ಮನೆಬಳಕೆ LPG ಸಿಲಿಂಡರ್ ಕಾಳಸಂತೆಯಲ್ಲಿ ಬಿಕರಿ! – 12 ಸಾವಿರ ಸಿಲಿಂಡರ್ ವಶ

ಇರಾನ್-ಇಸ್ರೇಲ್, ಮಧ್ಯಪ್ರಾಚ್ಯ ಸಂಘರ್ಷ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ತೀವ್ರತರದ ಅಭಾವಕ್ಕೆ ಕಾರಣವಾಗಿದೆ. ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆಯ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಂಡ ಕೆಲ ಖದೀಮರು ಗೃಹಬಳಕೆ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಅಕ್ರಮಗಳ ವಿರುದ್ಧ ದೇಶಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ, ದೆಹಲಿ, ಜಮ್ಮು ಕಾಶ್ಮೀರ, ಕೇರಳ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಸುಮಾರು 15 ಸಾವಿರ ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ನ್ಯೂಸ್! – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ!
ದೆಹಲಿಯಲ್ಲಿ 600 ಸಿಲಿಂಡರ್ಗಳು, ಉತ್ತರ ಪ್ರದೇಶದಲ್ಲಿ 405 ತಪಾಸಣೆಗಳು ನಡೆದಿವೆ ಹಾಗೂ 10 ಜನರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 504 ದಾಳಿ ನಡೆಸಿ ಎಫ್ಐಆರ್ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ಬೀದರ್ನಲ್ಲಿ 105, ದಾವಣಗೆರೆ ಮತ್ತು ಯಾದಗಿರಿಯಲ್ಲಿ ತಲಾ 20 ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ.
ಇನ್ನು ಏತನ್ಮಧ್ಯೆ, ಕಮರ್ಷಿಯಲ್ ಗ್ಯಾಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸಮರ್ಪಕ ಗ್ಯಾಸ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದೆ.
ಕಳೆದ 9 ದಿನಗಳಿಂದ ಮುಂದುವರಿದಿರುವ ಈ ಸಂಕಷ್ಟದಿಂದ ದೊಡ್ಡ ದೊಡ್ಡ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಹೋಟೆಲ್ ಆಹಾರಕ್ಕೆ ಅವಲಂಬಿತವಾಗಿದ್ದ ಜನರು ಈಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. 6 ಸಾವಿರ ರೂಪಾಯಿ ಕೊಟ್ಟರೂ ಕಮರ್ಷಿಯಲ್ ಸಿಲಿಂಡರ್ ಒಂದು ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ.
ಧಾರವಾಡದಲ್ಲಿ ಗ್ಯಾಸ್ ಲಭ್ಯವಿಲ್ಲದ ಕಾರಣ ನಗರದ ಹಳೆಯ ಹೋಟೆಲ್ ‘ವಿಜಯಸಾಗರ್’ ಕೂಡ ಬಂದ್ ಆಗಿದ್ದು, ಸುಮಾರು 20 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸಿದ್ದಾರೆ. ತುಮಕೂರಿನಲ್ಲಿ ಹೋಟೆಲ್ಗಳ ಜೊತೆಗೆ ಇಂದಿರಾ ಕ್ಯಾಂಟೀನ್ಗಳೂ ಕಾರ್ಯನಿರ್ವಹಣೆ ನಿಲ್ಲಿಸಿದ್ದರಿಂದ ಅನೇಕರು ಬೇರೆ ಉದ್ಯೋಗಗಳತ್ತ ಮುಖಮಾಡಿದ್ದಾರೆ. ರಂಜಾನ್ ಹಿನ್ನೆಲೆ ಆಹಾರ ತಯಾರಿಕೆಗೆ ಗ್ಯಾಸ್ ಸಿಗದ ಕಾರಣ, ಸೌದೆ ಒಲೆಗಳತ್ತ ಮೊರೆ ಹೋಗಲಾಗಿದೆ. ವಿಜಯಪುರದಲ್ಲೂ ರೊಟ್ಟಿ ತಯಾರಿಕೆಗೆ ಗ್ಯಾಸ್ ಕೊರತೆ ತಟ್ಟಿದ್ದು, ಅನಿವಾರ್ಯವಾಗಿ ಸೌದೆ ಮತ್ತು ಇದ್ದಿಲು ಒಲೆಗಳನ್ನು ಬಳಸಲಾಗುತ್ತಿದೆ.
ಹಾಸನದಲ್ಲಿ ಗರ್ಕಿನ್, ಬೇಬಿಕಾರ್ನ್, ಮಿಡಿ ಸೌತೆ ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಹಾರ್ಮುಜ್ ಜಲಮಾರ್ಗದ ಅಡಚಣೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಕಂಟೇನರ್ಗಳಲ್ಲೇ ವಾಪಸ್ ಆಗುತ್ತಿರುವುದು ಉದ್ಯಮಿಗಳಿಗೆ ಭಾರೀ ನಷ್ಟ ಉಂಟುಮಾಡಿದೆ.

ನೋಡಿರಿ

