ಕಳೆದ 6 ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 30 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆ ಸಮಯದಲ್ಲಿ ಕೇಂದ್ರ ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿತ್ತು. ಆ ನಂತರ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 903 ರೂ.ಗೆ ಮತ್ತು ಕೋಲ್ಕತ್ತಾದಲ್ಲಿ 929 ರೂ.ಗೆ ಇಳಿದಿತ್ತು.

Shwetha M