1901ರ ನಂತರ 2023ರ ಆಗಸ್ಟ್‌ನಲ್ಲಿ ಅತೀ ಕಡಿಮೆ ಮಳೆ – ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದ ಹವಾಮಾನ ಇಲಾಖೆ

1901ರ ನಂತರ 2023ರ ಆಗಸ್ಟ್‌ನಲ್ಲಿ ಅತೀ ಕಡಿಮೆ ಮಳೆ – ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದ ಹವಾಮಾನ ಇಲಾಖೆ

ಈ ಬಾರಿ ಮಳೆರಾಯನ ಕಣ್ಣಾಮುಚ್ಚಾಲೆಯಾಟ ರೈತರಿಗೆ ಸಂಕಟವಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆಯಾಗುತ್ತದೆ ಎಂಬ ನಿರೀಕ್ಷೆ ರೈತರದ್ದು. ಈ ಬಾರಿ ಆಗಸ್ಟ್ ತಿಂಗಳಲ್ಲೂ ಮಳೆಯಾಗಿಲ್ಲ. ಇದರ ಮಧ್ಯೆ ಹವಾಮಾನ ಇಲಾಖೆ ಇನ್ನೊಂದು ವಿಚಾರ ಅಂಕಿ ಸಂಖ್ಯೆಗಳ ಮೂಲಕ ತೋರಿಸಿದೆ. ಈ ವರ್ಷ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿದ್ದ ಸರಾಸರಿ ಮಳೆಯು 1901ರ ನಂತರ ದಾಖಲಾಗಿರುವ ಮಳೆಯ ಪ್ರಮಾಣಕ್ಕಿಂತ ಅತೀ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ:ಸಿಲಿಕಾನ್‌ ಸಿಟಿಯಲ್ಲಿ ಮಳೆರಾಯನ ಅಬ್ಬರ, ಹಲವು ಏರಿಯಾ ಜಲಾವೃತ – ಸೆ.7ರವರೆಗೆ ಮಳೆ ಮುನ್ಸೂಚನೆ

2023ರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 16.27 ಸೆಂ.ಮೀಟರ್ ಮಳೆ ಸುರಿದಿದೆ. ಇದು ಸರಾಸರಿಗಿಂತ 36%ದಷ್ಟು ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಸರಾಸರಿ 25.4 ಸೆಂಟಿಮೀಟರ್ ಮಳೆ ಸುರಿಯುತ್ತದೆ. ಇದಕ್ಕಿಂತ ಮೊದಲು ಅಂದರೆ 2005ರಲ್ಲಿ ಇಡೀ ದೇಶದಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಈ ವರ್ಷ ದೇಶಾದ್ಯಂತ ಸರಾಸರಿ 19.12 ಮೀಟರ್ ಮಳೆ ಸುರಿದಿತ್ತು. ದೇಶದಲ್ಲಿ ಸುಮಾರು 36% ರಷ್ಟು ಜಿಲ್ಲೆಗಳು ಅಂದರೆ 263 ಜಿಲ್ಲೆಗಳಲ್ಲಿ ಸರಾಸರಿಗಿಂತ 20% ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಕಾಣಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಆಗಸ್ಟ್ ನಲ್ಲಿ ಬೀದರ್ ಜಿಲ್ಲೆಯಲ್ಲಿ ಗರಿಷ್ಠ 89%ರಷ್ಟು ಮಳೆ ಕೊರತೆಯಾಗಿದೆ. ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ 80% ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಅಭಾವವಾಗಿದೆ. ಕರಾವಳಿ ಭಾಗದಲ್ಲಿ 72% ರಷ್ಟು, ಮಲೆನಾಡಿನಲ್ಲಿ 80% ರಷ್ಟು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ 71% ರಷ್ಟು ಮಳೆ ಕೊರತೆಯಾಗಿದೆ.

ಬಿಹಾರ, ಪೂರ್ವ ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿದೆ. ಅದೇ ವೇಳೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿತ್ತು. ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ದಾಖಲಾದ ಸರಾಸರಿ 32.09 ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ 1901 ರ ಬಳಿಕದ ಗರಿಷ್ಠವಾಗಿದೆ. ಇದು ಸರಾಸರಿ 31.09 ಡಿಗ್ರಿ ಸೆಲ್ಸಿಯಸ್‌ಗಿಂತ ಒಂದು ಡಿಗ್ರಿಯಷ್ಟು ಹೆಚ್ಚಾಗಿದೆ.

suddiyaana