ಸಾವಲ್ಲೂ ಒಂದಾಗಬೇಕೆಂದು ಶಾಲು ಕಟ್ಟಿಕೊಂಡು ನದಿಗೆ ಹಾರಿದ ಪ್ರೇಮಿಗಳು!

ಸಾವಲ್ಲೂ ಒಂದಾಗಬೇಕೆಂದು ಶಾಲು ಕಟ್ಟಿಕೊಂಡು ನದಿಗೆ ಹಾರಿದ ಪ್ರೇಮಿಗಳು!

ಪ್ರೀತಿ ಕುರುಡು.. ಪ್ರೀತಿಗೆ ಕಣ್ಣಿಲ್ಲ. ಯಾರಿಗೆ ಯಾವಾಗ ಪ್ರೀತಿ ಹುಟ್ಟುತ್ತೆ ಅಂತ ಹೇಳೋಕೆ ಆಗಲ್ಲ. ಇದೀಗ ಇಲ್ಲೊಂದು ಜೋಡಿಯ ಪ್ರೀತಿ ಸಾವಲ್ಲಿ ಅಂತ್ಯ ಕಂಡಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವಕ, ಯುವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್‌ ಇದೆ ಎಂದು ಡಿವೈಡರ್‌ ಮೇಲೆ ಬೈಕ್‌ ಹತ್ತಿಸಿದ ಯುವಕರು! – 5 ನಿಮಿಷ ಉಳಿಸಲು ಈ ಹುಚ್ಚಾಟ ಬೇಕಾ? 

ಈ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಪ್ರೇಮಿಗಳಿಬ್ಬರು ಸತ್ತಾಗಲು ಒಂದಾಗಿರಬೇಕು ಎಂದು ಒಬ್ಬರಿಗೊಬ್ಬರು ಶಾಲು ಕಟ್ಟಿಕೊಂಡು ಮಲಪ್ರಭಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಮೃತರನ್ನು ಜಗದೀಶ ಕವಳೇಕರ ಹಾಗೂ ಗಂಗಮ್ಮಾ ತ್ಯಾಪಿ ಎಂದು ಗುರುತಿಸಲಾಗಿದೆ. ಇಬ್ಬರೂ ಮಲ್ಲಾಪೂರ ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಬೆಳಗಿನ ಜಾವ ನದಿಯ ದಡದಲ್ಲಿ ಇಬ್ಬರ ಶವಗಳು ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ರಾಮದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನದಿಯಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಯುವ ಜೋಡಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಇವರ ಪ್ರೀತಿಗೆ ಮನೆಯವರ ವಿರೋಧವಿತ್ತೇ ಅಥವಾ ಬೇರೆ ಏನಾದರೂ ಕಾರಣ ಇತ್ತಾ ಎಂದು ಪೊಲೀಸರು ಮೃತರ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ.

Shwetha M